ರಕ್ತದ ಮಡುವಿನಲ್ಲಿ ಪತ್ತೆಯಾಯಿತು ಆರ್​ಎಸ್​ಎಸ್​ ಕಾರ್ಯಕರ್ತನ ಕುಟುಂಬ: 8 ತಿಂಗಳ ಗರ್ಭಿಣಿ, ಮಗುವನ್ನೂ ಬಿಡದ ಪಾಪಿಗಳು

ಕೋಲ್ಕತ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ, ಅತನ ಗರ್ಭಿಣಿ ಪತ್ನಿ ಹಾಗೂ 6 ವರ್ಷದ ಮಗುವನ್ನು ಅಮಾನುಷವಾಗಿ ಕೊಲೆಗೈದಿರುವ ಘಟನೆ ಪಶ್ಚಿಮಬಂಗಾಳದ ಮುರ್ಷಿದಾಬಾದ್​ನಲ್ಲಿ ಮಂಗಳವಾರ ನಡೆದಿದೆ.

ಪ್ರಾಥಮಿಕ ಶಾಲಾ ಶಿಕ್ಷಕನಾಗಿದ್ದ ಪ್ರಕಾಶ್ (35), 8 ತಿಂಗಳ ಗರ್ಭಿಣಿ ಬ್ಯೂಟಿ ಪಾಲ್ (28) ಹಾಗೂ ಅಂಗನ್ ಪಾಲ್ (6) ಮೃತರು. ಮೃತದೇಹಗಳ ಮೇಲೆ ಗಾಯದ ಗುರುತಿದ್ದು, ಮಗುವನ್ನು ಟವಲ್​ನಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರಕಾಶ್​ ಮಾರುಕಟ್ಟೆಯಿಂದ ಕನೈಗಂಜ್-ಲೆಬುತಲದಲ್ಲಿರುವ ತಮ್ಮ ಮನೆಗೆ ಹಿಂದಿರುಗಿದ ಒಂದು ಗಂಟೆಯಲ್ಲಿಯೇ ಇಡೀ ಕುಟುಂಬ ಶವವಾಗಿದೆ ಪತ್ತೆಯಾಗಿದೆ. ಪ್ರಕಾಶ್​ ಹಾಗೂ ಮಗುವಿನ ಮೃತದೇಹ ಕೋಣೆಯೊಳಗೆ ಪತ್ತೆಯಾಗಿದ್ದು, ಮಹಿಳೆ ಶವ ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

11:15ಕ್ಕೆ ಪ್ರಕಾಶ್​ ಹಾಗೂ ಮಗ ಅಂಗನ್ ಸಂಬಂಧಿಕರೊಂದಿಗೆ ಮಾತನಾಡುತ್ತಿದ್ದರು. ಕೆಲವೇ ಸೆಕೆಂಡ್​ಗಳಲ್ಲಿ ಸಂಪರ್ಕ ಕಡಿತವಾಯಿತು. ಆ ಬಳಿಕ ಕೊಲೆ ನಡೆದಿರಬಹುದು ಎಂದು ಪ್ರಕಾಶ್​ ಸಂಬಂಧಿ ರಾಜೇಶ್​ ಘೋಷ್​ ತಿಳಿಸಿದ್ದಾರೆ.

ಸದ್ಯ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಕೊಲೆಗಾರರ ಸುಳಿವಿಗಾಗಿ ಪ್ರಕಾಶ್​ ಕುಟುಂಬದೊಂದಿಗೆ ಮಾತನಾಡಿ ವೈಯಕ್ತಿಕ ಮಾಹಿತಿ ಕಲೆ ಹಾಕಲಾಗಿದೆ ಎಂದು ಲಾಲ್​ಬಾಗ್ ವಿಭಾಗೀಯ ಪೊಲೀಸ್​ ಅಧಿಕಾರಿ ಬರೂನ್ ಬೈದ್ಯ ತಿಳಿಸಿದ್ದಾರೆ.

ಈ ಮಧ್ಯೆ ಅಪರಾಧಿಗಳನ್ನು ಬಂಧಿಸುವಲ್ಲಿ ಪೊಲೀಸ್​ ಇಲಾಖೆ ವಿಫಲವಾದರೆ ಹೋರಾಟ ನಡೆಸುವುದಾಗಿ ಶಿಕ್ಷಕರ ಸಂಘಟನೆ ಎಚ್ಚರಿಸಿದೆ.

Leave a Reply

Your email address will not be published. Required fields are marked *