ಗ್ಯಾಸ್ ಸಿಲಿಂಡರ್​ಗೆ ಹೆಚ್ಚುವರಿ ವಸೂಲಿ

ಚಿಕ್ಕಮಗಳೂರು: ಮನೆ ಬಾಗಿಲಿಗೆ ವಿತರಣೆ ಮಾಡುವ ಸಬ್ಸಿಡಿ ಗ್ಯಾಸ್ ಸಿಲಿಂಡರ್​ಗೆ ಎಷ್ಟು ಹಣ ಎಂಬುದನ್ನು ನಿಗದಿ ಮಾಡಲಾಗಿದೆ. ಆದರೂ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಪ್ರಶ್ನೆ ಮಾಡಿದರೆ ಸಿಲಿಂಡರ್ ಪೂರೈಕೆ ವಿಳಂಬ ಮಾಡಿ ತೊಂದರೆ ಕೊಡಲಾಗುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಏಜೆನ್ಸಿ ಮಾಲೀಕರಿಂದ ನೇಮಕಗೊಂಡಿರುವ ಕೆಲಸಗಾರರು ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಗ್ರಾಹಕರು ಅಸಮಾಧಾನಗೊಂಡಿದ್ದು, ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ.

ಗ್ರಾಹಕರಿಂದ ದೂರು ಬಂದರೂ ಕ್ರಮಕೈಗೊಳ್ಳದ ಗ್ಯಾಸ್ ಸಿಲಿಂಡರ್ ಏಜನ್ಸಿ ಮಾಲೀಕರು ಪರೋಕ್ಷವಾಗಿ ತಮ್ಮ ಕೆಲಸಗಾರರನ್ನು ಬೆಂಬಲಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಏಜೆನ್ಸಿಗಳಿಂದ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ತರೀಕೆರೆ ತಾಪಂ ಸಾಮಾನ್ಯ ಸಭೆಯಲ್ಲಿಯೂ ಸದಸ್ಯರು ಪಕ್ಷ ಭೇದ ಮರೆತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸ್ಪೋಟಕ ಅನಿಲವಾಗಿರುವುದರಿಂದ ಸುರಕ್ಷತೆ ದೃಷ್ಟಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳೂ ಕೆಲವು ನಿಯಗಳನ್ನು ರೂಪಿಸಿವೆ. ಕಂಪನಿಯಿಂದ ಬರುವ ಸಿಲಿಂಡರ್ ಲಾರಿಯನ್ನು ಗೋದಾಮಿನಲ್ಲಿ ಇಳಿಸಬೇಕು. ಅಲ್ಲಿಂದ ನೇರವಾಗಿ ಗ್ರಾಹಕರ ಮನೆ ಬಾಗಿಲಿಗೇ ಕಡ್ಡಾಯವಾಗಿ ಸಿಲಿಂಡರ್ ವಿತರಿಸಬೇಕೆಂದು ಸೂಚನೆ ಸಹ ಇದೆ. ಆದರೆ ಸಿಲಿಂಡರ್​ಗಳನ್ನು ಎಲ್ಲೆಂದರಲ್ಲಿಯೇ ವಿತರಣೆ ಮಾಡುವುದು, ದಾರಿ ಬದಿ ಸಿಲಿಂಡರ್ ರಾಶಿ ಹಾಕಿಕೊಂಡು ವಿತರಣೆ ಮಾಡುತ್ತಿದ್ದಾರೆ. ಅಲ್ಲದೆ ಹೆಚ್ಚುವರಿ ಹಣ ಕೂಡ ವಸೂಲಿ ಮಾಡುತ್ತಿವೆ. ಇದನ್ನು ನಿಯಂತ್ರಿಸಬೇಕಾದ ಆಹಾರ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

ಸರ್ಕಾರ ಗೋದಾಮಿನಿಂದ ಐದು ಕಿ.ಮೀ. ವ್ಯಾಪ್ತಿಯ ಗ್ರಾಹಕರ ಮನೆ ಬಾಗಿಲಿಗೆ ಉಚಿತವಾಗಿ ಸಿಲಿಂಡರ್ ವಿತರಣೆ ಮಾಡಬೇಕೆಂದು 2006ರಲ್ಲಿಯೇ ಕಟ್ಟು ನಿಟ್ಟಿನ ಆದೇಶ ಮಾಡಿದೆ. ಈ ಆದೇಶಗಳ ಪ್ರತಿ ಪ್ರತಿ ಏಜೆನ್ಸಿ ಮಾಲೀಕರಿಗೂ ಆಹಾರ ಇಲಾಖೆ ನೀಡಿದೆ. ಆದರೂ, ಈ ನಿಯಮಗಳನ್ನು ಉಲ್ಲಂಘಿಸಿ ಗ್ರಾಹಕರನ್ನು ಸುಲಿಗೆ ಮಾಡುತ್ತಿದ್ದಾರೆ.

ವಿತರಣೆ ನಿಯಮ: ಐದು ಕಿ.ಮೀ. ತನಕ ಉಚಿತವಾಗಿ ಸರಬರಾಜು ಮಾಡಬೇಕು. ನಂತರ ಒಂದು ಕಿ.ಮೀ. ಗೆ 1.60 ರೂ. ಮಾತ್ರ ಪಡೆಯಬೇಕು. ಉದಾಹರಣೆಗೆ ಗ್ರಾಹಕನ ಮನೆ 10 ಕಿ.ಮೀ. ದೂರ ಇದ್ದರೆ, ಇದರಲ್ಲಿ ಐದು ಕಿ.ಮೀ. ಹೋಗಿ ಬರುವ ಚಾರ್ಜ್ ಪಡೆಯಬೇಕು. 30 ಕಿ.ಮೀ. ಇದ್ದರೆ, ಇದರಲ್ಲಿ ಉಚಿತವಾಗಿರುವ 10 ಕಿ..ಮೀ. ರಿಯಾಯಿತಿ ನೀಡಿ, ಉಳಿದ 20 ಕಿ.ಮೀ.ಗೆ ಹೋಗಿ ಬರುವ ದಾರಿ ಸೇರಿ 32 ರೂ. ಹಣ ಹೆಚ್ಚುವರಿ ಪಡೆಯಬೇಕು. ಅದು ಗಣಕೀಕೃತ ಬಿಲ್​ನಲ್ಲಿಯೇ ನಮೂದಾಗಿರಬೇಕು. ಆದರೆ, ಸಿಲಿಂಡರ್ ವಿತರಿಸುವ ಕಾರ್ವಿುಕರು ಕಂಪ್ಯೂಟರ್ ಬಿಲ್​ಗಿಂತ 15-50 ರೂ. ನತಕ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ.

ನಗರ ವ್ಯಾಪ್ತಿಯ ಗ್ರಾಹಕರಿಂದ 10-20 ರೂ. ತನಕ ವಸೂಲಿ ಮಾಡಲಾಗುತ್ತದೆ. ಗ್ರಾಮಾಂತರ ಗ್ರಾಹಕರಿಂದ ಬಿಲ್​ಗಿಂತ 20-50 ರೂ. ತನಕ ಅಧಿಕ ಹಣ ವಸೂಲಿ ಮಾಡಲಾಗುತ್ತಿದೆ. ಇದು ಸಾಮಾನ್ಯವೆಂದು ಗ್ರಾಹಕರು ಒಪ್ಪಿಕೊಂಡಿರುವುದರಿಂದ ಹೆಚ್ಚುವರಿ ಹಣ ತೆರಬೇಕಾದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದರ ಬಗ್ಗೆ ಮೌಖಿಕ ದೂರು ನೀಡಿದರೂ, ಆಹಾರ ಇಲಾಖೆಯವರು ಲಿಖಿತ ದೂರು ನೀಡಬೇಕೆನ್ನುತ್ತಾರೆ. ಆದರೆ, ರಾಜಕೀಯ ಬಲಾಢ್ಯರಾಗಿರುವ ಏಜೆನ್ಸಿ ಮಾಲೀಕರ ವಿರುದ್ಧ ಲಿಖಿತವಾಗಿ ದೂರು ನೀಡಲು ಗ್ರಾಹಕರು ಹಿಂದೇಟು ಹಾಕುತ್ತಾರೆ.