ರಂಗೇರಿತು ಲೋಕ ಸಮರ ಕಣ ಬೀದರ್​​

ವಿಜಯವಾಣಿ ಸುದ್ದಿಜಾಲ ಬೀದರ್
ಬೀದರ್ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆ ಕಾವು ದಿನೇದಿನೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ 40 ಡಿಗ್ರಿ ಸೆಲ್ಸಿಯಸ್ ದಾಟಿದೆ. ಆದರೆ ಚುನಾವಣೆ ಬಿಸಿ ಇದಕ್ಕಿಂತ ಜಾಸ್ತಿಯೇ ತಟ್ಟುತ್ತಿದ್ದು, ಕಣ ರಂಗೇರಿದೆ.

ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಹಾಗೂ ಬಿಜೆಪಿ ಅಭ್ಯಥರ್ಿ ಭಗವಂತ ಖೂಬಾ ನಡುವೆ ಜಿದ್ದಿನ ಹಣಾಹಣಿ ಬಿದ್ದಿದ್ದು, ಪ್ರತಿ ನಿತ್ಯ ಕದನ ಕುತೂಹಲದತ್ತ ಸಾಗಿದೆ. ಹೇಗಾದರೂ ಸರಿ ಗೆಲ್ಲಲ್ಲೇಬೇಕೆಂಬ ನಿಟ್ಟಿನಲ್ಲಿ ಎರಡೂ ಪಕ್ಷದವರು ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದು, ಆರೋಪ-ಪ್ರತ್ಯಾರೋಪಗಳ ಸುರಿಮಳೆ ನಡೆದಿದೆ.

ಕೋಟೆಯಲ್ಲಿ ಮತ್ತೆ ಕಮಲ ಅರಳಿಸಲು ಬಿಜೆಪಿ ಹವಣಿಸುತ್ತಿದ್ದರೆ, ಕ್ಷೇತ್ರ ಕೈವಶಕ್ಕೆ ಕಾಂಗ್ರೆಸಿಗರು ಕಸರತ್ತು ನಡೆಸಿದ್ದಾರೆ. ಮತ್ತೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು. ದೇಶದ ಸುರಕ್ಷತೆಗಾಗಿ ಕಾಂಗ್ರೆಸ್ ಸೋಲಿಸಬೇಕಿದೆ. ಇದಕ್ಕಾಗಿ ಬಿಜೆಪಿಗೆ ಗೆಲ್ಲಿಸಲೇಬೇಕೆಂಬ ಅಸ್ತ್ರ ಕೇಸರಿ ಪಡೆ ಬಳಸುತ್ತಿದೆ. ಇನ್ನೊಂದೆಡೆ ಮೋದಿ ಏನೂ ಕೆಲಸ ಮಾಡಿಲ್ಲ. ಸುಳ್ಳು ಆಶ್ವಾಸನೆಗಳನ್ನು ಕೊಟ್ಟು ದೇಶದ ಜನರಿಗೆ ದಿಶಾಭೂಲ್ ಮಾಡುತ್ತಿದ್ದಾರೆ. ಜಾತಿ, ಧರ್ಮ ಹೆಸರಿನಲ್ಲಿ ಸಮಾಜ ಒಡೆಯುತ್ತಿರುವ ಬಿಜೆಪಿಯವರಿಗೆ ಮನೆಗೆ ಕಳಿಸಲು ಇದು ಸಕಾಲ ಎಂದು ಕೈ ನಾಯಕರು ಹೇಳುತ್ತಿದ್ದಾರೆ. ಇದರೊಂದಿಗೆ ಕ್ಷೇತ್ರಕ್ಕೇನು ಕೊಡುಗೆ ಎಂಬ ಬಗ್ಗೆ ಖೂಬಾ ಮತ್ತು ಖಂಡ್ರೆ ನಡುವೆ ವಾಕ್ಸಮರ ಆರಂಭವಾಗಿದೆ. ಇದು ಪರಸ್ಪರರ ನಡುವಿನ ಆರೋಪ-ಪ್ರತ್ಯಾರೋಪಗಳನ್ನು ಮತ್ತಷ್ಟು ತೀವ್ರಗೊಳಿಸಿದೆ.

ನಗರ, ಪಟ್ಟಣಗಳಲ್ಲದೆ ಅಭ್ಯರ್ಥಿಗಳು ಮತ್ತು ವಿವಿಧ ಪಕ್ಷದ ನಾಯಕರು ಗ್ರಾಮೀಣ ಭಾಗಗಳಿಗೂ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಪಾದಯಾತ್ರೆ, ರೋಡ್ ಶೋ, ಸಾರ್ವಜನಿಕ ಸಭೆ ಮಾಡುತ್ತಿದ್ದಾರೆ. ಮತದಾರರ ಮನವೊಲಿಕೆಗಾಗಿ ನಾನಾ ರೀತಿಯ ಪ್ರಯತ್ನಗಳಲ್ಲಿ ತೊಡಗಿದ್ದಾರೆ. ಖೂಬಾ ಅವರ ಪತ್ನಿ ಶೀಲಾವತಿ, ಖಂಡ್ರೆ ಅವರ ಪತ್ನಿ ಡಾ.ಗೀತಾ ಸಹ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಖಡಕ್ ಬಿಸಿಲಿನ ಪರಿತಾಪದಲ್ಲೇ ಮಹಿಳಾ ಟೀಮ್ನೊಂದಿಗೆ ವಿವಿಧೆಡೆ ಸುತ್ತಾಡಿ ಪತಿಯ ಗೆಲುವಿಗಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಇದೇ ಮೊದಲ ಬಾರಿ ಲೋಕಸಭಾ ಅಭ್ಯರ್ಥಿಗಳ ಪತ್ನಿಯರು ಇಷ್ಟೊಂದು ಗಂಭೀರವಾಗಿ ಪ್ರಚಾರದಲ್ಲಿ ತೊಡಗಿದ್ದು, ಮತದಾರರ ಗಮನ ಸೆಳೆದಿದೆ