ರೂಪಾಯಿ ಕುಣಿತ, ಹೆಚ್ಚಿದ ಆತಂಕ

ಕಳೆದೊಂದು ತಿಂಗಳಿನಿಂದ ಬಿಟ್ಟೂ ಬಿಡದೆ ಕಂಪಿಸುತ್ತಿರುವ ಅಮೆರಿಕದ ಡಾಲರ್ ಆಧಾರಿತ ಭಾರತದ ಆರ್ಥಿಕತೆ ಗುರುವಾರ ವೈಪರೀತ್ಯದ ತುದಿ ಮುಟ್ಟಿದೆ. ಪತನದ ಹಾದಿಯಲ್ಲಿ ದಿನಕ್ಕೊಂದು ದಾಖಲೆಯ ಮೈಲಿಗಲ್ಲು ನೆಡುತ್ತಿರುವ ರೂಪಾಯಿ ಮೌಲ್ಯ 74 ರೂ. ಸನಿಹಕ್ಕೆ ಬಂದು ನಿಂತರೆ ಇದರ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲೂ ತಲ್ಲಣ ಉಂಟಾಗಿದೆ. ಈ ಎರಡು ಆಘಾತಗಳ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 1.50 ರೂ. ಸೇರಿ ಬೆಲೆಯಲ್ಲಿ 2.50ರೂ. ಇಳಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರ ಮೇಲಿನ ಹೊರೆಯನ್ನು ಕೊಂಚ ತಗ್ಗಿಸಿದೆ.

74ರ ಸನಿಹಕ್ಕೆ ರೂಪಾಯಿ

ನವದೆಹಲಿ: ಅಮೆರಿಕ ಡಾಲರ್​ಗೆ ಹೆಚ್ಚುತ್ತಿರುವ ಬೇಡಿಕೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯ ನಿರಂತರ ಏರಿಕೆಯಿಂದ ವಿತ್ತೀಯ ಕೊರತೆ ಹೆಚ್ಚಳವಾಗುವ ಭೀತಿಯಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಗುರುವಾರ ಕೂಡ ಪತನ ಕಂಡಿತು. ದಿನದ ವಹಿವಾಟಿನಲ್ಲಿ 24 ಪೈಸೆ ಕುಸಿತದೊಂದಿಗೆ 73.58 ರೂ. ತಲುಪಿದ್ದ ರೂಪಾಯಿ ಮಧ್ಯಂತರ ವಹಿವಾಟಿನಲ್ಲಿ 73.81 ರೂ.ತಲುಪಿತ್ತು. ಬಳಿಕ ಚೇತರಿಸಿಕೊಂಡು 73.58ಕ್ಕೆ ಬಂತು. ಕಳೆದ ನಾಲ್ಕು ದಿನಗಳಿಂದ ರೂಪಾಯಿ ಒಟ್ಟಾರೆ 110 ಪೈಸೆ (ಶೇ. 1.151) ಮೌಲ್ಯ ಕಳೆದುಕೊಂಡಿದೆ.

ಹುಚ್ಚೆದ್ದ ಕರಡಿ ಕುಣಿತ

ರೂಪಾಯಿ ಅಪಮೌಲ್ಯ ಮುಂದುವರಿಕೆ ಪರಿಣಾಮ ಗುರುವಾರ ಮುಂಬೈ ಷೇರುಮಾರುಕಟ್ಟೆ ಯಲ್ಲಿ ಅಲ್ಲೋಲಕಲ್ಲೋಲ ಉಂಟಾಯಿತು. ಬಾಂಬೆ ಷೇರುಪೇಟೆ ಸೂಚ್ಯಂಕ (ಬಿಎಸ್​ಇ-ಸೆನ್ಸೆಕ್ಸ್) 806 ಅಂಕ ಇಳಿಕೆಯೊಂದಿಗೆ ಕಳೆದ ಮೂರು ತಿಂಗಳಲ್ಲೇ ಕನಿಷ್ಠಕ್ಕೆ ಕುಸಿಯಿತು. ಒಟ್ಟು ಶೇ. 2.24 ಇಳಿಕೆಯಾದ ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯಕ್ಕೆ 35,169.16 ತಲುಪಿತು. ಕಚ್ಚಾ ತೈಲ ಬೆಲೆ ಏರಿಕೆ, ರೂಪಾಯಿ ಮೌಲ್ಯ ಸತತ ಕುಸಿತ, ವಿತ್ತೀಯ ಕೊರತೆ ಹೆಚ್ಚಳವಾಗುವ ಆತಂಕ ಹೂಡಿಕೆದಾರರನ್ನು ಬಾಧಿಸಿದೆ.

ಎಚ್ಡಿಕೆ ಇಳಿಸ್ತಾರಾ ತೈಲ ಹೊರೆ?

ಜನಸಾಮಾನ್ಯರನ್ನು ಕಂಗೆಡಿಸುತ್ತಿರುವ ತೈಲ ಬೆಲೆ ಏರಿಕೆಯನ್ನು ಕೊಂಚ ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 1.50 ರೂ. ಕಡಿತ ಮಾಡಿರುವುದರಿಂದ ರಾಜ್ಯದ ಚಿತ್ತ ಈಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರತ್ತ ನೆಟ್ಟಿದೆ. ಕೇಂದ್ರದ ನಿರ್ಧಾರಕ್ಕೆ ಪೂರಕವಾಗಿ ತೈಲ ಕಂಪನಿಗಳು ಕೂಡ 1 ರೂ. ಇಳಿಸಲು ಸಮ್ಮತಿಸಿರುವುದರಿಂದ ಒಟ್ಟಾರೆ 2.50 ರೂ. ತಗ್ಗಿದೆ. ಈ 2.50 ರೂ. ಇಳಿಕೆ ಜತೆಗೆ ರಾಜ್ಯ ಸರ್ಕಾರಗಳೂ 2.50 ರೂ. ಇಳಿಸಿದರೆ ಜನರಿಗೆ 5 ರೂ.ಹೊರೆ ತಗ್ಗುತ್ತದೆ ಎಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಗೂ ಮನವಿ ಮಾಡಿದೆ. ಕಳೆದ ಬಜೆಟ್​ನಲ್ಲಿ ಸಿಎಂ ಕುಮಾರಸ್ವಾಮಿ ತೈಲ ಉತ್ಪನ್ನಗಳ ಮೇಲಿನ ಸುಂಕವನ್ನು ಪೆಟ್ರೋಲ್ ಮೇಲೆ 1.14, ಡೀಸೆಲ್ ಮೇಲೆ 1.12 ರೂ. ಏರಿಸಿದ್ದರು. ಆದರೆ ತೈಲ ಬೆಲೆ ಹೆಚ್ಚಳಗೊಂಡ ನಂತರ ಎಲ್ಲ ರಾಜ್ಯಗಳಂತೆ ಇಲ್ಲೂ 2 ರೂ. ಸುಂಕ ಕಡಿತಗೊಳಿಸಲಾಗಿತ್ತು. ಇದನ್ನು ಬಿಟ್ಟರೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನಯಾಪೈಸೆಯನ್ನೂ ಇಳಿಕೆ ಮಾಡಿರಲಿಲ್ಲ. ಹೀಗಾಗಿ ಕೇಂದ್ರದಂತೆ ರಾಜ್ಯ ಸರ್ಕಾರವೂ ಈಗ ತೆರಿಗೆ ಕಡಿತ ಮಾಡಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಛತ್ತೀಸ್​ಗಢ, ಜಾರ್ಖಂಡ್, ಗುಜರಾತ್, ಉತ್ತರಪ್ರದೇಶ, ಮಧ್ಯಪ್ರದೇಶ ಸೇರಿ ಎನ್​ಡಿಎ ಆಡಳಿತವಿರುವ 13 ರಾಜ್ಯಗಳು ಬೆಲೆ ಇಳಿಕೆಗೆ ಸಮ್ಮತಿಸಿವೆ. ಆದರೆ ಸದ್ಯದ ಸ್ಥಿತಿಯಲ್ಲಿ ತೈಲ ತೆರಿಗೆ ಇಳಿಸಲಾಗದೆಂದು ಸಿಎಂ ಎಚ್ಡಿಕೆ ಸ್ಪಷ್ಟಪಡಿಸಿದ್ದಾರೆ.