ಕೈ ಸರ್ಜಿಕಲ್ ದಾಳಿ ಸುಳ್ಳು?: ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ

ನವದೆಹಲಿ: ಯುಪಿಎ ಆಡಳಿತ ಅವಧಿಯಲ್ಲೂ ಆರು ಸರ್ಜಿಕಲ್ ದಾಳಿ ನಡೆದಿತ್ತು. ಆದರೆ, ಇದನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿರುವ ಬೆನ್ನಿಗೆ, ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿ ಕೇಳಲಾಗಿದ್ದ ಪ್ರಶ್ನೆಯಿಂದಾಗಿ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ.

ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಸರ್ಜಿಕಲ್ ದಾಳಿ ನಡೆದ ಬಗ್ಗೆ ದಾಖಲೆ ಇಲ್ಲ ಎಂದು ಆರ್​ಟಿಐ ಅರ್ಜಿಗೆ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಿದೆ. ಜಮ್ಮು- ಕಾಶ್ಮೀರದ ಆರ್​ಟಿಐ ಕಾರ್ಯಕರ್ತ ರೋಹಿತ್ ಚೌಧರಿ ರಕ್ಷಣಾ ಸಚಿವಾಲಯಕ್ಕೆ ಅರ್ಜಿಯೊಂದನ್ನು ಸಲ್ಲಿಸಿದ್ದರು. ಸಂಯುಕ್ತ ಪ್ರಗತಿಪರ ರಂಗ (ಯುಪಿಎ) ಆಡಳಿತಾವಧಿಯಲ್ಲಿ (2004ರಿಂದ 2014) ಉಗ್ರರ ದಮನಕ್ಕೆ ಗಡಿಯಾಚೆ ಸರ್ಜಿಕಲ್ ದಾಳಿ ನಡೆಸಲಾಗಿತ್ತೆ? ಹಾಗಿದ್ದರೆ ಈ ಬಗ್ಗೆ ಮಾಹಿತಿ ನೀಡಿ ಎಂದು ಕೋರಿದ್ದರು. ಇದಕ್ಕೆ ಉತ್ತರ ನೀಡಿರುವ ಸೇನಾ ಕಾರ್ಯಾಚರಣೆ ಮಹಾನಿರ್ದೇಶಕರ (ಡಿಜಿಎಂಒ) ಕಚೇರಿ, ಲಭ್ಯವಿರುವ ದಾಖಲೆಗಳ ಪ್ರಕಾರ 2016ರ ಸೆ. 29ಕ್ಕೂ ಮೊದಲು ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಉತ್ತರಿಸಿದೆ.

ಉತ್ತರ ಕಾಶ್ಮೀರದ ಉರಿ ಸೇನಾ ನೆಲೆ ಮೇಲೆ ನಡೆದ ಉಗ್ರರ ದಾಳಿಯ ನಂತರ 2016ರ ಸೆ.29ರಂದು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಉಗ್ರರ ನೆಲೆಯನ್ನು ಗುರಿಯಾಗಿಟ್ಟುಕೊಂಡು ಭಾರತೀಯ ಸೇನೆ ಸರ್ಜಿಕಲ್ ದಾಳಿ ನಡೆಸಿತ್ತು. ಕಳೆದ ಫೆ. 14ರಂದು ನಡೆದಿದ್ದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಫೆ. 26ರಂದು ಪಾಕ್​ನ ಬಾಲಾಕೋಟ್ ಸೇರಿ ಮೂರು ಕಡೆ ವೈಮಾನಿಕ ದಾಳಿ ನಡೆಸಲಾಗಿತ್ತು. ಪಿಒಕೆಯಲ್ಲಿ ನಡೆದ ಸರ್ಜಿಕಲ್ ದಾಳಿ ಮತ್ತು ಫೆಬ್ರವರಿಯಲ್ಲಿ ಬಾಲಾಕೋಟ್ ಮೇಲೆ ನಡೆದ ವೈಮಾನಿಕ ದಾಳಿಯನ್ನು ಮೊದಲು ಸಂದೇಹಿಸಿದ್ದ ಪ್ರತಿಪಕ್ಷಗಳು ಈ ದಾಳಿಗಳಿಗೆ ಸಾಕ್ಷ್ಯ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು.

ತಮ್ಮ ಅವಧಿ ಯಲ್ಲೂ ಸರ್ಜಿಕಲ್ ದಾಳಿ ನಡೆದಿತ್ತೆಂದು ಕಾಂಗ್ರೆಸ್ ಮುಖಂಡರು ಹೇಳುತ್ತಿರುವುದು ಸುಳ್ಳು. ಇಂಥದ್ದೇ ನಾದರೂ ನಡೆದಿದ್ದರೆ ದಾಖಲೆ ಇರಬೇಕಲ್ಲವೆ?

| ರೋಹಿತ್ ಚೌಧರಿ ಆರ್​ಟಿಐ ಕಾರ್ಯಕರ್ತ

ವಿಡಿಯೋ ಗೇಮ್

ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಯುಪಿಎ ಅವಧಿಯಲ್ಲಿ ಗಡಿಯಾಚೆ ಯಾವತ್ತೂ ಸರ್ಜಿಕಲ್ ಸ್ಟ್ರೈಕ್ ನಡೆದೇ ಇಲ್ಲ. ಈ ರೀತಿ ಏನಾದರೂ ಆಗಿದ್ದರೆ ಅದು ವಿಡಿಯೋ ಗೇಮ್ಲ್ಲಿರಬೇಕು ಎಂದು ವ್ಯಂಗ್ಯವಾಡಿದ್ದರು. ಪ್ರಧಾನಿ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ್ದ ರಾಹುಲ್ ಗಾಂಧಿ, ಸರ್ಜಿಕಲ್ ಸ್ಟ್ರೈಕ್ ನಡೆಸಿರುವುದು ಸೇನೆ. ಭಾರತೀಯ ಸೇನೆ ಪ್ರಧಾನಿ ಮೋದಿಯವರ ವೈಯಕ್ತಿಕ ಆಸ್ತಿಯಲ್ಲ. ಯುಪಿಎ ಅವಧಿಯಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್​ಗೆ ದಾಖಲೆ ಇದೆ. ಇದನ್ನು ವಿಡಿಯೋ ಗೇಮ್ ಎಂದು ಹಂಗಿಸಿರುವ ಪ್ರಧಾನಿ ಸೇನೆಗೆ ಅಪಮಾನ ಮಾಡಿದ್ದಾರೆ ಎಂದಿದ್ದಾರೆ.

ಆರು ಸರ್ಜಿಕಲ್ ಸ್ಟ್ರೈಕ್ ನಡೆದಿತ್ತು ಎಂದಿದ್ದ ಕಾಂಗ್ರೆಸ್

ಯುಪಿಎ ಆಡಳಿತದ ಹತ್ತು ವರ್ಷದ ಅಧಿಕಾರಾವಧಿಯಲ್ಲಿ ಆರು ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಉಗ್ರರನ್ನು ಸದೆಬಡಿಯಲಾಗಿತ್ತು. ಆದರೆ, ಈ ಬಗ್ಗೆ ಪ್ರಚಾರ ಮಾಡಿರಲಿಲ್ಲ ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಇನ್ನಿತರ ನಾಯಕರು ಹೇಳಿಕೆ ನೀಡಿದ್ದರು. ಈ ಬಗ್ಗೆ ಕಾಂಗ್ರೆಸ್ ವಕ್ತಾರ ರಾಜೀವ್ ಶುಕ್ಲಾ ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಸರ್ಜಿಕಲ್ ಸ್ಟ್ರೈಕ್​ನ ವಿವರವನ್ನೂ ನೀಡಿದ್ದರು. ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಕೂಡ, ಅಪರೇಷನ್ ಜಿಂಜರ್ ಹೆಸರಿನಲ್ಲಿ 2011ರಲ್ಲಿ ಸರ್ಜಿಕಲ್ ದಾಳಿ ನಡೆದಿತ್ತು. ಸರ್ಜಿಕಲ್ ಸ್ಟ್ರೈಕ್ ಎಂಬುದು ಸಂಭ್ರಮಾಚರಣೆಯ ವಿಷಯವಲ್ಲ. ಇದು ದೇಶ ಮತ್ತು ದೇಶದ ಗಡಿಯನ್ನು ಸುರಕ್ಷಿತವಾಗಿ ಇರಿಸುವ ಕಾರ್ಯಾಚರಣೆ. ಆದರೆ, ಈ ಬಗ್ಗೆ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಎಂದೂ ಡಂಗುರ ಬಾರಿಸಿರಲಿಲ್ಲ ಎಂದು ಹೇಳಿದ್ದರು.