ಯಳಂದೂರು: ತಾಲೂಕಿನ ಮದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೂಪಾ ನಾಗಣ್ಣ ಅವಿರೋಧವಾಗಿ ಆಯ್ಕೆಯಾದರು.
ಸುಶೀಲಮ್ಮ ರಾಜೀನಾಮೆ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಒಟ್ಟು 16 ಮಂದಿ ಸದಸ್ಯರಿರುವ ಈ ಪಂಚಾಯಿತಿಯಲ್ಲಿ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ 12 ಮಂದಿ ಹಾಜರಿದ್ದರು. ಚುನಾವಣಾಧಿಕಾರಿಯಾಗಿದ್ದ ಪಶು ಇಲಾಖೆಯ ಡಾ.ಶಿವರಾಜು ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಅಧ್ಯಕ್ಷ ಸ್ಥಾನಕ್ಕೆ ರೂಪಾ ನಾಗಣ್ಣ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಘೋಷಿಸಲಾಯಿತು.
ನಂತರ ಮಾಜಿ ಶಾಸಕ ಎಸ್.ಬಾಲರಾಜು ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಗ್ರಾಮ ಪಂಚಾಯಿತಿ ಪರಿಮಿತಿ ಚಿಕ್ಕದಿರುತ್ತದೆ. ಪ್ರತಿಯೊಬ್ಬರೂ ತಮ್ಮ ಪ್ರತಿನಿತ್ಯ ತಮ್ಮ ಗ್ರಾಮ, ವಾರ್ಡ್‌ಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಬೇಕು. ತಮ್ಮ ವಾರ್ಡ್ ಅನ್ನು ಸುತ್ತಬೇಕು. ಆಗ ಅಲ್ಲಿನ ಸಮಸ್ಯೆಗಳ ಅರಿವಾಗುತ್ತದೆ. ಇಲ್ಲಿ ಸ್ವಚ್ಛತೆ, ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸದಸ್ಯರು ಶ್ರಮ ವಹಿಸಿದರೆ ಅವರು ಜನರ ಮನಸ್ಸಿನಲ್ಲಿ ಅಜರಾಮರವಾಗುತ್ತಾರೆ. ಮುಂದಿನ ಚುನಾವಣೆಗೂ ಕೂಡ ಇದು ನಾಂದಿಯಾಗುತ್ತದೆ. ಜನಪ್ರತಿನಿಧಿಗಳು ಇದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪಾಧ್ಯಕ್ಷ ಆರ್.ವೆಂಕಟರಮಣಸ್ವಾಮಿ, ಸದಸ್ಯರಾದ ಪಿ.ಪ್ರಕಾಶ್, ನಂದಿನಿ, ಮಂಜುಳಾ, ಎಂ.ಮಲ್ಲಿಕಾರ್ಜುನ, ಪರಮೇಶ್, ಎಂ.ಎನ್. ಶಶಿಕುಮಾರ್, ಚಂದ್ರಮ್ಮ, ಭಾಗ್ಯಾ, ಸುಧಾಮಣಿ, ಚಂದ್ರಕಲಾ ಪಿಡಿಒ ನಟರಾಜು, ನಂಜಪ್ಪ, ಮುಖಂಡರಾದ ಸೋಮಶೇಖರ್, ಪ್ರಕಾಶ್, ನಾಗಣ್ಣ ಇದ್ದರು.