ಜಾಲತಾಣ ಮೂಲಕ ದಾರಿ ತಪ್ಪಿಸುವ ಸುದ್ದಿಗೆ ಬ್ರೇಕ್

ರಾಯಚೂರು: ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಜಾಲತಾಣಗಳ ಮೂಲಕ ದೇಶದಲ್ಲಿ ಜಾತಿ, ಧರ್ಮದ ಹೆಸರಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ ನಡೆಯುತ್ತಿದೆ. ಈ ಕುರಿತು ಜನ ಜಾಗೃತಿ ಮೂಡಿಸುವ ಬಗ್ಗೆ ಬೈಠಕ್​ನಲ್ಲಿ ಸಹಮತ ವ್ಯಕ್ತವಾಗಿದೆ ಎಂದು ಆರ್​ಎಸ್​ಎಸ್ ಸಹ ಸರಕಾರ್ಯವಾಹ ಮನಮೋಹನ ವೈದ್ಯ ತಿಳಿಸಿದ್ದಾರೆ.

ಮಂತ್ರಾಲಯದಲ್ಲಿ ನಡೆದ ಆರ್​ಎಸ್​ಎಸ್ ರಾಷ್ಟ್ರೀಯ ಸಮನ್ವಯ ಬೈಠಕ್​ನಲ್ಲಿ ರ್ಚಚಿಸ ಲಾದ ವಿಷಯಗಳ ಕುರಿತು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಜಾತಿ, ಪ್ರಾಂತ, ಭಾಷೆ ಹೆಸರಿನಲ್ಲಿ ವಿಘಟನೆ ಮಾಡಲು ಸುಳ್ಳು ಸುದ್ದಿಗಳ ಮೂಲಕ ಜನರ ಭಾವನೆಗಳನ್ನು ಒಡೆದು ಹಾಕುವ ಕೆಲಸವಾಗುತ್ತಿದ್ದು, ಇವುಗಳನ್ನು ತಡೆಯಲು ತೀರ್ವನಿಸಲಾಯಿತು.

ಕೇರಳ ಸ್ಥಿತಿ-ಗತಿ ವರದಿ: ಕೇರಳದಲ್ಲಿ ಪ್ರವಾಹ ಸ್ಥಿತಿಗತಿ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಅಲ್ಲಿಯ ಸಂಘದ ಪ್ರಮುಖರು ಸಭೆಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಕೇರಳದಲ್ಲಿ ಪರಿಹಾರ ಕಾರ್ಯಕ್ಕಾಗಿ 1.20 ಲಕ್ಷ ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಿದ್ದು, 650 ವೈದ್ಯರು 250 ಆರೋಗ್ಯ ಶಿಬಿರ ನಡೆಸಿದ್ದಾರೆ. ಸ್ವಯಂಸೇವಕರು 75,600 ಜನರ ಜೀವ ಉಳಿಸಿದ್ದು, 350 ಬೋಟ್​ಗಳ ವ್ಯವಸ್ಥೆ ಮಾಡಲಾಗಿತ್ತು. 2 ಸಾವಿರ ಟನ್ ಆಹಾರ ಧಾನ್ಯಗಳನ್ನು ವಿತರಿಸಲಾಗಿದ್ದು, ಪ್ರಸ್ತುತ 2 ಲಕ್ಷ ಸ್ವಯಂ ಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ತಿಂಗಳಲ್ಲಿ 800 ಸ್ವಚ್ಛತಾ ಶಿಬಿರ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ವೈದ್ಯ ತಿಳಿಸಿದರು.

ಕುಟುಂಬ ಪ್ರಬೋಧನ: ಆಧುನಿಕ ಜೀವನ ಶೈಲಿಯಿಂದಾಗಿ ದೇಶದಲ್ಲಿನ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆಯುಂಟಾಗುತ್ತಿದೆ. ಕುಟುಂಬಗಳು ವಿಘಟನೆಯಾ ಗುತ್ತಿವೆ. ಕುಟುಂಬಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕುಟುಂಬ ಪ್ರಬೋಧನ ವ್ಯವಸ್ಥೆ ಪುನರ್ ಸ್ಥಾಪನೆಗೆ ಬೈಠಕ್​ನಲ್ಲಿ ಒಪ್ಪಿಗೆ ನೀಡಲಾಯಿತು. ಪರಿಸರ ಹಾಗೂ ಜಲ ಸಂರಕ್ಷಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಬಗ್ಗೆ ರ್ಚಚಿಸಿ ನೀರಿನ ಸದ್ಬಳಕೆಗೆ ಮಾರ್ಗದರ್ಶನ ನೀಡಲು, ಪರಿಸರಕ್ಕೆ ಹಾನಿಕಾರ ವಾಗಿರುವ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಮಾಡಲು ನಿರ್ಣಯಿಸಲಾಯಿತು ಎಂದು ವೈದ್ಯ ಮಾಹಿತಿ ನೀಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ಾಲ್, ಆರ್​ಎಸ್​ಎಸ್ ಸರ ಕಾರ್ಯವಾಹ ಭಯ್ಯಾಜೀ ಜೋಶಿ, ಸಹ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ, ಮುಕುಂದ್, ಸುರೇಶ ಸೋನಿ, ವಿ.ಭಾಗಯ್ಯ, ಮನಮೋಹನ ವೈದ್ಯ, ಕೃಷ್ಣ ಗೋಪಾಲ ಸೇರಿ 200ಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಿದ್ದರು.

ರಾಜಕೀಯ ಚರ್ಚೆ ಇಲ್ಲ

ನೋಟು ಅಮಾನ್ಯೀ ಕರಣ, ಜಿಎಸ್​ಟಿ ಬಗ್ಗೆ ಹಾಗೂ ರಾಜಕೀಯ ಕುರಿತು ಬೈಠಕ್​ನಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಕೇಂದ್ರ ದಲ್ಲಿನ ಬಿಜೆಪಿ ಸರ್ಕಾರ ಯಾವ ರೀತಿ ಕೆಲಸ ಮಾಡಿದೆ ಎನ್ನುವುದನ್ನು ಕೆಲವೇ ತಿಂಗಳಲ್ಲಿ ಜನರು ನಿರ್ಧರಿಸಲಿದ್ದು, ಆ ಬಗ್ಗೆ ಆರೆಸ್ಸೆಸ್ ಚಿಂತನೆ ಮಾಡಿಲ್ಲ ಎಂದು ಮನಮೋಹನ ವೈದ್ಯ ಹೇಳಿದರು.

ಷಾ ಮಾರ್ಗ ಬದಲು

ಅಮಿತ್ ಷಾ ಬೈಠಕ್ ಮುಗಿಸಿ ಹೈದರಾಬಾದ್ ಮಾರ್ಗವಾಗಿ ದೆಹಲಿಗೆ ತೆರಳಬೇಕಿತ್ತು. ಆದರೆ, ಹೈದರಾಬಾದ್​ನಲ್ಲಿ ಟಿಆರ್​ಎಸ್ ಪಕ್ಷದ ಸಮಾವೇಶ ಹಿನ್ನೆಲೆಯಲ್ಲಿ ಪ್ರಯಾಣಕ್ಕೆ ಅಡ್ಡಿಯುಂಟಾಗುವ ಸಾಧ್ಯತೆಗಳಿದ್ದರಿಂದ ಕೊನೇ ಕ್ಷಣದಲ್ಲಿ ಬಳ್ಳಾರಿಗೆ ರಸ್ತೆ ಮಾರ್ಗವಾಗಿ ತೆರಳಿ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.

ಬೈಠಕ್ ಮುಕ್ತಾಯ

ಮಂತ್ರಾಲಯದಲ್ಲಿ ಮೂರು ದಿನಗಳ ಕಾಲ ಜರುಗಿದ ಆರ್​ಎಸ್​ಎಸ್ ರಾಷ್ಟ್ರೀಯ ಸಮನ್ವಯ ಬೈಠಕ್ ಭಾನುವಾರ ಸಂಜೆ ಮುಕ್ತಾಯಗೊಂಡಿತು. ಸಂಘ ಪರಿವಾರದ 35 ಸಂಘಟನೆಗಳ 200ಕ್ಕೂ ಹೆಚ್ಚು ಪ್ರಮುಖರು ಭಾಗವಹಿಸಿದ್ದ ಬೈಠಕ್​ನಲ್ಲಿ ಕೇರಳ ಪ್ರವಾಹದ ಪರಿಹಾರ ಕಾರ್ಯಗಳು ಸೇರಿ ದೇಶದ ವಿದ್ಯಮಾನಗಳು, ಮುಂದಿನ ಕಾರ್ಯಯೋಜನೆಗಳ ಕುರಿತು ಚರ್ಚೆ ನಡೆದು ಒಪ್ಪಿಗೆ ಪಡೆದುಕೊಳ್ಳಲಾಯಿತು. ಆರ್​ಎಸ್​ಎಸ್ ಸರಸಂಘಚಾಲಕ ಮೋಹನ್ ಭಾಗವತ್ ನೇತೃತ್ವದಲ್ಲಿ ಭಾನುವಾರ ನಾಲ್ಕು ಗೋಷ್ಠಿಗಳು ನಡೆದಿದ್ದು, ಮಧ್ಯಾಹ್ನ ನಂತರ ಜರುಗಿದ ಎರಡು ಗೋಷ್ಠಿಗಳಲ್ಲಿ ಆರ್​ಎಸ್​ಎಸ್​ನ ಪ್ರಮುಖರು ಮಾತನಾಡಿದರು.