ಡಿಕೆ ಬ್ರದರ್ಸ್ ಚಂದ್ರಶೇಖರ್​ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ: ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ

ರಾಮನಗರ: ಡಿಕೆ ಬ್ರದರ್ಸ್​ ರಾಮನಗರ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್​ಗೆ ಕೊಲೆ ಬೆದರಿಕೆ ಹಾಕಿ, ತಮ್ಮತ್ತ ಸೆಳೆದಿದ್ದಾರೆ. ಕೊಲೆ ಬೆದರಿಕೆಗೆ ಹೆದರಿ ಚಂದ್ರಶೇಖರ್​​ ಬಿಜೆಪಿ ತೊರೆದಿದ್ದಾರೆ ಎಂದು ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್​ ಆರೋಪ ಮಾಡಿದ್ದಾರೆ.

ರಾಮನಗರ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮುಖಂಡರಿಂದ, ಕಾರ್ಯಕರ್ತರಿಂದ ಚಂದ್ರಶೇಖರ್ ಅವರಿಗೆ ಯಾವುದೇ ಮೋಸ ಆಗಿಲ್ಲ. ಅವರೇನಾದರೂ ರಾಮನಗರ ಬಿಜೆಪಿ ನಾಯಕರು ಮೋಸ ಮಾಡಿದ್ದೇವೆ ಎಂದು ಹೇಳಿದರೆ ನಾವು ಕತ್ತು ಕೂಯ್ದುಕೊಂಡು ಸಾಯುತ್ತೇವೆ ಎಂದರು.

ಸಂಸದ ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಕುಮಾರಸ್ವಾಮಿ ಅವರಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ. ಅಣ್ಣತಮ್ಮಂದಿರ ಮಧ್ಯ ಇರಲಾಗದೆ ಅವರು ಕಾಂಗ್ರೆಸ್​ ತೊರೆದು ಬಿಜೆಪಿಗೆ ಬಂದಿದ್ದರು. ಆದರೆ ಈಗ ಈಗೇಕೆ ಬಿಜೆಪಿ ತೊರೆದು ಕಾಂಗ್ರೆಸ್​​ಗೆ ಹೋಗಬೇಕಿತ್ತು. ಆರ್​.ಅಶೋಕ್ ಜತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ತೂಗಿ ಅಳೆದು ನಾವು ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿತ್ತು. ಅನಿತಾ ಕುಮಾರಸ್ವಾಮಿ ಹೋದಲ್ಲೆಲ್ಲ ಜನ ತಿರುಗಿಬಿದ್ದಿದ್ದರು. ಇದರಿಂದ ಅನಿತಾಗೆ ಸೋಲುವ ಭಯ ಕಾಡುತ್ತಿತ್ತು ಹೀಗಾಗಿ ಚಂದ್ರಶೇಖರ್​ಗೆ ಆಮಿಷ ನೀಡಿ ಸೆಳೆದಿದ್ದಾರೆ. ಯೋಗೇಶ್ವರ್ ಮತ್ತು ಚಂದ್ರಶೇಖರ್ ನಡುವೆ ವೈಯಕ್ತಿಕವಾಗಿ ಏನು ಸಮಸ್ಯೆ ಇತ್ತೋ ನನಗೆ ಗೊತ್ತಿಲ್ಲ ಎಂದರು.

ಬಿಜೆಪಿಗೆ ಮತ ಹಾಕಿ
ಉಪಚುನಾವಣೆಯಲ್ಲಿ ಬಿಜೆಪಿಗೆ ಮತಹಾಕಿ ಎಂದು ಜನತೆ ಬಳಿ ಕೇಳುತ್ತೇವೆ. ಬಿಜೆಪಿ ಗೆದ್ದರೆ ಅಭ್ಯರ್ಥಿಯ ನಿರ್ಧಾರ ಏನಾಗಿರೊತ್ತೋ ಮುಂದೆ ನೋಡೋಣ. ಅವರು ಬಿಜೆಪಿಗೆ, ಶಾಸಕ ಸ್ಥಾನಕ್ಕೆ ಆಗ ರಾಜೀನಾಮೆ ನೀಡಬೇಕಾಗುತ್ತೆ ಎಂದರು.