2 ಲಕ್ಷ ರೂ.ವದಂತಿ ನಂಬಿ ಕೆಟ್ಟ ಬಾಲಕಿಯರು!

ಜಗದೀಶ ಖೊಬ್ರಿ

ತೆಲಸಂಗ: ದುಡ್ಡು ಬರುತ್ತದೆ ಎಂದರೆ ಆಸೆ ಪಡೋದು ಮನುಷ್ಯನ ಸಹಜ ಗುಣ. ಅದರಲ್ಲೂ ಸರ್ಕಾರದಿಂದ ಹಣ ಸಿಗುತ್ತದೆ ಎಂದರೆ ಖುಷಿ ಇನ್ನೂ ಡಬಲ್. ಅಂಥದ್ದೇ  ಖುಷಿ ಹುಡುಕಲು ಹೋದ ನೂರಾರು ಜನ ಹೆಣ್ಣು ಮಕ್ಕಳು, ಸುಳ್ಳು ಸುದ್ದಿಗೆ ಕಿವಿಗೊಟ್ಟು ದುಡ್ಡು ಹಾಗೂ ಸಮಯ ಎರಡನ್ನೂ ಕಳೆದುಕೊಂಡು ಮುಜುಗರಕ್ಕೀಡಾಗಿದ್ದಾರೆ.
ಹೌದು, ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಅರ್ಜಿ ಭರ್ತಿ ಮಾಡಿ ಅಂಚೆ ಮುಖಾಂತರ ಸ್ಪೀಡ್‌ಪೋಸ್ಟ್ ಮಾಡಿದರೆ 2 ಲಕ್ಷ ರೂ. ನೀಡಲಾಗುತ್ತದೆ ಎಂಬ ಗಾಳಿ ಸುದ್ದಿ ನಂಬಿದ ಬಾಲಕಿಯರು ಶಾಲೆ ಬಿಟ್ಟು ಅಂಚೆ ಕಚೇರಿಗೆ ಮುಗಿಬಿದ್ದಿದ್ದಾರೆ.

ತೆಲಸಂಗ ಸೇರಿ ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಘಟನೆ ನಡೆದಿದೆ. ಯಾರು ಹೇಳಿದರೂ ಕೇಳದ ಸಾವಿರಾರು ವಿದ್ಯಾರ್ಥಿನಿಯರು, ಪ್ರಾಚಾರ್ಯರ ಸಹಿ, ಗ್ರಾಮ ಪಂಚಾಯತಿ ಅಧ್ಯಕ್ಷರ ಸಹಿ ಪಡೆದು, ಆಧಾರ ಕಾರ್ಡ್, ರೇಷನ್ ಕಾರ್ಡ್ ಝರಾಕ್ಸ್ ಪ್ರತಿ ಲಗತ್ತಿಸಿ ಕವರ್‌ನಲ್ಲಿ ಇಟ್ಟು ಸ್ಪೀಡ್‌ಪೋಸ್ಟ್ ಮಾಡಿದ್ದಾರೆ. ಇನ್ನು ಕೆಲವರು ಅಂಚೆ ಕಚೇರಿಯಲ್ಲಿ ತಮ್ಮ ಸರದಿ ಬಾರದ್ದರಿಂದ ಕಚೇರಿ ವ್ಯವಸ್ಥಾಪಕರಿಗೆ ಶಾಪ ಹಾಕಿದರು.

ಶಾಲೆಗೆ ರಜೆ ಹಾಕಿದರು: ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆ.25 ಎಂಬ ಸುದ್ದಿ ಹರಡಿದ್ದರಿಂದ ಶಾಲೆಗೆ ರಜೆ ಹಾಕಿದ ವಿದ್ಯಾರ್ಥಿನಿಯರು ದಾಖಲೆಗಳನ್ನು ಸಂಗ್ರಹಿಸಲು ವಿವಿಧ ಕಚೇರಿಗೆ ಅಲೆದಾಡಿದರು. ಸೋಮವಾರದಿಂದಲೇ ಓಡಾಟ ನಡೆಸಿದ್ದ ವಿದ್ಯಾರ್ಥಿನಿಯರು ದಾಖಲೆ ಸಂಗ್ರಹಿಸಿ ಅರ್ಜಿ ಭರ್ತಿ ಮಾಡಿದರು. ಇನ್ನೂ ಕೆಲವರು ಸಮಯ ಸಾಲದೆ ನಿರಾಸೆ ಅನುಭವಿಸಿದರು. ಅಸಲಿಗೆ 2 ಲಕ್ಷ ರೂ. ನೀಡುವ ಯೋಜನೆಯೇ ಇಲ್ಲ ಎನ್ನುವುದು ಮಾತ್ರ ಸತ್ಯ.

ಸುದ್ದಿ ಹರಡಿದ್ದು ಎಲ್ಲಿಂದ?: ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಅರ್ಜಿ ಸಲ್ಲಿಸಿದರೆ 2 ಲಕ್ಷ ರೂಪಾಯಿ ಸಿಗುತ್ತದೆ ಎಂಬ ಸುದ್ದಿ ಸೈಬರ್ ಸೆಂಟರ್‌ಗಳ ಮೂಲಕ ಹರದಾಡಿದೆ ಎಂದು ಹೇಳಲಾಗುತ್ತಿದೆ. ವಿಜಯಪುರ ಜಿಲ್ಲೆಯ ಕನಮಡಿ ಗ್ರಾಮದಲ್ಲಿ ಆರಂಭವಾಗಿ 3 ದಿನವಾಯಿತು. ಯಾವ ಅಧಿಕಾರಿಯೂ ಇದನ್ನು ತಿಳಿಸಿಲ್ಲ ಎಂದು ತೆಲಸಂಗ ಸೇರಿ ಅಥಣಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಸುದ್ದಿ ಹರಿಬಿಡಲಾಗಿದೆ. ಒಂದು ಫೇಕ್ ಅರ್ಜಿ ನಮೂನೆ ತಯಾರಿಸಿ ಭಾರತ ಸರ್ಕಾರ, ಬಾಲ ವಿಕಾಸ ಮಂತ್ರಾಲಯ, ಶಾಸ್ತ್ರೀಭವನ ನ್ಯೂ ದೆಹಲಿ-110001 ಎಂಬ ವಿಳಾಸಕ್ಕೆ ಅರ್ಜಿ ಕಳುಹಿಸುವಂತೆ ಹೇಳಿದ್ದಾರೆ. ಈ ಸುದ್ದಿಗೆ ಹುಚ್ಚೆದ್ದ ಜನರು ಯಾವ ಅಧಿಕಾರಿಯನ್ನೂ ಕೇಳದೆಯೇ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

20 ರೂಪಾಯಿ ಕೊಟ್ಟರು!: ತಾಲೂಕಿನ ಹಲವು ಸೈಬರ್ ಸೆಂಟರ್‌ಗಳಲ್ಲಿ ಅರ್ಜಿ ಫಾರ್ಮ್ ಒಂದಕ್ಕೆ 20 ರೂ. ಪಡೆದಿದ್ದಾರೆ. ಅದು ಕೇವಲ ಝರಾಕ್ಸ್ ಪ್ರತಿಯಾದರೂ ಜನ ಹಣ ಕೊಟ್ಟು ಖರಿಸಿದ್ದಾರೆ. ಓರಿಜನಲ್ ಫಾರ್ಮ್ ಮೇಲೆ ಸರ್ಕಾರದ ಚಿಹ್ನೆ ಹಾಗೂ ಸಿರಿಯಲ್ ನಂಬರ್ ಇರುತ್ತದೆ. ಇದ್ಯಾವುದೂ ಇಲ್ಲದ ಝರಾಕ್ಸ್ ಪ್ರತಿಗೆ 2 ರೂ.ಪಡೆಯುವ ಬದಲು 20 ರಿಂದ 30 ರೂ. ವಸೂಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

100 ರೂಪಾಯಿ ಖರ್ಚು ಮಾಡಿದರು: ಕಮಡಿ ಅಂದರೂ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರೂ ನೂರು ರೂಪಾಯಿ ಖರ್ಚು ಮಾಡಿದ್ದಾರೆ. ಸ್ಪೀಡ್ ಪೋಸ್ಟ್‌ಗೆ 72 ರೂಪಾಯಿ, ಝರಾಕ್ಸ್ ಹಾಗೂ ಸೈಬರ್ ಕೇಂದ್ರದಲ್ಲಿ ಅರ್ಜಿ ಸೇರಿ 100 ರೂ. ಖರ್ಚಾಗಿದೆ. 3 ವರ್ಷದಿಂದ 35 ವರ್ಷ ವಯಸ್ಸಿನವರೆಲ್ಲರೂ ಈ ಯೋಜನೆ ಲಾಭ ಪಡೆಯಬಹುದಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದು, ಹೆಣ್ಣು ಮಕ್ಕಳು ಈ ಸುಳ್ಳು ಸುದ್ದಿ ನಂಬಿ ಮೋಸ ಹೋಗಿದ್ದಾರೆ.

ಜಿಲ್ಲಾಡಳಿತದಿಂದ ನಮಗೆ ಮಾಹಿತಿ ಬರುತ್ತಿತ್ತು. ನಮಗೆ ಮಾಹಿತಿ ಬಂದಿಲ್ಲ ಎಂದ ಮೇಲೆ ಇದು ಯಾರೋ ಸೈಬರ್ ಸೆಂಟರ್‌ನವರು ಹಣ ಗಳಿಕೆ ಮಾಡಲು ಹಬ್ಬಿಸಿರುವ ಸುದ್ದಿ ಇರಬೇಕು. ಇಂತಹ ಫೇಕ್ ಸುದ್ದಿ ಹರಡಿಸಿ ಫಾರ್ಮ್ ಮಾರಾಟ ಮಾಡುವ ಸೈಬರ್ ಸೆಂಟರ್‌ಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು.

|ರವಿ ಬಂಗಾರೆಪ್ಪನವರ, ತಾಪಂ ಇಒ ಅಥಣಿ

2 ಲಕ್ಷ ರೂ. ನೀಡುವ ಯಾವುದೇ ಮಾಹಿತಿ ಸರ್ಕಾರದಿಂದ ನಮಗೆ ಬಂದಿಲ್ಲ. ಪೋಸ್ಟ್ ಮುಖಾಂತರ ಅರ್ಜಿ ಹಾಕುವ ಕಾಲವೂ ಇದಲ್ಲ. ಹಾಗೇನಾದರೂ ಇದ್ದರೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇದೆ. ಅರ್ಜಿ ಮಾರಾಟ ಮಾಡುವ ಉದ್ದೇಶದಿಂದ ಜನರಿಗೆ ಮೋಸ ಮಾಡುತ್ತಿದ್ದಾರೆ ಅನಿಸುತ್ತಿದೆ. ಜನ ಇದ್ಯಾವುದಕ್ಕೂ ಕಿವಿಗೊಡಬಾರದು.

|ಎಂ.ಎ.ಕಿತ್ತೂರ, ಉಪತಹಸೀಲ್ದಾರ್ ತೆಲಸಂಗ

2 ಲಕ್ಷ ರೂ. ನೀಡುವ ಯಾವುದೇ ಸ್ಕೀಂ ನಮ್ಮ ಇಲಾಖೆಯಿಂದ ಜಾರಿಯಲ್ಲಿ ಇಲ್ಲ. ಈ ಸುದ್ದಿ ಸಂಪೂರ್ಣ ಸುಳ್ಳು. ಯಾರೂ ಈ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು.
ಮಹಿಳಾ ಮತ್ತು ಬಾಲ ವಿಕಾಸ್ ಮಂತ್ರಾಲಯ ನವದೆಹಲಿ (ಸಹಾಯವಾಣಿ 01123074052)