ವಿಜಯವಾಣಿ ಸುದ್ದಿಜಾಲ ಹಾಸನ
ಚನ್ನರಾಯಪಟ್ಟಣ ತಾಲೂಕು ಎಂ.ದಾಸಾಪುರ ಗ್ರಾಮದ ಸಂತ ಮರಿಯಮ್ಮನ ಚರ್ಚ್ ಫಾದರ್ ಯುವತಿ ಜತೆಗೆ ಇರುವ ಅಸಭ್ಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ನಾಲ್ಕು ವರ್ಷದಿಂದ ಚರ್ಚ್‌ನಲ್ಲಿ ಧರ್ಮಗುರುವಾಗಿರುವ ಫಾದರ್ ವರದರಾಜು, ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದಾರೆ. ಎಂ.ದಾಸಾಪುರದಲ್ಲಿ ಕ್ರಿಶ್ಚಿಯನ್ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಮದುವೆ ನಿರಾಕರಣೆಯಿಂದ ಫೋಟೊ ವೈರಲ್?: ಫೋಟೊದಲ್ಲಿರುವ ಯುವತಿ ತುಮಕೂರಿನ ಕ್ರೈಸ್ಟ್ ಶಿಕ್ಷಣ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ನಾಲ್ಕು ವರ್ಷದಿಂದ ಇಬ್ಬರು ಪ್ರೀತಿಸುತ್ತಿದ್ದು, ಮದುವೆ ಮಾತುಕತೆಯೂ ನಡೆದಿತ್ತು. ಆದರೆ ಮದುವೆ ವಿಚಾರಕ್ಕೆ ವರದರಾಜು ಸಕಾರಾತ್ಮಕ ಪ್ರತಿಕ್ರಿಯೆ ನೀಡದ ಕಾರಣ ಯುವತಿ ಬೇಸರಗೊಂಡಿದ್ದರು. ಮೋಜಿಗಾಗಿ ಪ್ರೀತಿ ಮಾಡಿದ್ದಾನೆಂಬ ಸಿಟ್ಟಿನಿಂದ ಯುವತಿ ಆತನೊಂದಿಗೆ ತೆಗೆಸಿಕೊಂಡಿದ್ದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ.
ಇಬ್ಬರ ಪ್ರೇಮ ಪುರಾಣ ಬಯಲಾಗುತ್ತಿದ್ದಂತೆ ವರದರಾಜು ನಾಪತ್ತೆಯಾಗಿದ್ದಾನೆ. ಇನ್ನು ಹಾಸನ ಚರ್ಚ್‌ನ ಹಿರಿಯ ಪಾದ್ರಿಗಳು ಗ್ರಾಮಕ್ಕೆ ಆಗಮಿಸಿ ಮೊಕ್ಕಾಂ ಹೂಡಿ ಪರಿಶೀಲನೆ ಮುಂದಾಗಿದ್ದಾರೆ. ಗ್ರಾಮದ ಕೆಲವರು ಆತನ ಪರ ವಕಾಲತ್ತು ವಹಿಸುತ್ತಿದ್ದಾರೆ. ಇನ್ನು ಕೆಲವರು ಆತ ದಾಸಾಪುರ ಚರ್ಚ್‌ಗೆ ಬರುವುದು ಬೇಡ ಎಂದು ಪಟ್ಟು ಹಿಡಿದಿದ್ದಾರೆ.
ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಈ ವಿಚಾರವಾಗಿ ಜೋರು ಗಲಾಟೆ ಸಹ ನಡೆದಿದ್ದು, ಹಿರಿಯ ಪಾದ್ರಿಗಳು ಎರಡೂ ಕಡೆಯವರನ್ನು ಕರೆಸಿ ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.
ಅನ್ಯರಿಗೆ ಪ್ರವೇಶವಿಲ್ಲ: 130 ಮನೆಗಳಿರುವ ಎಂ.ದಾಸಾಪುರದಲ್ಲಿ ಎಲ್ಲರೂ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದು, ದಲಿತ ವರ್ಗಕ್ಕೆ ಸೇರಿದ ಒಂದು ಕುಟುಂಬ ಮಾತ್ರ ಇದೆ. ಗ್ರಾಮದಲ್ಲಿ ಏನೇ ಸಮಸ್ಯೆಯಾದರೂ ಪಕ್ಕದ ಊರಿನ ಜನರು ಅಲ್ಲಿಗೆ ಭೇಟಿ ನೀಡುವಂತಿಲ್ಲ. ಹೀಗಾಗಿ ಎಂ. ದಾಸಾಪುರ ಎಂದರೆ ತಾಲೂಕಿನ ಜನತೆಗೆ ತಾತ್ಸಾರ. ಈ ರೀತಿಯ ಘಟನೆಗಳು ಅಲ್ಲಿ ನಡೆಯುತ್ತಲೇ ಇರುತ್ತವೆ. ಯಾವುದನ್ನೂ ಅವರು ಬಿಟ್ಟುಕೊಡುವುದಿಲ್ಲ ಎಂದು ನುಗ್ಗೇಹಳ್ಳಿಯ ನಿವಾಸಿಯೊಬ್ಬರು ತಿಳಿಸಿದರು.
ಚಿತ್ರ
ವರದರಾಜು