ನಿಯಮ ಉಲ್ಲಂಘನೆ, ಸಂಚಾರ ದಟ್ಟಣೆ

ವಿಜಯವಾಣಿ ಸುದ್ದಿಜಾಲ ರಾಣೆಬೆನ್ನೂರ

ನಗರದಲ್ಲಿ ಟ್ರಾಫಿಕ್ ಸಮಸ್ಯೆಗೆ ಯಾವಾಗ ಮುಕ್ತಿ ದೊರೆಯುತ್ತದೆಯೋ ಗೊತ್ತಿಲ್ಲ. ಪ್ರತಿದಿನವೂ ಒಂದಲ್ಲ ಒಂದು ಕಾರಣಕ್ಕೆ ಟ್ರಾಫಿಕ್ ಜಾಮ್ ಆಗಿ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ರಿಕ್ಷಾ, ಬೈಕ್ ಹಾಗೂ ನಾಲ್ಕು ಚಕ್ರದ ವಾಹನಗಳ ಅಡ್ಡಾದಿಡ್ಡಿ ಓಡಾಟದಿಂದಾಗಿ ಜನತೆ ಹೈರಾಣಾಗಿದ್ದಾರೆ.

ನಗರದ ಪಿಬಿ ರಸ್ತೆಯಲ್ಲಿ ಒಂದು ರೀತಿಯ ಸಮಸ್ಯೆಯಾದರೆ, ಪ್ರಮುಖ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಎಂ.ಜಿ. ರಸ್ತೆ, ಗುತ್ತಲ ರೋಡ್​ನಲ್ಲಿ ಸಂಚರಿಸುವುದೆ ದುಸ್ತರವಾಗಿದೆ. ಹೀಗಾಗಿ ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದರೆ ತಪ್ಪಾಗಲಾರದು.

ಕಾನೂನಿನ ಭಯವಿಲ್ಲ: ನಗರದಲ್ಲಿ ಸಾರ್ವಜನಿಕರು ರಸ್ತೆ ದಾಟುವಾಗ ಜೀವ ಕೈಯಲ್ಲಿ ಹಿಡಿದು ಓಡಾಡುವಂಥ ಸ್ಥಿತಿ ಇದೆ. ವಾಹನ, ಬೈಕ್ ಸವಾರರು ಸಾರಿಗೆ ನಿಯಮವನ್ನು ಎಳ್ಳಷ್ಟೂ ಪಾಲಿಸುತ್ತಿಲ್ಲ. ದ್ವಿಚಕ್ರ ವಾಹನದಲ್ಲಿ ಮೂರು ಮಂದಿ ಹಾಗೂ ಆಟೋಗಳಲ್ಲಿ ಕುರಿಗಳಂತೆ ಜನರನ್ನು ತುಂಬಿ ಓಡಿಸುವುದು ಇಲ್ಲಿ ಸಾಮಾನ್ಯ ಎಂಬಂತಾಗಿದೆ. ಮಿತಿ ಮೀರಿದ ವೇಗ, ಕರ್ಕಶ ಶಬ್ದಗಳನ್ನು ಮಾಡುತ್ತ ಸಾಗುವ ವಾಹನ ಸವಾರರನ್ನು ನಿಯಂತ್ರಿಸುವವರೇ ಇಲ್ಲವಾಗಿದೆ.

ದುರ್ಗಾ ಸರ್ಕಲ್​ನಲ್ಲಿ ಸಂಚಾರವೇ ದುಸ್ತರ: ದುರ್ಗಾ ಸರ್ಕಲ್ ಸಮೀಪದಲ್ಲಿಯೇ ಸರ್ಕಾರಿ ಉರ್ದು ಶಾಲೆ ಹಾಗೂ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಗಳಿವೆ. ಈ ಭಾಗದಲ್ಲಿ ರಸ್ತೆ ಕಿರಿದಾಗಿದ್ದು, ಅತಿಕ್ರಮಣಗೊಂಡಿದೆ ಎನ್ನಲಾಗುತ್ತಿದೆ. ಬೆಳಗ್ಗೆ ಶಾಲೆಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಗುತ್ತಲ, ದೇವರಗುಡ್ಡ ಮತ್ತಿತರೆಡೆ ತೆರಳುವ ಮಂದಿ ಈ ಸರ್ಕಲ್​ನಲ್ಲಿ ಜಮಾಯಿಸುತ್ತಾರೆ. ಈ ವೇಳೆ ಸಂಚಾರ ತೀವ್ರ ಹದಗೆಟ್ಟಿರುತ್ತದೆ.

ರಸ್ತೆಯಲ್ಲೇ ವ್ಯಾಪಾರ: ದೊಡ್ಡ ಪೇಟೆ, ಎಂಜಿ ರಸ್ತೆ, ಪಿಬಿ ರಸ್ತೆ, ತರಕಾರಿ ಮಾರುಕಟ್ಟೆ, ಎಪಿಎಂಸಿ ರೋಡ್ ಮತ್ತಿತರ ಕಡೆಗಳಲ್ಲಿ ಬೀದಿ ವ್ಯಾಪಾರಿಗಳು ರಸ್ತೆಗಳ ಮೇಲೆಯೇ ತಮ್ಮ ವ್ಯಾಪಾರ- ವಹಿವಾಟು ನಡೆಸುತ್ತಾರೆ. ಇದರಿಂದ ರಸ್ತೆಯ ಅರ್ಧದಷ್ಟು ಭಾಗದಲ್ಲಿ ವ್ಯಾಪಾರಸ್ಥರೇ ತುಂಬಿರುತ್ತಾರೆ. ಜತೆಗೆ ವ್ಯಾಪಾರಕ್ಕಾಗಿ ಆಗಮಿಸುವ ಗ್ರಾಹಕರು ಇಲ್ಲೇ ವಾಹನಗಳನ್ನು ಪಾರ್ಕ್ ಮಾಡುವುದರಿಂದ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ನಗರಸಭೆ ಬೀದಿ ಬದಿ ವ್ಯಾಪಾರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಇಲ್ಲಿನ ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.

ಹೆಲ್ಮೆಟ್ ಹಾಕೋರೆ ಇಲ್ಲ: ಬೈಕ್ ಸವಾರರ ಹಿತದೃಷ್ಟಿಯಿಂದ ಸುಪ್ರೀಂಕೋರ್ಟ್ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಆದರೆ, ನಗರದಲ್ಲಿ ಕೋರ್ಟ್​ನ ಆದೇಶ ಪಾಲನೆಯಾಗುತ್ತಿಲ್ಲ. ತೀರ್ಪು ಬಂದ ಕೆಲವು ದಿನ ಮಾತ್ರ ಬೈಕ್ ಸವಾರರು ರೂಢಿಸಿಕೊಂಡಿದ್ದರು. ಈಗ ಮತ್ತೆ ಯಥಾ ಪ್ರಕಾರವಾಗಿದೆ. ಬೈಕ್​ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ, ಸಂಚಾರ ನಿಯಮಗಳ ಪಾಲನೆ ಮಾತ್ರ ಇಲ್ಲಿ ಲೆಕ್ಕಕ್ಕಿಲ್ಲದಂತಾಗಿದೆ. ಸಂಚಾರ ಪೊಲೀಸರು ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ನಿಯಮ ಪಾಲನೆ ಮಾಡದ ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಚುರುಕು ಮುಟ್ಟಿಸಬೇಕಿದೆ.

ಗಮನ ಹರಿಸದ ಸಂಚಾರ ಪೊಲೀಸರು: ಇಲ್ಲಿನ ಸಂಚಾರಿ ಪೊಲೀಸರು ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ನಗರದ ಹೊರ ವಲಯಗಳಲ್ಲಿ ದಂಡ ವಸೂಲಿ ಮೂಡುವುದೇ ಕಾಯಕ ಎಂದು ತಿಳಿದಂತಿದೆ. ನಗರದಲ್ಲಿ ಸಂಚಾರ ವ್ಯವಸ್ಥೆ ಹದಗೆಟ್ಟಿದ್ದರೂ ಕೊಂಚವೂ ಗಮನ ಹರಿಸುತ್ತಿಲ್ಲ. ನಗರದಿಂದ ಇತರೆಡೆಗೆ ತೆರಳುವ ಹಾಗೂ ಆಗಮಿಸುವ ವಾಹನಗಳೇ ಇವರ ಟಾರ್ಗೆಟ್ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.

ರೈಲ್ವೆ ಮೇಲ್ಸೇತುವೆಗೆ ಜನರ ಒತ್ತಾಯ: ನಗರದ ಮಧ್ಯ ಭಾಗದಲ್ಲಿ ರೈಲ್ವೆ ಹಳಿ ಹಾದು ಹೋಗಿದ್ದು, ಹುಬ್ಬಳ್ಳಿ, ಬೆಂಗಳೂರು ಮಾರ್ಗವಾಗಿ ನಿತ್ಯ ಹತ್ತಾರು ರೈಲುಗಳು ಸಂಚರಿಸುತ್ತವೆ. ಒಂದು ರೈಲ್ ಕ್ರಾಸಿಂಗ್ ಆಗಲು ಸುಮಾರು 30 ನಿಮಿಷ ಸವಾರರು ಹಾಗೂ ಸಾರ್ವಜನಿಕರು ಕಾಯುವ ಸ್ಥಿತಿ ನಗರದ ಮೂರು ಕಡೆಗಳಲ್ಲಿದೆ. ಮೈದೂರು-ಗುಡುಗೂರು, ಮೇಡ್ಲೇರಿ, ಗುತ್ತಲ ಸೇರಿ ಹತ್ತಾರು ಹಳ್ಳಿಗಳಿಗೆ ಸಂಚರಿಸುವವರು ರೈಲ್ವೆ ಕ್ರಾಸಿಂಗ್ ದಾಟಿ ಹೋಗಬೇಕಿದೆ. ಸಮಸ್ಯೆಗೆ ಅಂತ್ಯ ಹಾಡಲು ರೈಲ್ವೆ ಮೇಲ್ಸೇತುವೆ ನಿರ್ವಿುಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.