ಬಿಜೆಪಿಯನ್ನು ಬೆಂಬಲಿಸಲು ಸ್ವಯಂಸೇವಕರಿಗೆ ತಿಳಿಸಲಾಗಿದೆ ಅಷ್ಟೆ: ಮೋಹನ್ ಭಾಗವತ್

ನವದೆಹಲಿ: ಸಂಘದ ಸ್ವಯಂ ಸೇವಕರನ್ನು ಯಾವುದೇ ರಾಜಕೀಯ ಪಕ್ಷಕ್ಕೆ ಕೆಲಸ ಮಾಡಿ ಎಂದು ಸಂಘವು ಎಂದಿಗೂ ತಿಳಿಸಿಲ್ಲ. ಆದರೆ, ರಾಷ್ಟ್ರ ಹಿತಾಸಕ್ತಿಗೆ ಶ್ರಮಿಸುವ ಪಕ್ಷವನ್ನು ಬೆಂಬಲಿಸುಂತೆ ಸಂಘ ಸಲಹೆ ನೀಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ಸಂಚಾಲಕ ಮೋಹನ್​ ಭಾಗವತ್​ ಸ್ಪಷ್ಟಪಡಿಸಿದ್ದಾರೆ.

ಆರ್​ಎಸ್ಎಸ್​​ನ ಮೂರು ದಿನಗಳ ಸಮಾವೇಶದಲ್ಲಿ ಎರಡನೇ ದಿನವಾದ ಮಂಗಳವಾರ ಮಾತನಾಡಿದ ಮೋಹನ್​ ಭಾಗವತ್​ ಅವರು, ಆರ್​ಎಸ್​ಎಸ್​ ಮತ್ತು ಬಿಜೆಪಿ ನಡುವಿನ ವ್ಯತ್ಯಾಸಗಳನ್ನು ಪ್ರತ್ಯೇಕಿಸುವ ಪ್ರಯತ್ನ ಮಾಡಿದರು. ಆರ್​ಎಸ್​ನ ಕಾರ್ಯಕ ವಿಧಾನಗಳು, ಹಾಗೂ ಸಂಘದ ಸೈದ್ಧಾಂತಿಕ ವಿಚಾರಗಳೊಂದಿಗೆ ನಂಟು ಹೊಂದಿರುವ ಬಿಜೆಪಿ ನಾಯಕರು ಮತ್ತು ಆ ಪಕ್ಷದ ನಡುವಿನ ವ್ಯತ್ಯಾಸಗಳನ್ನು ಅವರು ತಿಳಿಸಿದರು.

ಸರಸಂಘದ ಹಲವು ಸ್ವಯಂ ಸೇವಕರು ಇದ್ದಾರೆ ಎಂಬ ಕಾರಣಕ್ಕೆ ನಿರ್ದಿಷ್ಟ ಪಕ್ಷ ಅಥವಾ ಬಿಜೆಪಿಯ ಕಾರ್ಯವಿಧಾನದಲ್ಲಿ ಆರ್​ಎಸ್​ಎಸ್​ ತನ್ನದೇ ಪಾತ್ರ ನಿರ್ವಹಿಸುತ್ತದೆ ಎಂಬ ಕಲ್ಪನೆ ಸಾರ್ವತ್ರಿಕವಾಗಿದೆ. ಆದರೆ, ಅದು ತಪ್ಪು ಕಲ್ಪನೆ. ಆರ್​ಎಸ್​ಎಸ್​ ರಾಜಕೀಯದಿಂದ ದೂರವಿದೆ. ಆದರೆ, ರಾ ಷ್ಟ್ರ ಹಿತಾಸಕ್ತಿಯಲ್ಲಿ ತನ್ನದೇ ಕಲ್ಪನೆ ಹೊಂದಿದೆ ಎಂದು ಭಾಗವತ್​ ತಿಳಿಸಿದರು.

ಅಧಿಕಾರ ಕೇಂದ್ರ ಎಂಬುದು ಸಂವಿಧಾನಾತ್ಮಕವಾಗಿರಬೇಕು ಎಂದು ಸಂಘ ನಂಬಿದೆ. ಹಾಗಿಲ್ಲದಿದ್ದರೆ ಅದು ತಪ್ಪು ಎಂದೂ ಅವರು ಅಭಿಪ್ರಾಯಪಟ್ಟರು.

ಮೂರು ದಿನಗಳ ಸಮಾವೇಶದ ಮೊದಲ ದಿನ ಮಾತನಾಡಿದ್ದ ಮೋಹನ್​ ಭಾಗವತ್​ ಅವರು, ಸಂಘವು ಯಾರೇ ಅಧಿಕಾರಕ್ಕೆ ಬಂದರೂ ಅವರ ಮೇಲೆ ಪ್ರಾಬಲ್ಯ ಸಾಧಿಸುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ಸಂಘವು ಸರ್ವಾಧಿಕಾರಿ ಧೋರಣೆ ಅನುಸರಿಸದೇ ಅತ್ಯಂತ ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿದೆ ಎಂದಿದ್ದರು.