ಸತ್ತೇಗಾಲ ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗಕ್ಕೆ ಚಾಲನೆ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಸರ್ಕಾರ ಆರಂಭಿಸಿರುವ 1ನೇ ತರಗತಿ ಆಂಗ್ಲ ಮಾಧ್ಯಮ ವಿಭಾಗವನ್ನು ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಗುರುವಾರ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ರಾಜ್ಯ ಸರ್ಕಾರ ನಾಡಿನಾದ್ಯಂತ ಪ್ರಸಕ್ತ ಸಾಲಿನಲ್ಲಿ 1 ಸಾವಿರ ಸರ್ಕಾರಿ ಶಾಲೆಗಳಲ್ಲಿ ಪಬ್ಲಿಕ್ ಶಾಲೆ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಆರಂಭಿಸಿದೆ. ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳ ಪೈಕಿ ಯಾವ ಊರಿನ ಶಾಲೆಯಲ್ಲಿ 1ನೇ ತರಗತಿ ಇಂಗ್ಲಿಷ್ ಮಾಧ್ಯಮ ವಿಭಾಗ ಆರಂಭಿಸಬೇಕು ಎಂಬ ಪ್ರಸ್ತಾಪಕ್ಕೆ ಸತ್ತೇಗಾಲ ಗ್ರಾಮ ಆಯ್ಕೆಗೆ ಸಮ್ಮಿತಿಸಿದೆ ಎಂದರು.

ಸತ್ತೇಗಾಲ ಗ್ರಾಮ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದ ಬಡ ಜನರು ವಾಸವಿರುವ ಸ್ಥಳ. ಈ ಗ್ರಾಮಕ್ಕೆ ಇಂಗ್ಲಿಷ್ ಮಾಧ್ಯಮ ಶಾಲೆ ನೀಡಿದಲ್ಲಿ ರೈತರು, ಹಿಂದುಳಿದವರು, ದಲಿತರು ಮತ್ತು ನಾಯಕ ಸಮುದಾಯದ ಪಾಲಕರು ನಿಟ್ಟುಸಿರು ಬಿಡುತ್ತಾರೆ. ಇಂಗ್ಲಿಷ್ ಶಿಕ್ಷಣ ನೀಡುವ ಕಾನ್ವೆಂಟ್‌ಗಳಲ್ಲಿ ದುಬಾರಿ ಹಣ ನೀಡಿ ಮಕ್ಕಳಿಗೆ ಶಿಕ್ಷಣ ಕೊಡಿಸಲಾಗದ ಜನರು ಸರ್ಕಾರಿ ಶಾಲೆಯಲ್ಲಿ ಆರಂಭವಾಗುವ 1ನೇ ತರಗತಿಯ ಆಂಗ್ಲ ಮಾಧ್ಯಮ ಸೌಲಭ್ಯ ಬಳಸಿಕೊಳ್ಳಲಿ ಎಂಬ ಆಶಾಭಾವನೆ ಹೊಂದಿದ್ದೇನೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ಇದೀಗ 1ನೇ ತರಗತಿಗೆ ಇಂಗ್ಲಿಷ್ ಮಾಧ್ಯಮ ಆರಂಭಿಸಲಾಗಿದೆಯಾದರೂ ಕಾನ್ವೆಂಟ್‌ಗಳಲ್ಲಿ ದೊರೆಯುವ ಇತರ ಸೌಲಭ್ಯ ಆರಂಭದಲ್ಲಿ ದೊರೆಯುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಇರುವಂತೆ ಸುಸಜ್ಜಿತ ಪೀಠೋಪಕರಣ ಹಾಗೂ ವಿವಿಧ ಸಲಕರಣೆ ಬೇಕಿದೆ. ಅವುಗಳ ಬಗ್ಗೆಯೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದ್ದೇನೆ. ಪಾಲಕರು ಸರ್ಕಾರಿ ಶಾಲೆಗಳಲ್ಲಿಯೇ ಮಕ್ಕಳನ್ನು ಓದಿಸಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಬಿಇಒ ಚಂದ್ರಪಾಟೀಲ್ ಮಾತನಾಡಿ, ತಾಲೂಕಿನ ಮುಳ್ಳೂರು, ಸತ್ತೇಗಾಲ ಗ್ರಾಮದ ಸರ್ಕಾರಿ ಶಾಲೆಗಳಲ್ಲಿ ಪ್ರಸಕ್ತ ಸಾಲಿನಿಂದ 1ನೇ ತರಗತಿಗೆ ಆಂಗ್ಲ ಮಾಧ್ಯಮ ಆರಂಭಿಸಲಾಗಿದೆ. ಈ ಶಾಲೆಗಳಲ್ಲಿ 30 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲು ಅವಕಾಶವಿದೆ. ಸತ್ತೇಗಾಲ ಶಾಲೆಯಲ್ಲಿ 26 ಮಕ್ಕಳು ದಾಖಲಾಗಿದ್ದು, 4 ಸೀಟು ಬಾಕಿಯಿದೆ ಎಂದರು.

ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ತಾಪಂ ಅಧ್ಯಕ್ಷ ರಾಜೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಅರುಣ್‌ಕುಮಾರ್, ಸತ್ತೇಗಾಲ ಗ್ರಾಪಂ ಅಧ್ಯಕ್ಷೆ ಮಂಜುಳಾ ನಂಜುಂಡಮೂರ್ತಿ, ಬಿಆರ್‌ಸಿ ಮಂಜುಳಾ, ಮುಖಂಡರಾದ ಸೋಮಣ್ಣ, ಜಯಶಂಕರ್, ಪ್ರಭು, ಮಾದೇಗೌಡ, ಪ್ರಭಾರ ಮುಖ್ಯಶಿಕ್ಷಕ ಸಿ.ಮಹದೇವ ಮತ್ತಿತರರಿದ್ದರು.