13 ಡಿಸಿಗಳ ಸಾರಥಿಯಾಗಿದ್ದ ರುಕ್ಮಯ ನಾಯ್ಕ!

<<31 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ * ಒಂದೇ ಒಂದು ಅಪಘಾತ ಮಾಡಿಲ್ಲ>>

ಅವಿನ್ ಶೆಟ್ಟಿ ಉಡುಪಿ
ಉಡುಪಿ ಜಿಲ್ಲೆಯ 13 ಜಿಲ್ಲಾಧಿಕಾರಿಗಳಿಗೆ ಸಾರಥಿಯಾಗಿ ಸೇವೆ ಸಲ್ಲಿಸಿದ ಕಾರು ಚಾಲಕ ರುಕ್ಮಯ ನಾಯ್ಕ(60) 31 ವರ್ಷಗಳ ಸಾರ್ಥಕ ಸೇವೆ ಬಳಿಕ ಮಾ.30ರಂದು ನಿವೃತ್ತಿಯಾಗಲಿದ್ದಾರೆ. ಇವರಿಗೆ ಸರ್ಕಾರದಿಂದ ಅತ್ಯುತ್ತಮ ನಾಗರಿಕ ಸೇವೆ ಪ್ರಶಸ್ತಿ ದೊರೆತಿದೆ.

ಯಾರೇ ಜಿಲ್ಲಾಧಿಕಾರಿಯಾಗಿ ಬಂದರೂ ಅವರಿಗೆ ನೆಚ್ಚಿನ ಚಾಲಕರಾಗಿ ರುಕ್ಮಯ ಗುರುತಿಸಿಕೊಳ್ಳುತ್ತಾರೆ. ಸಮರ್ಥ ಕಾರು ಚಾಲನೆ, ವಾಹನ ನಿರ್ವಹಣೆ, ಚಾಲಕ ವೃತ್ತಿಯಲ್ಲಿ ಬದ್ಧತೆಯಿಂದ ಎಲ್ಲ ಡಿಸಿಗಳಿಂದ ಭೇಷ್ ಎನಿಸಿಕೊಂಡಿದ್ದಾರೆ. ತಮ್ಮ 31 ವರ್ಷ 1 ತಿಂಗಳ ವೃತ್ತಿ ಜೀವನದಲ್ಲಿ ಇಲ್ಲಿವರೆಗೂ ಒಂದೇ ಒಂದು ಅಪಘಾತ ಮಾಡಿಲ್ಲ. ಡಿಸಿ ಕಚೇರಿಯ ಎಲ್ಲ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ರುಕ್ಮಯ ಎಂದರೆ ಪ್ರೀತಿಪಾತ್ರರು. ಬಡತನ ಕುಟುಂಬದಿಂದ ಬೆಳೆದು ಬಂದ ರುಕ್ಮಯ ನಾಯ್ಕ ಏಳನೇ ತರಗತಿ ಕಲಿತರೂ ವೃತ್ತಿ ಜೀವನದಲ್ಲಿ ಫಸ್ಟ್‌ಕ್ಲಾಸ್. 70ರ ದಶಕದಲ್ಲಿ ಮಂಗಳೂರಿನಲ್ಲಿ ಲಾರಿಯಲ್ಲಿ ಕ್ಲೀನರ್ ಆಗಿ, ಲಾರಿ ಚಾಲನೆ ಕಲಿತು ಮುಂದೆ ಲಾರಿ ಚಾಲಕರಾಗಿದ್ದರು. 1988ರ ಫೆ.20ರಂದು ಸರ್ಕಾರಿ ಸೇವೆ ವಾಹನ ಚಾಲಕರಾಗಿ ಸೇವೆಗೆ ಸೇರಿದ್ದರು.

ಡಿಸಿ ಕಚೇರಿಗೆ ಕರೆಸಿಕೊಂಡ ಗೌರವ್ ಗುಪ್ತ
ರುಕ್ಮಯರು ಸರ್ಕಾರಿ ಸೇವೆಗೆ ಸೇರಿದ ಬಳಿಕ ಆರಂಭದಲ್ಲಿ ಕುಂದಾಪುರ ತಾಪಂ, ಕುಂದಾಪುರ ತಾಲೂಕು ಕಚೇರಿಯಲ್ಲಿ ಸೇವೆ ಸಲ್ಲಿಸಿ ಬಳಿಕ ಕುಂದಾಪುರ ಉಪವಿಭಾಗ ಅಧಿಕಾರಿ ಕಚೇರಿಯಲ್ಲಿ ಚಾಲಕರಾಗಿ ನಿಯೋಜನೆಗೊಂಡರು. ಸುಮಾರು 10 ವರ್ಷ ಕುಂದಾಪುರ ಎಸಿ ಕಚೇರಿಯಲ್ಲಿ ಚಾಲಕರಾಗಿದ್ದರು. ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತ ಕುಂದಾಪುರದಲ್ಲಿ ಕೆಲಕಾಲ ಎಸಿ ಆಗಿ ಕಾರ್ಯನಿರ್ವಹಿಸಿದ್ದಾಗ ರುಕ್ಮಯರೇ ಕಾರು ಚಾಲಕರಾಗಿದ್ದರು. 2000ನೇ ಇಸವಿಯಲ್ಲಿ ಗೌರವ್ ಗುಪ್ತ ಉಡುಪಿ ಜಿಲ್ಲಾಧಿಕಾರಿಯಾಗಿ ಬಂದಾಗ ರುಕ್ಮಯ ಅವರನ್ನೇ ಕಾರು ಚಾಲಕರಾಗಬೇಕು ಎಂದು ಕುಂದಾಪುರ ಎಸಿ ಕಚೇರಿಯಿಂದ ಡಿಸಿ ಕಚೇರಿಗೆ ಕರೆಸಿಕೊಂಡರು.

ಸಾರಥ್ಯ ನಿಭಾವಣೆ: ರುಕ್ಮಯ ನಾಯ್ಕ 2001ರಿಂದ ಜಿಲ್ಲಾಧಿಕಾರಿಗಳಿಗೆ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಉಡುಪಿ ಜಿಲ್ಲಾಧಿಕಾರಿಗಳಾಗಿದ್ದ ಗೌರವ್ ಗುಪ್ತ, ಎಸ್.ಆರ್.ಉಮಾಶಂಕರ್, ಶಾಮ್ ಭಟ್, ಶಾಂತರಾಜ್, ವಿ.ಪೊನ್ನುರಾಜ್, ಹೇಮಲತಾ ಪಿ, ಡಾ.ಟಿ.ಎಂ ರೇಜು, ಡಾ.ಮುದ್ದುಮೋಹನ್, ಎಸ್.ಎಸ್ ಪಟ್ಟಣಶೆಟ್ಟಿ, ಡಾ.ವಿಶಾಲ್ ಆರ್., ಟಿ.ವೆಂಕಟೇಶ್, ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರಿಗೆ ಕಾರು ಚಾಲಕರಾಗಿದ್ದಾರೆ.

ಸುಖಿ ಕುಟುಂಬ: ಮೂಲತ ಬೆಳ್ತಂಗಡಿ ಕಣಿಯೂರು ಗ್ರಾಮದ ರುಕ್ಮಯ ನಾಯ್ಕ ಸದ್ಯ ಉಡುಪಿ 76ನೇ ಬಡಗಬೆಟ್ಟು ಬೈಲೂರು ಮಹಿಷಮರ್ದಿನಿ ದೇಗುಲ ಸಮೀಪ ಸ್ವಂತ ಮನೆಯಲ್ಲಿ ನೆಲೆಸಿದ್ದಾರೆ. ರುಕ್ಮಯ ಅವರ ಪತ್ನಿ ವಿಜಯಬಾಯಿ ಆದಿ ಉಡುಪಿ ಅನುದಾನಿತ ಶಾಲೆಯಲ್ಲಿ ಶಿಕ್ಷಕಿ. ಇಬ್ಬರು ಪುತ್ರರಿದ್ದು, ಹಿರಿಯ ಮಗ ಕೆ.ಆರ್. ಅಜಯ್ ಇನ್ಫೋಸಿಸ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಅಮೇರಿಕದ ಕ್ಯಾಲಿಫೋರ್ನಿಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ಪುತ್ರ ಕೆ.ಆರ್ ಅಕ್ಷಯ್ ಎಂಜಿಎಂ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಸರ್ಕಾರಿ ಕಾರು ಚಾಲಕನಾಗಿ 31 ವರ್ಷ ಸೇವೆ ಸಲ್ಲಿಸಿದ ಸಾರ್ಥಕ ಭಾವವಿದೆ. 2001ರಿಂದ 13 ಜಿಲ್ಲಾಧಿಕಾರಿಗಳಿಗೆ ಚಾಲಕನಾಗಿ ಕಾರ್ಯನಿರ್ವಹಿಸಿದ್ದೇನೆ. ಕೆಲಸ ಯಾವುದೇ ಇರಲಿ ವೃತ್ತಿ ಮೇಲಿನ ಬದ್ಧತೆ, ಪ್ರೀತಿ ಇದ್ದಲ್ಲಿ ನೆಮ್ಮದಿಯ ಜೀವನ ನಮ್ಮದಾಗುತ್ತದೆ.
– ರುಕ್ಮಯ ನಾಯ್ಕ, ಜಿಲ್ಲಾಧಿಕಾರಿ ಕಾರು ಚಾಲಕ