ಕಾಗವಾಡ: ತಾಲೂಕಿನ ಉಗಾರ ಖುರ್ದ ಪಟ್ಟಣದ ಉಗಾರ ಸಕ್ಕರೆ ಕಾರ್ಖಾನೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಾವಳಿ ಗಾಳಿಗೆ ತೂರಿ ಅನಧಿಕೃತವಾಗಿ ಜನವಸತಿ ಸಮೀಪ ಇಥೆನಾಲ್ ಘಟಕ ಪ್ರಾರಂಭಿಸಿದೆ. ಇದರಿಂದ ಸುತ್ತಲಿನ ನಿವಾಸಿಗಳು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ ಎಂದು ಪಟ್ಟಣದ ನಿವಾಸಿಗಳು ಆರೋಪಿಸಿದ್ದಾರೆ.
ಉಗಾರ ಖುರ್ದ ಪಟ್ಟಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನೀಲ ಉನ್ಹಾಳೆ, ಗಣೇಶ ಹಿಮಕರ, ರಂಜೀತಾ ಉನ್ಹಾಳೆ, ಈ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಹಲವಾರು ಬಾರಿ ದೂರು ನೀಡಿದ್ದು, 45 ದಿನಗಳ ಒಳಗಾಗಿ ಪರಿಸರ ನಿಯಂತ್ರಣ ಮಂಡಳಿ ನಿಯಮ ಪಾಲಿಸುವಂತೆ ಕಾರ್ಖಾನೆಗೆ ಸೂಚಿಸಿದ್ದರೂ ಕಾರ್ಖಾನೆಯ ಆಡಳಿತ ಮಂಡಳಿ ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ.
ಪಟ್ಟಣದ ಜನವಸತಿ ಪ್ರದೇಶದಲ್ಲಿಯೇ ಇಥೆನಾಲ್ ಘಟಕ ತೆರೆದಿರುವುದು ನಾಗರಿಕರು ಬೆಲೆ ಕಟ್ಟುವಂತಾಗಿದೆ. ಸಂಜೆಯಾದರೆ ಕೆಟ್ಟ ವಾಸನೆ, ವಿಚಿತ್ರ ಶಬ್ದದಿಂದ ಜನ ರೋಸಿಹೋಗಿದ್ದಾರೆ. ರಾತ್ರಿ ಹೊರಸೂಸುವ ಗ್ಯಾಸ್‌ನಿಂದ ಮಕ್ಕಳು, ವೃದ್ಧರಿಗೆ ಉಸಿರಾಟದ ತೊಂದರೆ ಉಂಟಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ, ಕಾರ್ಖಾನೆಯ ಇಥೆನಾಲ್ ಘಟಕ ಸ್ಥಳಾಂತರಿಸಬೇಕು.
ಇಲ್ಲವಾದಲ್ಲಿ ತೀವ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಜು ಉನ್ಹಾಳೆ, ರೋಹಿತ ಬಸನಾಯಿಕ, ಸಚಿನ ಕಾಂಬಳೆ ಇತರರು ಇದ್ದರು.