ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ವಶಪಡಿಸಿಕೊಂಡ ಮದ್ಯ, ವಾಹನ,ಅಕ್ಕಿ ಒಟ್ಟು ಮೌಲ್ಯ 2 ಕೋಟಿ ರೂ.!

ಉಡುಪಿ: ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಇದುವರೆಗೆ ಒಟ್ಟು 14 ಪ್ರಕರಣಗಳಲ್ಲಿ 24,59,290 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ 23,50,290 ರೂ.ಗಳನ್ನು ಸಮರ್ಪಕ ದಾಖಲೆ ಪಡೆದು ಬಿಡುಗಡೆಗೊಳಿಸಲಾಗಿದೆ.

ಅಬಕಾರಿ ಇಲಾಖೆ 15845.03 ಲೀ. ಮದ್ಯ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 64,39,144 ರೂ. ಆಗಿದೆ. 3 ಟ್ರಕ್, 3 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ, 30 ಟನ್ ಅಕ್ಕಿ ಸೇರಿದಂತೆ ಒಟ್ಟು ಎಲ್ಲ ಪ್ರಕರಣಗಳ ಮೊತ್ತ 1,99,97,185 ರೂ. ಆಗಿದೆ. ಪೊಲೀಸ್ ಇಲಾಖೆ 6107 ರೂ. ಮೊತ್ತದ 11.7 ಲೀ ಮದ್ಯ ವಶಪಡಿಸಿಕೊಂಡಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತಂತೆ 153 ದೂರು ಸ್ವೀಕರಿಸಿದ್ದು, 146 ವಿಲೇಯಾಗಿದೆ, 7 ಬಾಕಿ ಇದೆ. ಸುವಿಧಾ ಏಕಗವಾಕ್ಷಿ ಅನುಮತಿ ವ್ಯವಸ್ಥೆ ಮೂಲಕ ವಿವಿಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಒಟ್ಟು 168 ಅರ್ಜಿ ಸ್ವೀಕರಿಸಿದ್ದು, 145 ಅರ್ಜಿಗೆ ಅನುಮತಿ ನೀಡಲಾಗಿದೆ, 17 ತಿರಸ್ಕೃತವಾಗಿದೆ, 6 ಅನುಮತಿಗೆ ಬಾಕಿ ಇದೆ. ವಾಹನ ಅನುಮತಿಗಾಗಿ 38 ಅರ್ಜಿ ಸ್ವೀಕರಿಸಿದ್ದು, ಇದರಲ್ಲಿ 35ಕ್ಕೆ ಅನುಮತಿ ನೀಡಲಾಗಿದೆ. 2 ತಿರಸ್ಕೃತ ಮತ್ತು 1 ಅನುಮತಿಗೆ ಬಾಕಿ ಇದೆ.

ಸಿವಿಜಿಲ್ ಆ್ಯಪ್ ಮೂಲಕ 168 ದೂರು ಸ್ವೀಕರಿಸಿದ್ದು, ಇವುಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ. 39 ಡಮ್ಮಿ ಕೇಸ್ ಆಗಿದ್ದು, 130 ಸರಿಯಾದ ಪ್ರಕರಣಗಳಲ್ಲಿ 118 ಪ್ರಕರಣಗಳನ್ನು 100 ನಿಮಿಷಗಳ ಒಳಗೆ ವಿಲೇವಾರಿ ಮಾಡಿದೆ.

ಜಿಲ್ಲೆಯಲ್ಲಿ 8154 ಅಂಗವಿಕಲ ಮತದಾರರನ್ನು ಗುರುತಿಸಲಾಗಿದ್ದು, ಅವರಿಗಾಗಿ ಮತಗಟ್ಟೆಯಲ್ಲಿ ಸಹಾಯ ಕೇಂದ್ರ, ಶೌಚಗೃಹ, ವೀಲ್‌ಚೇರ್ ವ್ಯವಸ್ಥೆ, ವಾಹನ ಪಾರ್ಕಿಂಗ್, ಮ್ಯಾಗ್ನಿಪೈಡ್ ಗ್ಲಾಸ್, ಆದ್ಯತೆ ಮೇಲೆ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಹಿರಿಯ ನಾಗರಿಕರಿಗೆ ಸಹ ಎಲ್ಲ ರೀತಿಯ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.

ಮತದಾರರ ಸಹಾಯವಾಣಿ 1950 ಮೂಲಕ 1462 ಕರೆಗಳನ್ನು ಸ್ವೀಕರಿಸಿದ್ದು, ಅಗತ್ಯ ಮಾಹಿತಿ ಮತ್ತು ಸಹಾಯ ನೀಡಲಾಗಿದೆ.

ಮತಯಂತ್ರದಲ್ಲಿ ಅಭ್ಯರ್ಥಿಗಳ ಹೆಸರು ಸೇರ್ಪಡೆ ಕಾರ್ಯ ಮುಕ್ತಾಯಗೊಂಡಿದ್ದು, ಹೆಸರು ಸೇರ್ಪಡೆ ಸದ್ರಿ ಮತಯಂತ್ರಗಳ ಕಾರ್ಯ ವೈಖರಿಯನ್ನು ಪರೀಕ್ಷಿಸಿ, ಖಚಿತಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿನ 865 ಮತಗಟ್ಟೆಗಳನ್ನು ಸಂಬಂಧಪಟ್ಟ ಸಹಾಯಕ ಚುನಾವಣಾಧಿಕಾರಿ, ಸೆಕ್ಟರ್ ಅಧಿಕಾರಿ, ತಹಸೀಲ್ದಾರ್ ಅವರಿಂದ ಪರಿಶೀಲನೆ ನಡೆಸಿ, ಅಗತ್ಯವಿರುವ ಎಲ್ಲ ಮೂಲಸೌಲಭ್ಯಗಳನ್ನು, ಚುನಾವಣಾ ಆಯೋಗದ ನಿರ್ದೇಶನದಂತೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಹೆಜಮಾಡಿಯಲ್ಲಿ 1.09 ಲಕ್ಷ ರೂ. ಜಪ್ತಿ
ಶಿರ್ವ/ಪಡುಬಿದ್ರಿ: ಕೇರಳದ ಅಲೆಪ್ಪಿಯಿಂದ ಮಂಗಳೂರು ಮೂಲಕ ಉಡುಪಿ ಕಡೆ ಹೋಗುತ್ತಿದ್ದ ಟಾಟಾ 407 ವಾಹನದಲ್ಲಿ ಚಾಲಕನ ಪಕ್ಕದ ಸೀಟ್‌ನಲ್ಲಿದ್ದ ಯಾವುದೇ ದಾಖಲೆಗಳಿಲ್ಲದ 1.09 ಲಕ್ಷ ರೂ. ನಗದನ್ನು ಹೆಜಮಾಡಿ ಚೆಕ್‌ಪೋಸ್ಟ್‌ನಲ್ಲಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಚಿಕ್ಕಮಗಳೂರಿನ ತಲಗೂರಿನ ಇಸಾಕ್ ಎಂಬುವರು ವಾಹನ ಚಲಾಯಿಸುತ್ತಿದ್ದರು. ಎಸ್‌ಎಸ್‌ಟಿ ಅಧಿಕಾರಿ, ಶಿರ್ವ ಪಿಡಿಒ ಅನಂತ ಪದ್ಮನಾಭ ಹಣ ವಶಪಡಿಸಿಕೊಂಡಿದ್ದು, ಕಾರ್ಯಾಚರಣೆಯಲ್ಲಿ ಉಡುಪಿ ಡಿಎಆರ್ ಎಎಸ್‌ಐ ರಾಜೇಶ್ ಬಲ್ಲಾಡಿ, ಕಾಪು ಪಿಸಿ ಚಂದ್ರಶೇಖರ್‌ಎಸ್.ಕಿತ್ತೂರು, ಅರಣ್ಯ ರಕ್ಷಕ ಜಯರಾಮ್ ಶೆಟ್ಟಿ ಪಾಲ್ಗೊಂಡಿದ್ದರು.

2,000, 500, 200, 100ರ ನೋಟುಗಳಲ್ಲಿ ಪತ್ತೆಯಾದ ಹಣವನ್ನು ಕಾಪು ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಡಾ.ನಾಗರಾಜ್ ಅವರು ಖಜಾನೆಗೆ ಜಮೆ ಮಾಡಿದ್ದಾರೆ. ಈ ಮೊತ್ತವನ್ನು ಜಿಲ್ಲಾ ಖಜಾನೆಯಲ್ಲಿ ಜಮೆ ಮಾಡಲಾಗಿದ್ದು, ಸೂಕ್ತ ದಾಖಲೆ ಪತ್ರವನ್ನು ಒಂದು ವಾರದೊಳಗೆ ಹಾಜರುಪಡಿಸಿ ನಗದನ್ನು ಪಡೆಯಬಹುದು. 50 ಸಾವಿರ ರೂ.ಗಿಂತ ಹೆಚ್ಚಿನ ಮೊತ್ತವನ್ನು ಕೊಂಡೊಯ್ಯುವಾಗ ಸಮರ್ಪಕ ದಾಖಲೆ ಪತ್ರ ಇಟ್ಟುಕೊಳ್ಳಬೇಕು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *