ಆರ್​ಎಸ್​ಎಸ್ ಪಥ ‘ಸಂಚಲನ’

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸ್ವಯಂ ಸೇವಕರು ಭಾನುವಾರ ಪಥ ಸಂಚಲನ ನಡೆಸುವ ಮೂಲಕ ಸಂಚಲನ ಮೂಡಿಸಿದರು.

ಪ್ರತಿವರ್ಷ ವಿಜಯದಶಮಿ ಮರುದಿನ ಪಥ ಸಂಚಲನ ನಡೆಸಲಾಗುತ್ತಿದೆ. ಭಾನುವಾರ ಐತಿಹಾಸಿಕ ಕೋಟೆ ಆವರಣದಿಂದ ಹೊರಟ ಪಥ ಸಂಚಲನ ಸುಪರ್ ಮಾರ್ಕೆಟ್, ದರ್ಗಾ ಪ್ರದೇಶ, ಕಪಡಾ ಬಜಾರ್, ಸರಾಫ್ ಬಜಾರ್, ತಿರಂದಾಜ್ ಚಿತ್ರಮಂದಿರ ಮುಖಾಂತರ ಜಗತ್ ವೃತ್ತ ಮುಖಾಂತರ ಕೋಟೆ ಎದುರಿಗಿನ ಟ್ಯಾಕ್ಸಿ ಸ್ಟಾಂಡ್ ಬಳಿ ಬಂದು ಸಮಾವೇಶಗೊಂಡಿತು.

ನಂತರ ಮಾತನಾಡಿದ ಸಂಘದ ಪ್ರಮುಖರು, ಜನರಲ್ಲಿ ರಾಷ್ಟ್ರ ಪ್ರೇಮ ಬೆಳೆಸುವ ಉದ್ದೇಶದಿಂದ ಪಥ ಸಂಚಲನ ನಡೆಸಲಾಗುತ್ತಿದೆ. 66 ವರ್ಷದಿಂದ ಈ ಪಥ ಸಂಚಲನ ನಡೆಸಲಾಗುತ್ತಿದೆ. ಭಾರತ ಮಾತೆ ಸೇವೆಗಾಗಿಯೆ ಜನ್ಮ ತಾಳಿದ ಸಂಘ ಇದಾಗಿದ್ದು, ಶಿಸ್ತಿನ ಸಿಪಾಯಿಯಾಗಿದೆ. ದೇಶ ಭಕ್ತಿ ಮೈಗೂಡಿಸಿಕೊಂಡು ಅನೇಕರು ಭಾರತ ಮಾತೆ ಸೇವೆಗೈದಿದ್ದಾರೆ ಎಂದರು.

ಹೊಸ ಗಣವೇಷ ಧರಿಸಿ ಸ್ವಯಂ ಸೇವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 800ಕ್ಕೂ ಹೆಚ್ಚು ಸೇವಕರು ಪಥ ಸಂಚಲನದಲ್ಲಿ ಭಾಗಿಯಾಗಿದ್ದರು. ಚಿಕ್ಕ ಮಕ್ಕಳು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮೂರು ತಾಸು ನಡೆದ ಪಥ ಸಂಚಲನ ನಾಲ್ಕು ಕಿ.ಮೀ.ದೂರ ಸಂಚರಿಸಿತು. ದಾರಿಯುದ್ದಕ್ಕೂ ಮಹಿಳೆಯರು, ಸಾರ್ವಜನಿಕರು ಪಥ ಸಂಚಲನ ವೀಕ್ಷಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಧಾನ ಪರಿಷತ್ ಸದಸ್ಯಬಿ.ಜಿ.ಪಾಟೀಲ್, ಯುವ ಮುಖಂಡ ಚಂದು ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಶಶಿಲ್ ನಮೋಶಿ, ಉದ್ಯಮಿ ವೇಣುಗೋಪಾಲ ಮಾದಮಶೆಟ್ಟಿ, ಆರ್ಎಸ್ಎಸ್ ಸಹ ಪ್ರಾಂತ ಪ್ರಚಾರಕ ನರೇಂದ್ರ, ಕೃಷ್ಣಾ ಜೋಶಿ, ಖಗೇಶನ್ ಜಿ, ವೆಂಕಟರಾವ ದೇಶಪಾಂಡೆ, ಚಂದ್ರಕಾಂತ ಕಲ್ಕೂರೆ, ವಿಭಾಗೀಯ ಪ್ರಚಾರಕ ಶ್ರೀನಿವಾಸ ನಾಯಕ, ಜಿಲ್ಲಾ ಪ್ರಚಾರಕ ಸಂಜಯ ನಾಯಕ್, ರವಿ ಲಾತೂರಕರ್, ಶ್ರೀನಿವಾಸ ನಾಯಕ ಸೇರಿ 800ಕ್ಕೂ ಹೆಚ್ಚು ಸ್ವಯಂ ಸೇವಕರು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.