ತೈಲಾಘಾತಕ್ಕೆ ಜನರ ಬದುಕು ತುಟ್ಟಿ

<< 72ರ ಸನಿಹಕ್ಕೆ ಕುಸಿದ ರೂಪಾಯಿ, ಇಂಧನ ಹೆಚ್ಚಳ, ಪ್ರಯಾಣವೂ ತ್ರಾಸ >>

ಪಮೌಲ್ಯದಲ್ಲಿ ನಿರಂತರ ದಾಖಲೆ ಬರೆಯುತ್ತಿರುವ ರೂಪಾಯಿ ಮಂಗಳವಾರವೂ ಐತಿಹಾಸಿಕ ಪತನ ಕಂಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಳದಿಂದಾಗಿ ರೂಪಾಯಿ ಮೌಲ್ಯ ಡಾಲರ್ ಎದುರು ಸಾರ್ವಕಾಲಿಕ 71.58 ರೂ.ಗೆ ಕುಸಿದಿದೆ. ನಿರೀಕ್ಷೆಯಂತೆ ಇದರ ಪರಿಣಾಮ ತೈಲಕ್ಕೆ ತಟ್ಟಿದ್ದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರಿದೆ. ಇತ್ತ ರಾಜ್ಯದ ಸಾರಿಗೆ ನಿಗಮಕ್ಕೂ ತೈಲ ಬಿಸಿ ಕಾಡಿದ್ದು, ಪ್ರಯಾಣ ದರವನ್ನು ಶೇ.18 ಹೆಚ್ಚಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಉಚಿತ ಪಾಸ್ ಇಲ್ಲ: ವಿದ್ಯಾರ್ಥಿಗಳಿಗೆ ಉಚಿತ ಬಸ್​ಪಾಸ್ ನೀಡುವ ಯೋಜನೆ ಈ ವರ್ಷ ಜಾರಿಯಾಗುವುದು ಬಹುತೇಕ ಅನುಮಾನವಾಗಿದೆ. ಎಸ್​ಸಿಎಸ್​ಪಿ ಟಿಎಸ್​ಪಿ ಹಣವನ್ನು ಬಳಸಿಕೊಂಡು ಶೇ.25 ಹಣ ನೀಡಲು ಸಮಾಜ ಕಲ್ಯಾಣ ಇಲಾಖೆ ಸಚಿವರು ಒಪ್ಪಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ರಿಯಾಯಿತಿ ಬಸ್ ಪಾಸ್ ಪಡೆದಿರುವ ಕಾರಣ ಈ ವರ್ಷ ಪೂರ್ಣ ಜಾರಿ ಅನುಮಾನ. ಮುಂದಿನ ವರ್ಷದಿಂದ ಜಾರಿಯಾಗುತ್ತದೆ ಎಂದು ಸಚಿವ ತಮ್ಮಣ್ಣ ತಿಳಿಸಿದರು.

10 ರೂ. ಇಳಿದರೆ ಹೊರೆ ತಗ್ಗಲಿದೆ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 4 ನಿಗಮಗಳ ಅಭಿಪ್ರಾಯದ ಪ್ರಕಾರ ಡೀಸೆಲ್ ಬೆಲೆ ಕನಿಷ್ಠ 10 ರೂ. ಇಳಿದರಷ್ಟೇ ನಿಗಮಕ್ಕೆ ಹೊರೆ ತಗ್ಗಲಿದೆ. 2016-17ರಲ್ಲಿ 177 ಕೋಟಿ ರೂ.ನಷ್ಟದಲ್ಲಿದ್ದ ಕೆಎಸ್​ಆರ್​ಟಿಸಿ, 2017-18ರಲ್ಲಿ 15 ಕೋಟಿ ರೂ.ವರೆಗೆ ಲಾಭದಲ್ಲಿತ್ತು. ಆದರೆ ಡೀಸೆಲ್ ದರ ಏರಿಕೆ, ವೇತನ ಹೆಚ್ಚಳ ಇನ್ನಿತರ ಕಾರಣಗಳಿಂದ 2018-19ನೇ ಸಾಲಿನಲ್ಲಿ ನಿಗಮ ಮತ್ತೆ ನಷ್ಟದತ್ತ ಮುಖ ಮಾಡಿದೆ.

ಬಿಎಂಟಿಸಿಯೂ ನಷ್ಟದಲ್ಲಿ!: 2015-16ನೇ ಸಾಲಿನಲ್ಲಿ 13.73 ಕೋಟಿ ರೂ. ಲಾಭದಲ್ಲಿದ್ದ ಬಿಎಂಟಿಸಿ, 2016-17ರಲ್ಲಿ 260 ಕೋಟಿ ರೂ., 2017-18ರಲ್ಲೂ ನೂರು ಕೋಟಿ ರೂ.ಗೂ ಹೆಚ್ಚಿನ ನಷ್ಟ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ 2017ರ ಏಪ್ರಿಲ್​ನಲ್ಲಿ ಬಿಎಂಟಿಸಿ ಬಸ್ ಪ್ರಯಾಣ ದರ ಪರಿಷ್ಕರಿಸಲಾಗಿತ್ತು.

ನಿಲ್ಲದ ತೈಲ ಸ್ಫೋಟ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಏರಿರುವ ಹಿನ್ನೆಲೆಯಲ್ಲಿ ಭಾರತದಲ್ಲೂ ತೈಲ ಮತ್ತಷ್ಟು ತುಟ್ಟಿಯಾಗಿದೆ. ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ 16 ಹಾಗೂ ಡೀಸೆಲ್ ದರದಲ್ಲಿ 19 ಪೈಸೆ ಹೆಚ್ಚಳ ಆಗಿದೆ. ಇದರಿಂದಾಗಿ ರಾಜ್ಯದಲ್ಲಿ ಪೆಟ್ರೋಲ್ 81.98 ರೂ. ಹಾಗೂ ಡೀಸೆಲ್ ಬೆಲೆ 73.72 ರೂ.ಗೆ ಏರಿದೆ. ಕಚ್ಚಾತೈಲ ಭವಿಷ್ಯದಲ್ಲಿ ಮತ್ತಷ್ಟು ತುಟ್ಟಿಯಾಗುವ ಸುಳಿವು ಸಿಕ್ಕಿರುವುದರಿಂದ ದೇಶದಲ್ಲಿ ತೈಲ ಬೆಲೆ ಕೆಲವೇ ತಿಂಗಳಲ್ಲಿ 100 ರೂ.ಗಡಿ ದಾಟಿದರೂ ಅಚ್ಚರಿ ಇಲ್ಲ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಈ ನಡುವೆ, ತೈಲದ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ.

ಸಾರಿಗೆ ಪ್ರಯಾಣ ದರ ಏರಿಕೆ ಖಚಿತ

ಸತತವಾಗಿ ಡೀಸೆಲ್ ಬೆಲೆ ಏರುತ್ತಿರುವುದರಿಂದಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಇಲಾಖೆ ಅಧೀನದ ಮೂರು ನಿಗಮಗಳಿಗೆ ಮೂರು ತಿಂಗಳಲ್ಲಿ ಸುಮಾರು 186 ಕೋಟಿ ರೂ. ನಷ್ಟವಾಗಿದೆ. ಶೇ.18 ಟಿಕೆಟ್ ದರ ಹೆಚ್ಚಳಕ್ಕೆ ಮೂರು ತಿಂಗಳ ಹಿಂದೆಯೇ ನಿಗಮಗಳು ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಯಾಣಿಕರಿಗೆ ಹೊರೆಯಾಗದಂತೆ, ನಿಗಮಗಳಿಗೂ ನಷ್ಟವಾಗದಂತೆ ದರ ಹೆಚ್ಚಳ ನಿರ್ಧಾರವನ್ನು ಶೀಘ್ರ ತೆಗೆದುಕೊಳ್ಳುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಲಿನ ದರವೂ ಹೆಚ್ಚಳ?

ಬೆಂಗಳೂರು: ಹಾಲು ಉತ್ಪಾದಕರಿಗೆ ಹೆಚ್ಚುವರಿ ಪ್ರೋತ್ಸಾಹಧನ ನೀಡುವುದು ಮುಂತಾದ ಕಾರಣಗಳನ್ನು ಮುಂದಿಟ್ಟುಕೊಂಡು 2017ರಲ್ಲಿ ಪ್ರತಿ ಲೀಟರ್ ಹಾಲಿನ ದರವನ್ನು 2 ರೂ.ಏರಿಕೆ ಮಾಡಿದ್ದ ಕರ್ನಾಟಕ ಹಾಲು ಒಕ್ಕೂಟ, ಇದೀಗ ಮತ್ತೆ 2 ರೂ. ಹೆಚ್ಚಳಕ್ಕೆ ಸಿದ್ಧತೆ ನಡೆಸಿದೆ. ಆದರೆ ಸದ್ಯ ಹಾಲಿನ ಬೆಲೆ ಏರಿಕೆ ಸಾಧ್ಯತೆಯನ್ನು ಸರ್ಕಾರ ತಳ್ಳಿಹಾಕಿದೆ.

ಜಾನುವಾರು ಪರಿಹಾರ!: ನೆರೆ ಹಾವಳಿಯಲ್ಲಿ ಎಷ್ಟು ಸಂಖ್ಯೆಯ ಜಾನುವಾರುಗಳು ಮೃತಪಟ್ಟಿವೆ ಎಂಬ ಬಗ್ಗೆ ಕೊಡಗು ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದೇವೆ. ಸದ್ಯ ಒಂದು ಜಾನುವಾರು ಸಾವನ್ನಪ್ಪಿದರೆ ಸರ್ಕಾರ 10 ಸಾವಿರ ಸರ್ಕಾರ ಪರಿಹಾರ ನೀಡುತ್ತದೆ, ಕೊಡಗು ಪ್ರಕರಣ ವಿಶೇಷವಾದ್ದರಿಂದ ಸಿಎಂ ಜತೆ ರ್ಚಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಜಾನುವಾರು ಸಾವಿನ ಪರಿಹಾರ ನೀಡಬೇಕೇ ಅಥವಾ ಪಶುಗಳನ್ನೇ ನೀಡಬೇಕೇ ಎಂಬ ಬಗ್ಗೆ ರ್ಚಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಪಶುಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.

ಹಾಲಿನ ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಸರ್ಕಾರ ಈ ಕುರಿತು ಆಲೋಚನೆಯನ್ನೂ ಮಾಡಿಲ್ಲ.

| ವೆಂಕಟರಾವ್ ನಾಡಗೌಡ, ಪಶುಸಂಗೋಪನೆ ಸಚಿವ


ತೈಲ ಗಗನಕ್ಕೆ ರೂಪಾಯಿ ಪಾತಾಳಕ್ಕೆ

 

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಮಂಗಳವಾರವೂ ಮುಂದುವರಿದಿದ್ದು, 37 ಪೈಸೆ ಇಳಿಕೆಯೊಂದಿಗೆ 71.58 ರೂ. ದಾಖಲಾಗಿದೆ. ದಿನದ ವಹಿವಾಟು 71.28 ರೂ.ಗೆ ಆರಂಭಗೊಂಡಿತು. ಮಧ್ಯಂತರ ವಹಿವಾಟಿ ನಲ್ಲಿ ಸಾರ್ವಕಾಲಿಕ ದಾಖಲೆ 71.596 ರೂ. ತಲುಪಿತ್ತು. ಸೋಮವಾರ ಕೂಡ ಸಾರ್ವಕಾಲಿಕ ದಾಖಲೆ ಕುಸಿತ ಕಂಡಿದ್ದ ರೂಪಾಯಿ 71.21 ರೂ. ತಲುಪಿತ್ತು.

ಪೆಟ್ರೋಲ್, ಡೀಸೆಲ್ ಕೂಡ ತುಟ್ಟಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತ ಏರಿಕೆ ಕಾಣುತ್ತಿದೆ. ಬ್ರೆಂಟ್ ಕ್ರೂಡ್ ಆಯಿಲ್ ಪ್ರತಿ ಬ್ಯಾರೆಲ್​ಗೆ 78.05 ಡಾಲರ್ ತಲುಪಿದೆ. ಪರಿಣಾಮ ಕಳೆದ 10 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಏರುಗತಿಯಲ್ಲಿದೆ. ಮಂಗಳವಾರ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ದಾಖಲೆ 86.72 ರೂ. ಪ್ರತಿ ಲೀಟರ್ ತಲುಪಿತ್ತು. ಡೀಸೆಲ್ ದರ ಪ್ರತಿ ಲೀಟರ್ 75.74ರೂ. ದಾಖಲಾಗಿದೆ. ಆಗಸ್ಟ್ 16ರಿಂದ ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್​ಗೆ ಒಟ್ಟು 2 ರೂ. ಹೆಚ್ಚಳವಾಗಿದೆ.

ವಿತ್ತೀಯ ಕೊರತೆ ಚಿಂತೆ

ಒಂದೆಡೆ ದಾಖಲೆ ಏರಿಕೆ ಕಾಣುತ್ತಿರುವ ಇಂಧನ (ಪೆಟ್ರೋಲ್, ಡೀಸೆಲ್) ದರ , ಮತ್ತೊಂದೆಡೆ ಡಾಲರ್ ಎದುರು ಪಾತಾಳಕ್ಕೆ ಕುಸಿಯುತ್ತಿರುವ ರೂಪಾಯಿ ಮೌಲ್ಯದಿಂದಾಗಿ ದೇಶದ ಆರ್ಥಿಕತೆಗೆ ಪೆಟ್ಟು ಬೀಳುತ್ತಿರುವುದು ವಾಸ್ತವದ ಸಂಗತಿ. ಆಮದು ವಸ್ತುಗಳಿಗೆ ಡಾಲರ್ ಮೌಲ್ಯಕ್ಕೆ ಪಾವತಿ ಮಾಡುವ ಹೊರೆ ಸರ್ಕಾರದ ಬೊಕ್ಕಸದ ಮೇಲಾಗುತ್ತಿದೆ. ಇದರಿಂದಾಗಿ ಚಾಲ್ತಿ ವಿತ್ತೀಯ ಕೊರತೆ ಪ್ರಮಾಣ ವಿಸ್ತಾರಗೊಳ್ಳುತ್ತಿದೆ.ಹಣದುಬ್ಬರ ಕೂಡ ಹೆಚ್ಚಳವಾದರೆ ಆಶ್ಚರ್ಯವಿಲ್ಲ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಒಂದೇ ತಿಂಗಳಲ್ಲಿ ಶೇ. 4 ಕುಸಿತ!

ಕಳೆದ ತಿಂಗಳು -ಠಿ;68.50ರವರೆಗೆ ಡಾಲರ್ ಎದುರು ಬಲವರ್ಧನೆಗೊಂಡಿದ್ದ ರೂಪಾಯಿ, ಆಗಸ್ಟ್ ತಿಂಗಳೊಂದ ರಲ್ಲಿಯೇ ಶೇ. 4 ತೀವ್ರ ಕುಸಿತ ಕಂಡಿತು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತ ಏರಿಕೆ, ರೂಪಾಯಿ ಮೌಲ್ಯ ಕಳೆದುಕೊಳ್ಳಲು ಪ್ರಮುಖ ಕಾರಣವಾಗಿದೆ. ಅದರೊಂದಿಗೆ, ಅಮೆರಿಕ-ಚೀನಾ ವಾಣಿಜ್ಯ ಸಮರ, ಟರ್ಕಿಯಲ್ಲಿ ಹಣಕಾಸು ಮುಗ್ಗಟ್ಟು ಏರುಗತಿಯಲ್ಲಿದ್ದ ಇತರ ಜಾಗತಿಕ ಕರೆನ್ಸಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು.

ಕಚ್ಚಾ ತೈಲ ಬೆಲೆ ಏರಿಕೆ ಏಕೆ?

ಮಿತ್ರರಾಷ್ಟ್ರಗಳ ಮೇಲೆ ಇರಾನ್​ನಿಂದ ತೈಲ ಖರೀದಿಗೆ ನಿರ್ಬಂಧ ಹೇರುವಂತೆ ಅಮೆರಿಕ ಹಾಕುತ್ತಿರುವ ಒತ್ತಡ ತೈಲ ಪೂರೈಕೆದಾರರಲ್ಲಿ ಆತಂಕದ ವಾತಾವರಣ ಮೂಡಿಸಿದೆ. ಕಳೆದ ಮೇನಲ್ಲಿ ಪ್ರತಿ ಬ್ಯಾರೆಲ್​ಗೆ 80 ಡಾಲರ್ ಇದ್ದಾಗ, ವಿಯೆನ್ನಾದಲ್ಲಿ ತೈಲ ಪೂರೈಕೆ ರಾಷ್ಟ್ರಗಳು ಸಭೆ ನಡೆಸಿ ತೈಲ ಉತ್ಪಾದನೆ ಹೆಚ್ಚಳ ಮಾಡುವ ನಿರ್ಧಾರ ಕೈಗೊಂಡವು. ಪರಿಣಾಮ ಜೂನ್​ನಿಂದ ಆಗಸ್ಟ್​ವರೆಗೆ ಪ್ರತಿ ಬ್ಯಾರೆಲ್ ಬೆಲೆ 70-75 ಡಾಲರ್ ನಡುವೆ ಉಳಿಯಿತು. ಆದರೆ ಕಳೆದ ಎರಡು ವಾರದಿಂದ ಪ್ರತಿ ಬ್ಯಾರೆಲ್ ಬೆಲೆ 78.12 ಡಾಲರ್ ಮೀರುವ ಲಕ್ಷಣಗಳೇ ಗೋಚರಿಸುತ್ತಿವೆ.

8 ತಿಂಗಳಲ್ಲಿ 11% ಕುಸಿತ

ವರ್ಷಾರಂಭದಿಂದಲೂ ರೂಪಾಯಿ ಮೌಲ್ಯ ಶೇ. 11 ಕುಸಿತ ಕಂಡಿದೆ. ಕಳೆದ ಒಂದು ತಿಂಗಳಲ್ಲಿ ಕುಸಿತ ತೀವ್ರವಾಗಿದ್ದು, ರೂಪಾಯಿ ಶೇ. 4 ಮೌಲ್ಯ ಕಳೆದುಕೊಂಡಿದೆ.

ಇತಿಹಾಸದಲ್ಲೇ ಮೊದಲ ಬಾರಿಗೆ ರೂಪಾಯಿ ಮೌಲ್ಯ ಈ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ವಿವಿಧ ಯೋಜನೆ ಘೊಷಿಸುವುದನ್ನು ಬಿಟ್ಟು ಯೋಜನೆಗಳ ಸಾಧಕ -ಬಾಧಕಗಳನ್ನು ಕುರಿತು ಸಮಾಲೋಚನೆ ನಡೆಸಬೇಕಿತ್ತು. ಪೆಟ್ರೋಲ್, ಡೀಸೆಲ್ ಬೆಲೆ ಪ್ರತಿದಿನ ಏರಿಕೆಯಾಗಿ ಜನಸಾಮಾನ್ಯರ ಮೇಲೆ ಹೊರೆ ಬೀಳುತ್ತಿದೆ. ಪ್ರಧಾನಿ ಹತ್ಯೆಗೆ ನಡೆದಿದೆ ಎನ್ನಲಾದ ಸಂಚಿನ ಕುರಿತು ನಾನೇನೂ ಮಾತನಾಡುವುದಿಲ್ಲ.

| ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

 

ಸುಂಕ ಕಡಿತ ಸದ್ಯಕ್ಕಿಲ್ಲ

ಡಾಲರ್ ಎದುರು ರೂಪಾಯಿ ಮೌಲ್ಯ ಅಧಿಕ ಕುಸಿಯುತ್ತಿರುವುದರಿಂದ ಚಾಲ್ತಿ ವಿತ್ತೀಯ ಕೊರತೆ ನಿರೀಕ್ಷೆ ಮೀರುವ ಆತಂಕದಲ್ಲಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಕಡಿತ ಮಾಡಲಾಗುವುದಿಲ್ಲ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೆಟ್ರೋಲ್ ದರ ಪ್ರತಿ ಲೀಟರ್​ಗೆ ₹ 48ಕ್ಕಿಂತ ಹೆಚ್ಚು ಇರಕೂಡದು. ಅದಕ್ಕಿಂತ ಹೆಚ್ಚಿನದೆಲ್ಲ ಸಾರ್ವಜನಿಕರ ಶೋಷಣೆಗೆ ಸಮನಾದದ್ದು.

| ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

 

2012ರ ಪರಿಹಾರ ಈಗ ಸಾಧ್ಯವೇ?

2012-13ನೇ ಹಣಕಾಸು ವರ್ಷದಲ್ಲಿ ಚಾಲ್ತಿ ವಿತ್ತೀಯ ಕೊರತೆ (ಸಿಎಡಿ) ಶೇ. 4.7ಕ್ಕೆ ಮುಟ್ಟಿತ್ತು. ಆರ್ಥಿಕತೆಗೆ ಪೆಟ್ಟು ಬೀಳುವುದನ್ನು ತಡೆಯಲು ಕೇಂದ್ರ ಸರ್ಕಾರ ಚಿನ್ನ ಆಮದು ಮೇಲೆ ನಿರ್ಬಂಧ ಹೇರಿತ್ತು. ಜತೆಗೆ ವಿದೇಶಿ ಕರೆನ್ಸಿಗಳ ಠೇವಣಿಗಳ ಹೆಚ್ಚಳಕ್ಕೂ ಸರ್ಕಾರ ಮಿತಿ ಹೇರಿತ್ತು. ರೂಪಾಯಿ ಮೌಲ್ಯ ಕುಸಿತದ ಜತೆಗೆ ಇಂಧನ ದರಗಳ ದಾಖಲೆ ಏರಿಕೆ ಹೀಗೆ ಮುಂದುವರಿದಲ್ಲಿ ಕರೆನ್ಸಿ ಸ್ಥಿರತೆ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಎನ್​ಆರ್​ಐ ಬಾಂಡ್​ಗಳನ್ನು ಬಿಡುಗಡೆ ಮಾಡಿ ಹಣ ಸಂಗ್ರಹಿಸುವುದು ಅನಿವಾರ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.