ಪಾಳುಬಿದ್ದ ಹಳೇ ಉಪನೋಂದಣಿ ಕಚೇರಿ

<ಸರ್ಕಾರಿ ಆಸ್ಪತ್ರೆ ಸುಪರ್ದಿಯಲ್ಲಿ ಕಚೇರಿ ನಿವೇಶನ ಹಿನ್ನೆಲೆ ನವೀಕರಣಕ್ಕೆ ಅಡ್ಡಿ>

ಶ್ರವಣ್‌ಕುಮಾರ್ ನಾಳ, ಪುತ್ತೂರು

ಉಪನೋಂದಣಿ ಕಚೇರಿ ಹಳೇ ಕಟ್ಟಡವೀಗ ಪಾಳುಬಿದ್ದಿದೆ. ಸರ್ಕಾರಿ ಸೇವೆ ನೀಡುವ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಪುತ್ತೂರು ಉಪನೋಂದಣಿ ಕಚೇರಿಯನ್ನು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಿದ ನಂತರ ಹಳೇ ಉಪನೋಂದಣಿ ಕಚೇರಿ ಕಟ್ಟಡ ಭಿಕ್ಷುಕರ, ಕುಡುಕರ ಅಡ್ಡೆಯಾಗಿ ಪರಿಣಮಿಸಿದೆ.

ಈ ಹಿಂದೆ ಇದ್ದ ಪುತ್ತೂರು ಉಪನೋಂದಣಿ ಕಚೇರಿ ಇಕ್ಕಟ್ಟಾಗಿದ್ದು, ವಿಸ್ತರಿಸುವ ಅಗತ್ಯವಿರುವ ಕಾರಣ ಈ ಕಚೇರಿ ಪುತ್ತೂರು ಮಿನಿ ವಿಧಾನಸೌಧಕ್ಕೆ ಶ್‌ಟಿ ಮಾಡಲಾಯಿತು. ಇದಕ್ಕೂ ಮುನ್ನ ಈ ಕಟ್ಟಡದಲ್ಲೇ ಉಪನೋಂದಣಿ ಕಚೇರಿ ಉಳಿಸಿಕೊಂಡು ಕಟ್ಟಡ ವಿಸ್ತರಣೆ, ಹಳೇ ಕಟ್ಟಡ ನವೀಕರಣ ಯೋಜನೆಗೂ ಕೈಹಾಕಲಾಯಿತು. ಈ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಪ್ರಸ್ತಾವನೆ ಆಹ್ವಾನಿಸಲಾಗಿತ್ತು. ಆಗ ಉಪನೋಂದಣಿ ಕಚೇರಿ ಬದಿಯಿಂದ ಒಂದು ಹಾಲ್ ತೆಗೆದುಕೊಳ್ಳುವ ರೂಪುರೇಷೆ ತಯಾರಿಸಲಾಯಿತು. ಕಟ್ಟಡಕ್ಕೆ ಅಂದಾಜು 15.40 ಲಕ್ಷ ರೂ. ಅನುದಾನದ ಅಗತ್ಯವಿದೆ ಎಂದು ತಿಳಿಸಲಾಗಿದೆ. ಆದರೆ ಹಳೇ ಉಪನೋಂದಣಿ ಕಚೇರಿಯಿರುವ ಜಾಗ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಸೇರಿದ್ದು ಎಂಬ ತಕರಾರು ಬಂದ ಕಾರಣ ತಕ್ಷಣ ಯೋಜನೆ ಕೈಬಿಟ್ಟು ಮಿನಿ ವಿಧಾನಸೌಧಕ್ಕೆ ಸ್ಥಳಾಂತರಿಸಲಾಯಿತು.

ಹಣಕಾಸು ಸಚಿವಾಲಯಕ್ಕೆ ಪ್ರಸ್ತಾವನೆ: ಸದ್ಯಕ್ಕೆ ಹಳೇ ಉಪನೋಂದಣಿ ಕಚೇರಿ ಜಾಗ ಪುತ್ತೂರು ಸರ್ಕಾರಿ ಆಸ್ಪತ್ರೆ ಹೆಸರಿನಲ್ಲಿದೆ. ಈ ಜಾಗವನ್ನು ಸರ್ಕಾರ ಖರೀದಿಸಿ ಉಪನೋಂದಣಿ ಕಚೇರಿ ನಿರ್ಮಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ಪುತ್ತೂರು ಜಿಲ್ಲೆ ಆಗುವ ನಿಟ್ಟಿನಲ್ಲಿ ಪುತ್ತೂರಿಗೆ ಸುಸಜ್ಜಿತ ಉಪನೋಂದಣಿ ಕಚೇರಿ ಅಗತ್ಯ. ಈ ಜಾಗವನ್ನು ಸರ್ಕಾರ ಖರೀದಿಸಿ ಉಪನೋಂದಣಿ ಕಚೇರಿ ನಿರ್ಮಾಣ ಮಾಡುವ ಯೋಜನೆ ಸದ್ಯ ಚೆಂಡು ರಾಜ್ಯ ಸರ್ಕಾರದ ಹಣಕಾಸು ಸಚಿವಾಲಯದ ಅಂಗಳದಲ್ಲಿದೆ.

ಉಪನೋಂದಣಿ ಕಚೇರಿ ಹಳೇ ಕಟ್ಟಡವೀಗ ಪುತ್ತೂರು ಸರ್ಕಾರಿ ಆಸ್ಪತ್ರೆ ಸುಪರ್ದಿಯಲ್ಲಿದೆ. ಇದರ ನಿರ್ವಹಣೆ ಅವರೇ ನೋಡಿಕೊಳ್ಳಬೇಕು. ಪಾಳು ಬಿದ್ದು ಭಿಕ್ಷುಕರ ಆವಾಸಸ್ಥಾನವಾಗಿರುವ ಬಗ್ಗೆ ಆಸ್ಪತ್ರೆಯಿಂದ ಮಾಹಿತಿ ಕೇಳಿ ಕ್ರಮ ಕೈಗೊಳ್ಳಲಾಗುವುದು.
ಎಚ್. ಕೃಷ್ಣಮೂರ್ತಿ,
ಪುತ್ತೂರು ಉಪವಿಭಾಗೀಯಾಧಿಕಾರಿ