ಸಿಎಂ ಸಂಬಂಧಿಕರಿಂದ ಮೀಸಲು ಅರಣ್ಯ ಭೂಮಿ ಕಬಳಿಕೆ?

ಮಂಡ್ಯ: ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ಸಂಬಂಧಿಕರಿಂದ ಕೋಟ್ಯಂತರ ರೂ. ಮೌಲ್ಯದ ಮೀಸಲು ಅರಣ್ಯ ಭೂಮಿ ಕಬಳಿಕೆ ಆಗಿದೆ ಎಂದು ಆರೋಪಿಸಲಾಗಿದೆ.

ಕುಮಾರಸ್ವಾಮಿ ಅವರ ಸಹೋದರ ಎಚ್​.ಡಿ. ಬಾಲಕೃಷ್ಣ ಅವರ ಪತ್ನಿಯ ಸಂಬಂಧಿಯೊಬ್ಬರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ 30 ಎಕರೆಗೂ ಹೆಚ್ಚು ಭೂಮಿ ಕಬಳಿಸಿದ್ದಾರೆ. ಗಣಂಗೂರು ಸರ್ವೇ ನಂ.24, 30, 31, 32, 34 ರ ಭೂಮಿ. ಕಡಿಮೆ ದರಕ್ಕೆ ಖರೀದಿ ಮಾಡಿರುವಂತೆ ದಾಖಲೆ ಸೃಷ್ಟಿಸಿ, ಭೂಮಿಯನ್ನು ಕಬಳಿಸಿದ್ದಾರೆ. ಸಿಎಂ ಸಂಬಂಧಿಕರ ಹೆಸರಿಗೆ ಕಂದಾಯ ಇಲಾಖೆ ಅಧಿಕಾರಿಗಳು ದಾಖಲೆ ಮಾಡಿಕೊಟ್ಟಿದ್ದಾರೆಂದು ಎಂದು ಆರ್​ಟಿಐ ಕಾರ್ಯಕರ್ತ ಕೆ.ಆರ್​. ರವೀಂದ್ರ  ದಾಖಲೆಗಳನ್ನು ಬಿಡುಗಡೆ ಮಾಡಿ ಆರೋಪ ಮಾಡಿದ್ದಾರೆ.

ಕಬಳಿಕೆ ಮಾಡಿರುವ ಜಮೀನನ್ನು ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಗೆ ಬಾಡಿಗೆ ನೀಡಲಾಗಿದೆ. ದಿಲೀಪ್ ಬಿಲ್ಡ್ ಕಾನ್ ಸಂಸ್ಥೆಯವರು ಮರ, ಗಿಡ ಕಡಿದು 70 ರಿಂದ 80 ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ. ಡಿ.7 ರಂದು ಪಾಂಡವಪುರ ಪ್ರವಾಸ ಕೈಗೊಳ್ಳಲಿರುವ ಸಿಎಂ ಖುದ್ದು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಬೇಕು. ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.