ಎಚ್‌ಡಿಕೆ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ ಹೊರತು ಕಾಂಗ್ರೆಸ್‌ನಿಂದಲ್ಲ: ಕೃಷ್ಣ ಬೈರೆಗೌಡ

ಕಲಬುರಗಿ: ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆ ಆಡಳಿತ ನೀಡುವ ಜವಾಬ್ದಾರಿ ನಮ್ಮ ಮೇಲಿದೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ಹೊರತು ಕಾಂಗ್ರೆಸ್‌ನಿಂದ ತೊಂದರೆ ಆಗಿದೆ ಎಂದು ಕಣ್ಣೀರು ಹಾಕಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೆಗೌಡ ಹೇಳಿದ್ದಾರೆ.

ಕಲಬುರಗಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿ, ಕುಮಾರಸ್ವಾಮಿ ಅಳುತ್ತ ಕೂತಿಲ್ಲ. ಬದಲಿಗೆ ಕೆಲಸ ಮಾಡುವುದಕ್ಕೆ ಮುಂದಾಗಿದ್ದಾರೆ. ಅವರು ಕೂಡ ಮನುಷ್ಯರೇ. ಹಾಗಾಗಿ ಭಾವನಾತ್ಮಕವಾಗಿ ಕಣ್ಣೀರು ಬಂದಿದೆ. ರಾಜ್ಯದ ಪರವಾಗಿ ಕುಮಾರಸ್ವಾಮಿ ದೆಹಲಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ವಿಪಕ್ಷಗಳು ಆರೋಪ ಮಾಡುವುದಕ್ಕೆ ಮಾತ್ರ ಸಿಮೀತವಾಗಿದ್ದಾರೆ. ನಮ್ಮ ಕೆಲಸದ ಮೂಲಕ ಅವರ ಪ್ರಶ್ನೆಗೆ ಉತ್ತರ ಕೊಡಲು ಮುಂದಾಗಿದ್ದೇವೆ ಎಂದು ಹೇಳಿದರು.

ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಕಾರಣ ಎಂದು ಹೇಳಿಲ್ಲ. ಕುಮಾರಸ್ವಾಮಿಗೆ ನಿರೀಕ್ಷಿತ ಮಟ್ಟದಲ್ಲಿ ಜನರು ಮತ ಹಾಕಿ ಆಯ್ಕೆ ಮಾಡದಿರುವ ಹಿನ್ನೆಲೆಯಲ್ಲಿ ಭಾವನಾತ್ಮಕವಾಗಿ ಕಣ್ಣೀರು ಹಾಕಿದ್ದಾರೆ. ವಿರೋಧ ಪಕ್ಷದವರು, ಮಾಧ್ಯಮದವರು ಸೇರಿ ಬೆಂಕಿಗೆ ತುಪ್ಪ ಹಾಕುವಂತಹ ಕೆಲಸ ಮಾಡಿದ್ದಾರೆ. ಹಳೆ ಬಜೆಟನ್ನೇ ಪೂರಕವಾಗಿ ಮಂಡಿಸಿದ್ದಾರೆ. ನಾವು ಯಾರಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು.

ನಾನು ಅನೇಕ ಬಾರಿ ಕಲಬುರಗಿಯ ಅನೇಕ ತಾಲೂಕುಗಳಿಗೆ ಬಂದು ಹೋಗಿದ್ದೇನೆ. ಮಾಧ್ಯಮದವರಿಗೆ ಹಿಟ್ ಆಂಡ್ ರನ್ ಮಾಡುವುದು ಅಭ್ಯಾಸವಾಗಿದೆ. ಕೆಲಸ ಮಾಡಿದವರ ಬಗ್ಗೆ ಹಗುರವಾಗಿ ಮಾತನಾಡುವಂತಹ ಕೆಲಸಕ್ಕೆ ಮುಂದಾಗಬೇಡಿ ಎಂದು ಹೇಳಿದರು.