ಲೋಕಸಭೆ ಚುನಾವಣೆ ಬಳಿಕ ರಾಮ ಮಂದಿರ ನಿರ್ಮಾಣ ಕುರಿತು ಹೋರಾಟ: ಆರ್​ಎಸ್​ಎಸ್​ ನಿರ್ಧಾರ

ಡೆಹ್ರಾಡೂನ್​: 2019ರ ಲೋಕಸಭೆ ಚುನಾವಣೆ ಮುಗಿದು ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಯೋಧ್ಯೆಯಲ್ಲಿನ ಶ್ರೀ ರಾಮ ಮಂದಿರ ನಿರ್ಮಾಣದ ಹೋರಾಟ ಮುಂದುವರಿಸಲಾಗುವುದು. ಅಲ್ಲಿಯವರೆಗೂ ಈ ವಿಷಯವಾಗಿ ಹೋರಾಟವನ್ನು ನಿಲ್ಲಿಸಲಾಗುವುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.

ಡೆಹ್ರಾಡೂನ್​ನ ಆರ್​ಎಸ್​ಎಸ್​ ಕಚೇರಿಯಲ್ಲಿ ಆಂತರಿಕ ಸಭೆ ನಡೆಸಿದ ನಂತರದಲ್ಲಿ ಭಾಗವತ್​ ಅವರು ಈ ವಿಷಯ ತಿಳಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮ ದೇಗುಲ ನಿರ್ಮಾಣ, ಧರ್ಮ ಆಧಾರಿತ ತಾರತಮ್ಯದಿಂದ ಹಿಡಿದು ಜಾತಿಯಾಧಾರಿತ ಮೀಸಲಾತಿವರೆಗೆ ಅರ್ಧ ಕುಂಭಮೇಳದಲ್ಲಿ ಆಯೋಜನೆಗೊಂಡಿದ್ದ ಧರ್ಮ ಸಂಸತ್​ನಲ್ಲಿ ತೆಗೆದುಕೊಳ್ಳಲಾದ ನಿಲುವಿಗೆ ತಾವು ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದರು.

ಕೆಲದಿನಗಳ ಹಿಂದೆ ವಿಶ್ವ ಹಿಂದು ಪರಿಷತ್​ ಕೂಡ ಅಯೋಧ್ಯೆಯಲ್ಲಿನ ಶ್ರೀ ರಾಮ ಮಂದಿರ ನಿರ್ಮಾಣದ ವಿಷಯವನ್ನು ಲೋಕಸಭೆ ಚುನಾವಣೆ ಮುಗಿಯುವವರೆಗೆ ಅಂದರೆ ಅಂದಾಜು ನಾಲ್ಕು ತಿಂಗಳವರೆಗೆ ಮುಂದೂಡುವುದಾಗಿ ಘೋಷಿಸಿತ್ತು.