ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣದಲ್ಲಿದ್ದ ವಿಸಿಬಲಿಟಿ ಸಮಸ್ಯೆ ಈಗ ಪರಿಹಾರವಾಗಿದ್ದು ಅದರ ಬೆನ್ನಿಗೆ ಇಲ್ಲಿಂದ ಕಾರ್ಗೊ ವಿಮಾನಗಳ ಹಾರಾಟಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು 50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದೂವರೆ ತಿಂಗಳಲ್ಲಿ ನೈಟ್ ಲ್ಯಾಂಡಿಂಗ್ ಸೌಲಭ್ಯ ಲಭ್ಯವಾಗಲಿದೆ. ಅದರ ಬೆನ್ನಿಗೆ ಕಾರ್ಗೊ ವಿಮಾನಗಳ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ರೈತರು ಬೆಳೆದ ಬೆಳೆ ಮತ್ತು ಇತರೆ ವಸ್ತುಗಳ ರಫ್ತು ಮಾಡಲು ಅನುಕೂಲ ಆಗಲಿದೆ. ಪೂರಕ ವ್ಯವಸ್ಥೆಗೆ 50 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಕಳೆದೊಂದು ವರ್ಷದಲ್ಲಿ 8,500ಕ್ಕೂ ಹೆಚ್ಚು ಪ್ರವಾಸಿಗರು ಶಿವಮೊಗ್ಗ ವಿಮಾನ ನಿಲ್ದಾಣದಿಂದ ಓಡಾಡಿದ್ದಾರೆ. ಇದೇ ಅವಧಿಯಲ್ಲಿ ಮೈಸೂರು ವಿಮಾನ ನಿಲ್ದಾಣದಿಂದ 7,500 ಪ್ರವಾಸಿಗರು ಓಡಾಡಿದ್ದಾರೆ. ಹಾಗಾಗಿ ಮೈಸೂರಿಗಿಂತಲು ಹೆಚ್ಚು ಪ್ರವಾಸಿಗರು ಶಿವಮೊಗ್ಗ ವಿಮಾನ ನಿಲ್ದಾಣ ಬಳಸಿದ್ದಾರೆ. ಆದ್ದರಿಂದ ಇದು ಮಧ್ಯ ಕರ್ನಾಟಕದ ಪ್ರಮುಖ ವಿಮಾನ ನಿಲ್ದಾಣ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂದರು.
ಮುಂಬೈ ವಿಮಾನ ನಿಲ್ದಾಣದಲ್ಲಿ ಟ್ರಾಫಿಕ್ ಕ್ಲಿಯರೆನ್ಸ್ ಲಭಿಸಿಲ್ಲ. ಹಾಗಾಗಿ ಇಂಡಿಗೋ ವಿಮಾನಯಾನ ಸಂಸ್ಥೆ ಶಿವಮೊಗ್ಗದಿಂದ ದೆಹಲಿ, ಅಹಮದಾಬಾದ್, ಪುಣೆ ಮಾರ್ಗದಲ್ಲಿ ವಿಮಾನಯಾನ ಆರಂಭಕ್ಕೆ ಅನುಮತಿ ಕೇಳಿದೆ. ಈ ಸಂಬಂಧ ವಿಮಾನಯಾನ ಸಚಿವರಿಗೆ ಪತ್ರ ಬರೆದು ಆದಷ್ಟು ಬೇಗ ಅನುಮತಿ ನೀಡುವಂತೆ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.