ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಶುಕ್ರವಾರದಿಂದ (ಮಾ.21) ಮೂರು ದಿನ ನಡೆಯಲಿದೆ. ಈ ಸಭೆಯಲ್ಲಿ ಬಾಂಗ್ಲಾ ಹಿಂದುಗಳ ರಕ್ಷಣೆ ಹಾಗೂ ಸಂಘದ ಶತಾಬ್ದಿ ವರ್ಷಾಚರಣೆ ಕುರಿತು ನಿರ್ಣಯ ಕೈಗೊಳ್ಳಲಾಗುತ್ತದೆ.
ಈ ಸಂಬಂಧ ಆರ್‌ಎಸ್‌ಎಸ್‌ನ ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಎಬಿಪಿಎಸ್ ವಿವರಗಳನ್ನು ನೀಡಿದರು.
ಮೊದಲ ದಿನದ ಪ್ರತಿನಿಧಿ ಸಭಾ ಉದ್ಘಾಟನೆಯನ್ನು ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ನೆರವೇರಿಸಲಿದ್ದಾರೆ. ಈ ವೇಳೆ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂಘ ಕಾರ್ಯದ ವಾರ್ಷಿಕ ವರದಿ ಮಂಡಿಸಲಿದ್ದಾರೆ. ಜತೆಗೆ ವಿವಿಧ ಪ್ರಾಂತಗಳ ಕಾರ್ಯಕರ್ತರಿಂದ ರಾಷ್ಟ್ರವ್ಯಾಪಿ ನಡೆದ ಚಟುವಟಿಕೆಗಳ ವರದಿಯನ್ನೂ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ಪಂಚಪರಿವರ್ತನೆಗೆ ಕಾರ್ಯಸೂಚಿ:
ಈ ವರ್ಷ ಸಂಘವು 100 ವರ್ಷ ಪೂರೈಸಲಿದ್ದು, ಪ್ರತಿನಿಧಿ ಸಭಾದಲ್ಲಿ ಆರ್‌ಎಸ್‌ಎಸ್ ಕಾರ್ಯವಿಸ್ತಾರದ ಬಗ್ಗೆ ಚರ್ಚೆ ನಡೆಯಲಿವೆ. 2025ರ ವಿಜಯದಶಮಿಯಿಂದ 2026ರ ವಿಜಯದಶಮಿಯವರೆಗೆ ಸಂಘದ ಶತಾಬ್ದಿಯ ವರ್ಷ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಎಲ್ಲ ವರ್ಗದ ಜನರನ್ನು ಜೋಡಿಸಿಕೊಂಡು ಪಂಚಪರಿವರ್ತನೆ (ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ಮತ್ತು ನಾಗರಿಕ ಕರ್ತವ್ಯ) ಕಾರ್ಯದ ಕುರಿತು ಯೋಜನೆ ರೂಪಿಸಲಾಗುತ್ತದೆ.
ಜತೆಗೆ ಬಾಂಗ್ಲಾದೇಶದಲ್ಲಿ ಹಿಂದುಗಳು ಸೇರಿ ಇತರ ಅಲ್ಪಸಂಖ್ಯಾತರ ಮೇಲೆ ದಾಳಿ ಸೇರಿ ಕಾಳಜಿ ವಹಿಸಬೇಕಾದ ಘಟನಾವಳಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು. 1525ರಲ್ಲಿ ಕರ್ನಾಟದಲ್ಲಿ ಜನಿಸಿದ ರಾಣಿ ಅಬ್ಬಕ್ಕ ಅವರ 500ನೇ ವರ್ಷಾಚರಣೆ ಸ್ಮರಿಸಲು ವಿಶೇಷ ಹೇಳಿಕೆ ಬಿಡುಗಡೆ ಮಾಡಲಿದೆ ಎಂದು ಸುನಿಲ್ ಅಂಬೇಕರ್ ವಿವರಿಸಿದರು.
95 ಪ್ರಶಿಕ್ಷಣ ವರ್ಗ ನಡೆಸಲು ಗುರಿ:
ಈ ವರ್ಷ ಆರ್‌ಎಸ್‌ಎಸ್ 95 ಪ್ರಶಿಕ್ಷಣ ವರ್ಗಗಳನ್ನು ಆಯೋಜಿಸಲಾಗುತ್ತದೆ. ಇದರಲ್ಲಿ ಸಂಘ ಶಿಕ್ಷಾ ವರ್ಗ, ಕಾರ್ಯಕರ್ತರ ವಿಕಾಸ ವರ್ಗ 1 ಮತ್ತು ಕಾರ್ಯಕರ್ತ ವಿಕಾಸ ವರ್ಗ 2 ಸೇರಿವೆ. ಜತೆಗೆ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ರಾಷ್ಟ್ರವ್ಯಾಪಿ ಪ್ರವಾಸವನ್ನು ಪ್ರತಿನಿಧಿ ಸಭಾದಲ್ಲಿ ನಿರ್ಣಯಿಸಲಾಗುತ್ತದೆ.
ಎಬಿಪಿಎಸ್‌ನಲ್ಲಿ 32 ಸಂಘಪ್ರೇರಿತ ಸಂಘಟನೆಗಳ ಸಂಘಟನಾ ಮುಖ್ಯಸ್ಥರು ಮತ್ತು ಸಹ ಸಂಘಟನಾ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಭಾರತೀಯ ಮಜ್ದೂರ್ ಸಂಘ, ರಾಷ್ಟ್ರ ಸೇವಿಕಾ ಸಮಿತಿ, ಬಿಜೆಪಿ, ಎಬಿವಿಪಿ, ವಿಎಚ್‌ಪಿ, ವನವಾಸಿ ಕಲ್ಯಾಣ ಆಶ್ರಮ, ವಿದ್ಯಾಭಾರತಿ ಸೇರಿ ಹಲವು ಸಂಘಟನೆಗಳು ಹಿರಿಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಕ್ಷೇತ್ರೀಯ ಹಾಗೂ ಪ್ರಾಂತ ಸ್ತರದ ಒಟ್ಟು 1,480 ಆಹ್ವಾನಿತ ಪ್ರತಿನಿಧಿಗಳು ಅಪೇಕ್ಷಿತರಿದ್ದಾರೆ.