ಕ್ಯಾತಮಾರನಹಳ್ಳಿ ರಾಜು ಹತ್ಯೆ ಆರೋಪಿ ಬಂಧನ

ಮೈಸೂರು : ಆರ್‌ಎಸ್‌ಎಸ್ ಕಾರ್ಯಕರ್ತ ಕ್ಯಾತಮಾರನಹಳ್ಳಿಯ ರಾಜು ಕೊಲೆ ಪ್ರಕರಣದ ಪ್ರಮುಖ ಆರೋಪಿ ನಗರದ ಎಲೆಕಟ್ಟೆ ನಿವಾಸಿ ಅತೀಕ್ ಅಹಮದ್ ಷರೀಫ್‌ನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
2016ರ ಮಾರ್ಚ್‌ನಲ್ಲಿ ಉದಯಗಿರಿಯ ಕ್ಯಾತಮಾರನಹಳ್ಳಿಯ ರಾಜು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಅತೀಕ್ ತಲೆಮರೆಸಿಕೊಂಡಿದ್ದ.

ರಾಜು ಕೊಲೆ ಮಾತ್ರವಲ್ಲದೇ, 2008ರಲ್ಲಿ ಶಶಿಕುಮಾರ್, 2009ರಲ್ಲಿ ರಮೇಶ್ ಮತ್ತು ಹರೀಶ್ ಕೊಲೆ ಪ್ರಕರಣಗಳಲ್ಲೂ ಅತೀಕ್ ಅಹಮದ್ ಭಾಗಿಯಾಗಿದ್ದನು. 2009ರಲ್ಲಿ ಗಿರಿಧರ್ ಎಂಬುವರ ಮೇಲೆ ಕೊಲೆ ಯತ್ನ ನಡೆಸಿದ್ದ.

ಇಷ್ಟೂ ಕೊಲೆಗಳು ಮತೀಯ ಮತ್ತು ದ್ವೇಷದ ಕಾರಣದಿಂದ ನಡೆದಿದ್ದವು ಎನ್ನಲಾಗಿದೆ. ಕೊಲೆ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಅತೀಕ್ ಬೆಂಗಳೂರಿನಲ್ಲಿ ಇದ್ದಾನೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಮತ್ತು ಕುವೆಂಪುನಗರ ಪೊಲೀಸರು ಬುಧವಾರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾದರು. ನಂತರ ಆತನನ್ನು ನಗರಕ್ಕೆ ಕರೆತಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಮರಿಯಪ್ಪ ನೇತೃತ್ವದಲ್ಲಿ ಕುವೆಂಪುನಗರ ಇನ್ಸ್‌ಪೆಕ್ಟರ್ ರಾಜು ಮತ್ತು ಸಿಬ್ಬಂದಿ ನಿರಂಜನ್, ರಾಜೇಂದ್ರ ಭಾಗವಹಿಸಿದ್ದರು.

ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು: ರಾಜು ಕೊಲೆ ಪ್ರಕರಣ ಖಂಡಿಸಿ ಹಿಂದುಪರ ಸಂಘಟನೆಗಳು ಸಾಕಷ್ಟು ಪ್ರತಿಭಟನೆ ಮಾಡಿದ್ದವಲ್ಲದೇ, ಬಂದ್‌ಗೂ ಕರೆ ನೀಡಿದ್ದವು. ಈ ವೇಳೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿ ಕಲ್ಲು ತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವುದು ಸೇರಿ ಅನೇಕ ಅಹಿತಕರ ಘಟನೆಗಳು ನಡೆದಿದ್ದವು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಸಹ ನಡೆಸಿದ್ದರು. ಈ ವೇಳೆ ಪತ್ರಕರ್ತರು ಸೇರಿ ಹತ್ತಾರು ಜನ ಗಾಯಗೊಂಡಿದ್ದರು. ಈ ಕೊಲೆಯಿಂದಾಗಿ ಉದಯಗಿರಿ ಮತ್ತು ಕ್ಯಾತಮಾರನಹಳ್ಳಿಯಲ್ಲಿ ತಿಂಗಳುಗಟ್ಟಲೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿತ್ತು.

Leave a Reply

Your email address will not be published. Required fields are marked *