ಏರ್‌ಪೋರ್ಟ್ ರನ್‌ವೇ ವಿಸ್ತರಣೆ ಇಲ್ಲ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಕಾರ್ಯ ಸಾಧ್ಯವಲ್ಲ ಎಂದು ನಾಗರಿಕ ವಿಮಾನ ಯಾನ ರಾಜ್ಯ ಸಚಿವ ಹರ್‌ದೀಪ್ ಸಿಂಗ್ ಪುರಿ ಹೇಳಿಕೆ ನೀಡಿದ್ದು, ವಿಸ್ತರಣೆ ಯೋಜನೆ ನನೆಗುದಿಗೆ ಬೀಳುವುದು ಖಚಿತವಾಗಿದೆ.

ಲೋಕಸಭೆ ಅಧಿವೇಶನದಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಬಿ.ವೈ.ರಾಘವೇಂದ್ರ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಈಗಿನ ರನ್‌ವೇ ವಿಸ್ತರಿಸುವ ಪ್ರಸ್ತಾವನೆ ಇದೆ. ಆದರೆ ಭಾರಿ ಪ್ರಮಾಣದ ವೆಚ್ಚ, ಲ್ಯಾಂಡ್ ಫಿಲ್ಲಿಂಗ್ (ತಗ್ಗು ಜಾಗಕ್ಕೆ ಮಣ್ಣು ತುಂಬಿಸುವುದು) ಹಾಗೂ ಕಾಮಗಾರಿ ನಿರ್ವಹಣೆಯ ಸವಾಲು ಇರುವುದರಿಂದ ಯೋಜನೆ ಸಾಧ್ಯವಲ್ಲ ಎಂದು ಉತ್ತರ ನೀಡಿದ್ದಾರೆ.

ದೊಡ್ಡ ವಿಮಾನಗಳಿಗಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ರನ್ ವೇ ನಿರ್ಮಿಸಬೇಕು, ಹಾಗೆ ಮಾಡಿದಲ್ಲಿ ಈಗ ಇರುವ ರನ್‌ವೇಯನ್ನು ಸಣ್ಣ ವಿಮಾನಗಳಿಗೆ ಬಳಸಬಹುದು ಎಂದು ಮಂಗಳೂರು ನಗರ ದಕ್ಷಿಣದ ಮಾಜಿ ಶಾಸಕ ಜೆ.ಆರ್.ಲೋಬೊ ಮನವಿ ಸಲ್ಲಿಸಿದ್ದರು. ಯೋಜನೆಯಿಂದ ಸಂತ್ರಸ್ತರಾಗುವವರಿಗೆ ಪರಿಹಾರ, ರನ್‌ವೇ ನಿರ್ಮಾಣಕ್ಕೆ ತಗಲುವ ವೆಚ್ಚ ಮತ್ತಿತರ ಕಾರಣಗಳಿಂದ ಈ ಪ್ರಸ್ತಾವನೆ ಕಾರ್ಯಸಾಧುವಲ್ಲ. ರನ್‌ವೇಯನ್ನು ಸಣ್ಣಪ್ರಮಾಣದಲ್ಲಿ ಮಾತ್ರ ವಿಸ್ತರಿಸಲು ಸಾಧ್ಯ ಎಂದು ಸಚಿವರು ತಿಳಿಸಿದ್ದಾರೆ.

ರನ್‌ವೇ ವಿಸ್ತರಣೆ ಯಾಕೆ?: ಮಂಗಳೂರು ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ನಿಲ್ದಾಣ ಎಂದು ಘೋಷಣೆಯಾಗಿ ಆರು ವರ್ಷ ಕಳೆದಿದೆ. ಆದರೆ ರನ್‌ವೇ ವಿಸ್ತ ರಣೆ ಆಗದ ಕಾರಣ ಇಲ್ಲಿ ದೊಡ್ಡ ವಿಮಾನಗಳು ಇಳಿಯಲು ಸಾಧ್ಯವಾಗುತ್ತಿಲ್ಲ.
2010ರಲ್ಲಿ ವಿಮಾನ ವಿಮಾನ ಲ್ಯಾಂಡ್ ಆಗುವಾಗ ಓವರ್ ಶೂಟ್ ಆಗಿ ದುರಂತ ಸಂಭವಿಸಿ 158 ಮಂದಿ ಮೃತಪಟ್ಟಿದ್ದರು. ಇದೇ ಜೂ.30ರಂದು ವಿಮಾನ ಟ್ಯಾಕ್ಸಿ ವೇಯಿಂದ ಜಾರಿ ಮತ್ತೆ ಆತಂಕಕ್ಕೆ ಕಾರಣವಾಗಿತ್ತು. ರನ್ ವೇ ದೊಡ್ಡದಾಗಿರುತ್ತಿದ್ದರೆ ಬೇಕಾದಷ್ಟು ಜಾಗ ಇರುತ್ತಿತ್ತು, ಇಂಥ ಘಟನೆಗಳು ನಡೆಯುವುದನ್ನು ತಪ್ಪಿಸಲು ಅವಕಾಶವಿತ್ತು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಏನಾಗಬಹುದು?: ಪ್ರಸ್ತಾವನೆಯನ್ನು ಸಂಪೂರ್ಣವಾಗಿ ಕೈಬಿಟ್ಟಿರುವ ಬಗ್ಗೆ ಸಚಿವರು ತಿಳಿಸಿಲ್ಲ. ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ರನ್‌ವೇ ವಿಸ್ತರಣೆ ಯೋಜನೆ ಮುಂದೆ ಹೋಗುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ ಎಂಬುದು ಸ್ಪಷ್ಟ.

ಮಂಗಳೂರಿನಲ್ಲಿ ಬೃಹತ್ ವಿಮಾನಗಳು ಇಳಿಯಬೇಕೆಂದರೆ ಪಶ್ಚಿಮ ಏಷ್ಯಾ ಮಾತ್ರವಲ್ಲದೆ ಇತರ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಬೇಕು. ಸದ್ಯ ಮಂಗಳೂರಿನಿಂದ ಪಶ್ಚಿಮ ಏಷ್ಯಾ ದೇಶಗಳಿಗೆ ಮಾತ್ರ ಪ್ರಯಾಣಿಕರಿಂದ ಬೇಡಿಕೆ ಇದ್ದು, ವಿಮಾನ ಸೌಲಭ್ಯಗಳಿವೆ. ಇತರ ದೇಶಗಳಿಗೆ ಬೇಡಿಕೆ ಬಂದರಷ್ಟೇ ರನ್‌ವೇ ವಿಸ್ತರಣೆಯ ಅಗತ್ಯ ಬೀಳಬಹುದು. ಮೇಲಾಗಿ ಪಕ್ಕದಲ್ಲೇ ಕಳೆದ ವರ್ಷ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡ ಬಳಿಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ರನ್‌ವೇ ವಿಸ್ತರಣೆ ದೂರದ ಮಾತು ಎಂದು ಹೇಳಲಾಗುತ್ತಿದೆ.

2 ಸಾವಿರ ಅಡಿ ವಿಸ್ತರಣೆ: ಪ್ರಸ್ತುತ ರನ್‌ವೇ 8,038 ಅಡಿ ಉದ್ದವಿದೆ. 2013ರಲ್ಲಿ ಇದನ್ನು 11,600 ಅಡಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಈ ಯೋಜನೆಗೆ 280 ಎಕರೆ ಜಾಗ ಹಾಗೂ 1,120 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಯೋಜನೆಗೆ ಭೂಸ್ವಾಧೀನಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಯೋಜನೆಗೆ ಅಧಿಕ ಮೊತ್ತ ಅಗತ್ಯವಿದ್ದ ಕಾರಣ ರನ್‌ವೇ ವಿಸ್ತ ರಣೆಯನ್ನು 10 ಸಾವಿರ ಅಡಿಗೆ ಇಳಿಸಿ, 92 ಎಕರೆ ಭೂಸ್ವಾಧೀನದ ಹೊಸ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಯೋಜನೆಗೆ ರಾಜ್ಯ ನಿರಾಸಕ್ತಿ ತಾಳಿತ್ತೇ?:  ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆ ಭೂಸ್ವಾಧೀನ ಬಗ್ಗೆ ದ.ಕ.ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎರಡು ವರ್ಷ ಕಳೆದಿದೆ. ವಿಮಾನ ನಿಲ್ದಾಣ ಅಭಿವೃದ್ಧಿಗೆ ಅವಶ್ಯ ಜಮೀನು ಒದಗಿಸುವುದು ರಾಜ್ಯ ಸರ್ಕಾರದ ಹೊಣೆ. ಮಂಗಳೂರು ನಿಲ್ದಾಣದ ರನ್‌ವೇ ವಿಸ್ತರಣೆಗೆ ಕೊಳಂಬೆ ಮತ್ತು ಅದ್ಯಪಾಡಿಯಲ್ಲಿ ಜಮೀನು ಗುರುತಿಸಿದ ಜಿಲ್ಲಾಡಳಿತ ರಾಜ್ಯ ಸರ್ಕಾರದ ಮೂಲಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. 400 ಕೋಟಿ ರೂ.ವೆಚ್ಚದ ಯೋಜನೆಯ ಭೂ ಸ್ವಾಧೀನದ ವೆಚ್ಚವನ್ನು ರಾಜ್ಯ ಸರ್ಕಾರ ಹಾಗೂ ಕಾಮಗಾರಿ ವೆಚ್ಚವನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಭರಿಸಬೇಕಾಗಿದೆ. ಆದರೆ ಯೋಜನೆಯ ಸಂಪೂರ್ಣ ವೆಚ್ಚವನ್ನು ಪ್ರಾಧಿಕಾರವೇ ಭರಿಸಬೇಕೆಂದು ರಾಜ್ಯದ ಮೂಲ ಸೌಲಭ್ಯ ಅಭಿವೃದ್ಧಿ ಖಾತೆ ನಿಲುವು ತಾಳಿದ್ದು, ರನ್‌ವೇ ವಿಸ್ತರಣೆಗೆ ತೊಡಕಾಗಿದೆ ಎಂದು ಇದುವರೆಗೆ ಹೇಳಲಾಗುತ್ತಿತ್ತು.

21 ಕೋಟಿ ರೂ.ಬಾಕಿ: ಈ ಹಿಂದೆ ರನ್‌ವೇ ವಿಸ್ತರಣೆ ಸಂದರ್ಭ ಸ್ವಾಧೀನಪಡಿಸಿದ ಜಮೀನಿಗೂ ರಾಜ್ಯ ಸರ್ಕಾರ ಪೂರ್ತಿ ಹಣ ಪಾವತಿಸಿಲ್ಲ. 36 ಎಕರೆ ಜಮೀನಿಗೆ ಸಂಬಂಧಿಸಿ 21 ಕೋಟಿ ರೂ.ಪಾವತಿ ಬಾಕಿ ಇದೆ.

ಅದಾನಿ ನಿಲುವೇನು?: ಮಂಗಳೂರು ವಿಮಾನ ನಿಲ್ದಾಣ ನಿರ್ವಹಣೆ ಬಿಡ್ಡಿಂಗ್ ಅದಾನಿ ಕಂಪನಿ ಪಡೆದಿದ್ದು, ಶೀಘ್ರ ಸಂಸ್ಥೆಗೆ ಹಸ್ತಾಂತರವಾಗಬಹುದು. ಭಾರಿ ಹೂಡಿಕೆ ಮಾಡಬೇಕಾಗುವ ಹಿನ್ನೆಲೆಯಲ್ಲಿ ಅದಾನಿ ಸಂಸ್ಥೆಯೂ ರನ್‌ವೇ ವಿಸ್ತರಣೆಗೆ ಮುಂದಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *