More

    ಸರ್ಕಾರದಿಂದ ಪ್ರತಿ ಲೀಟರ್ ಪೆಟ್ರೋಲ್​ಗೆ 3 ರೂ. ಮೋಸ!

    ಜನತಾ ಜನಾರ್ದನನಿಗೇ ಮೋಸ. ಹೌದು, ಈ ಮೋಸ ಈಗ ನಡೆಯುತ್ತಿದೆ. ಅದು ಇನ್ನೂ ಜಾಸ್ತಿ ಆಗಲಿದೆ. ಸರ್ಕಾರ ಏನು ಮಾಡುತ್ತಿದೆ? ಸರ್ಕಾರ ಏನೂ ಮಾಡುವಂತಿಲ್ಲ! ಏಕೆಂದರೆ ಈ ಮೂರು ರೂಪಾಯಿ ಪ್ರತಿ ಲೀಟರ್ ಪೆಟ್ರೋಲ್​ಗೆ ಮೋಸ ಮಾಡುತ್ತಿರುವುದು ಸಾಕ್ಷಾತ್ ಸರ್ಕಾರವೇ!!! ಸರ್ಕಾರದಿಂದ ಜನತಾ ಜನಾರ್ದನನಿಗೆ ಮೋಸವೇ? ಹೌದು. ಇದು ಅಪ್ಪಟ ಸತ್ಯ. ವಿಚಿತ್ರ ಆದರೂ ನಿಜ.

    ಈ ಮೋಸ ಹೇಗೆ ಆಗಿದೆ? ವಿಶ್ವ ಪೇಟೆಯಲ್ಲಿ ಕಚ್ಚಾ ತೈಲದಲ್ಲಿ ಈಚಿನ ಒಂದು ಸೋಮವಾರ ಶೇ. 25ರಷ್ಟು ಕುಸಿಯಿತು. ಆಮೇಲೆ ಇನ್ನೂ ಕುಸಿಯಿತು. ಈ ಕುಸಿತವು ನಮ್ಮ ಪೆಟ್ರೋಲ್ ಬಂಕ್ ಗೆ ಬರಬೇಕಾಗಿತ್ತು. ಆದರೆ ಬರಲಿಲ್ಲ. 3 ರೂ. ಬೆಲೆ ಇಳಿಕೆ ಪೆಟ್ರೋಲ್​ಗೆ ಆಗಬೇಕಾಗಿತ್ತು. ಆಗಲಿಲ್ಲ. ಏಕೆ? ಸರ್ಕಾರವು ಪೆಟ್ರೋಲ್ ಮೇಲಿನ ಸುಂಕ 3 ರೂಪಾಯಿ ಏರಿಸಿತು. ಬೆಲೆ ಇಳಿಯಲು ಅದು ಬಿಡಲಿಲ್ಲ; ಜನತಾ ಜನಾರ್ದನನಿಗೆ ನ್ಯಾಯವಾಗಿ ಬರಬೇಕಾಗಿದ್ದ ಮೂರು ರೂಪಾಯಿಗೆ ಪಂಗನಾಮ ಹಾಕಿತು – ಭಾರತ ಸರ್ಕಾರ!

    ಸರ್ಕಾರದಿಂದ ಪ್ರತಿ ಲೀಟರ್ ಪೆಟ್ರೋಲ್​ಗೆ 3 ರೂ. ಮೋಸ!ಸುಂಕ ಹಾಕುವುದು ಸರ್ಕಾರದ ಹಕ್ಕು. ಹೌದು. ಅದು ನಿಜ, ಅದು ನಮಗೂ ಗೊತ್ತು. ನಮ್ಮ ಪ್ರಶ್ನೆ ಸುಂಕದ ವಿಚಾರ ಅಲ್ಲ. ವಿಶ್ವ ಪೇಟೆಯ ಬೆಲೆಯೇ ಇಲ್ಲಿ ನಮ್ಮ ಪೆಟ್ರೋಲ್ ಬಂಕುಗಳ ಬೆಲೆ – ಇದು ಕಾನೂನು. ಅದನ್ನು ಮಾಡಿದ್ದು ನೀವೇ. ಅದನ್ನು ಆಚರಣೆಗೆ ತಂದಿದ್ದು ನೀವೇ. ಈಗ ಈ ಕಾನೂನು ಉಲ್ಲಂಘನೆ ಮಾಡುತ್ತಿರುವುದು ನೀವೇ!!! ಈಗ ವಿಶ್ವಪೇಟೆಯಲ್ಲಿ ತೈಲಬೆಲೆ ಕುಸಿದಿದೆ. ಅದನ್ನು ಪೆಟ್ರೋಲ್ ಬಂಕುಗಳ ಮಟ್ಟದಲ್ಲಿ ಜಾರಿಗೆ ಕೊಟ್ಟಿಲ್ಲ ನೀವು. ನಿಮ್ಮದೇ ಕಾನೂನು; ನಿಮ್ಮಿಂದಲೇ ಉಲ್ಲಂಘನೆ! ಇದು ಯಾವ ಸೀಮೆ ನ್ಯಾಯ? ಹೇಗೆ ನ್ಯಾಯಸಮ್ಮತ? ಇದು ಸರ್ಕಾರಕ್ಕೆ ಜನಸಾಮಾನ್ಯರು ಹಾಕಿರುವ ಪ್ರಶ್ನೆ.

    ಜನಸಾಮಾನ್ಯರನ್ನು ಕಿತ್ತು ತಿನ್ನುವವರು ಮಧ್ಯವರ್ತಿಗಳು, ದಲ್ಲಾಳಿಗಳು. ಇವರು ಕಡಿಮೆ ಬೆಲೆ ಇದ್ದಾಗ ಅದರ ದುರ್ಲಾಭ ಪಡೆದರೆ ಅದು ತಪ್ಪು. ಈಗ ಸರ್ಕಾರವೇ ಕಡಿಮೆ ಬೆಲೆಯ ದುರ್ಲಾಭ ಪಡೆಯಲು ಇಳಿದಿದೆ! ಅದು ನ್ಯಾಯಸಮ್ಮತವಲ್ಲ. ಏಕೆ ಗೊತ್ತೆ? ದುಬಾರಿ ಬೆಲೆಯು ನಮ್ಮನ್ನು ಕಿತ್ತು ತಿನ್ನುವಾಗ ಸರ್ಕಾರವು ಬಡವರ ಸಹಾಯಕ್ಕೆ ಬಂದಿಲ್ಲ. ಅಗತ್ಯ ಹಸ್ತಕ್ಷೇಪ ಮಾಡಿಲ್ಲ. ಉದಾಹರಣೆಗೆ ನಾವು ನೀವು ಬಳಸುವ ಅಡುಗೆ ಅನಿಲ. ಸರ್ಕಾರವು ಈ ಅಡುಗೆ ಅನಿಲ ಬೆಲೆಯು ವಿಶ್ವ ಪೇಟೆಯಲ್ಲಿನ ಬೆಲೆ ಎಂದು ಜಾರಿ ಮಾಡಿದೆ. ಬೆಲೆಯನ್ನು ಈಚಿನ ತಿಂಗಳುಗಳಲ್ಲಿ ವಿಪರೀತ ಏರಿಸಿದೆ. ನಾವೆಲ್ಲ ದೂಸರಾ ಮಾತಾಡದೆ ದುಡ್ಡು ಕೊಟ್ಟಿದ್ದೇವೆ. ಅನಿಲ ಬೆಲೆ ಏರಿಕೆ ಪರಿಣಾಮವಾಗಿ ಹೋಟೆಲ್ ತಿಂಡಿತಿನಿಸು ಬೆಲೆ ಏರಿಕೆ ಆಗಿದೆ. ಅದನ್ನೂ ದೂಸರಾ ಮಾತನಾಡದೇ ಜನಸಾಮಾನ್ಯರು ಕೊಟ್ಟಿದ್ದಾರೆ. ಅದೇನು ಪುಣ್ಯವೋ ಏನೋ, ಈಗ ಬೆಲೆ ಇಳಿಕೆ ಭಾಗ್ಯ ಬಂದಿದೆ – ಪೆಟ್ರೋಲ್-ಡೀಸೆಲ್​ಗಳಿಗೆ. ಆದರೆ ಅದು ಬಡವರ ಪಾಲಿಗೆ ಬಂದಿಲ್ಲ. ಇದು ಶೋಷಣೆ. ಜನತಾ ಜನಾರ್ದನನ ಶೋಷಣೆ! ಹೇಗೆ ಗೊತ್ತೆ?

    ನಮ್ಮೆಲ್ಲರ ಮನೆಗೆ ಬರುವ ಅನಿಲ ಸಿಲಿಂಡರ್​ನ ಬೆಲೆ ಫೆಬ್ರವರಿ 28ರಂದು 862 ರೂ. ಇದು ಜನವರಿಯಲ್ಲಿ 717 ರೂ., ಅದಕ್ಕೂ ಮುಂಚೆ ನವೆಂಬರ್​ನಲ್ಲಿ 680 ರೂ. ಇತ್ತು. ಮೂರು ತಿಂಗಳುಗಳಲ್ಲಿ 683 ರೂ.ನಿಂದ 862 ರೂ.ಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಏರಿಕೆ! ಏರಿಕೆಗೆ ಕಾರಣವಾಗಿದ್ದು ವಿಶ್ವ ಪೇಟೆಯಲ್ಲಿನ ಏರಿದ ಬೆಲೆ. ಈ ಬೆಲೆ ಏರಿಕೆ ತಾಪವನ್ನು ನಾವು ಅನುಭವಿಸುತ್ತಿದ್ದೇವೆ. ಹೀಗಾಗಿ ನಮಗಿದ್ದುದು – ಬಡವರಿಗೆ ದೇವರೇ ದಿಕ್ಕು ಎನ್ನುವ ಸ್ಥಿತಿ. ಈಗ ಏನೋ ದೇವರ ದಯೆಯಿಂದ, ಸೌದಿ ಅರೇಬಿಯಾ – ರಷ್ಯಾ ದೇಶಗಳ ನಡುವೆ ನಡೆಯುತ್ತಿರುವ ಹುಂಜದ ಕಾಳಗದಿಂದ, ಜಗತ್ತಿನಲ್ಲಿ ತೈಲಬೆಲೆ ಕುಸಿದಿದೆ. ನ್ಯಾಯವಾಗಿ ಈ ಬೆಲೆ ಕುಸಿತದ ಲಾಭ ನಮಗೆ ನಿಮಗೆ ಎಲ್ಲರಿಗೂ ತಲುಪಬೇಕು. ಏಕೆಂದರೆ ನಾವು ವಿಶ್ವ ಪೇಟೆ ಬೆಲೆ ಏರಿಕೆಯ ಸಂತ್ರಸ್ತರು. ‘ಬೆಲೆ ಏರಿಕೆ ಬಂದರೆ ಜನಸಾಮಾನ್ಯರಿಗೆ; ಬೆಲೆ ಇಳಿಕೆ ಬಂದರೆ ಸರ್ಕಾರಕ್ಕೆ’ ಎಂದರೆ ಅದು ಬಹಳ ಅನ್ಯಾಯ.

    ಕಂಪನಿಗಳ ಲೋಕದಲ್ಲಿ ಇದು ಲೋಕಾರೂಢಿ. ‘ಲಾಭವಾದರೆ ಕಂಪನಿಗಳ ಮಾಲೀಕರಿಗೆ; ನಷ್ಟವಾದರೆ ಅದು ಬ್ಯಾಂಕ್ ಇಲ್ಲವೇ ಸರ್ಕಾರದ ತಲೆಗೆ’ – ಇದು ಜಾಯಮಾನ ಅಲ್ಲಿ. ಇಂಥ ಅನ್ಯಾಯ ಅಪಾರ ಇವೆ. ಇದೇ ನಾವು ಉದ್ದಕ್ಕೂ ಕಂಡಿರುವುದು.. ಉದಾಹರಣೆಗೆ ಸರ್ಕಾರವು ವಸ್ತುಗಳ ಮೇಲಿನ ಜಿಎಸ್​ಟಿ ತೆರಿಗೆಯನ್ನು ಎಷ್ಟೋ ಬಾರಿ ಇಳಿಸಿದೆ. ಆದರೆ ಪ್ಯಾಕೆಟ್​ನಲ್ಲಿರುವ ವಸ್ತುಗಳ ಬೆಲೆ ಏರುತ್ತಲೇ ಇದೆ! ತೆರಿಗೆ ಇಳಿಕೆ ಲಾಭ ಕಂಪನಿಗಳಿಗೆ ಸಿಕ್ಕಿದೆ; ಅದು ಜನಸಾಮಾನ್ಯರಿಗೆ ಸಿಕ್ಕಿಲ್ಲ. ಈ ವಿಚಾರದಲ್ಲಿ ಸರ್ಕಾರವು ನಿಸ್ಸೀಮ ನಿರ್ಲಕ್ಷ್ಯ ತೋರಿದೆ. ಕಂಪನಿಗಳು ಜನಸಾಮಾನ್ಯರಿಗೆ ತೆರಿಗೆ ಇಳಿಕೆಯನ್ನು ತಲುಪಿಸಬೇಕು ಎಂದು ಸರ್ಕಾರ ಹೇಳೋದೂ ಉಂಟು. ಆದರೆ ಅದು ಆದ ಉದಾಹರಣೆ ಮಾತ್ರ ಇಲ್ಲ. ಈಗ ನೋಡಿ, ಹೊಸ ಅಪಾಯಕಾರಿ ನಡೆ ಬಂದಿದೆ. ಸ್ವಯಂ ಸರ್ಕಾರವೇ ಕಂಪನಿಗಳ ಜಾಡನ್ನೇ ಹಿಡಿದಿದೆ! ಇದು ದೌರ್ಭಾಗ್ಯ. ಇದು ದೌರ್ಜನ್ಯ. ಇದು ಅನ್ಯಾಯ. ಈಗ ನಡೆದಿದೆ ಏನು ಗೊತ್ತೆ? ‘ಬೆಲೆ ಇಳಿಕೆ ಲಾಭ ತನಗೆ, ಬೆಲೆ ದುಬಾರಿ ಇದ್ದರೆ ಅದು ಜನತಾ ಜನಾರ್ದನನಿಗೆ’! ಈ ಧೋರಣೆ ಸರ್ಕಾರದ್ದು.

    ಹೋದ ಏಪ್ರಿಲ್​ನಲ್ಲಿ ನಮ್ಮ ಸರ್ಕಾರವು ತೈಲ ಖರೀದಿಸಲು ಒಂದು ಬ್ಯಾರಲ್​ಗೆ 71 ಡಾಲರ್ ನೀಡುತ್ತಿತ್ತು. ಈಗ ಅದು 20 ಡಾಲರ್​ನತ್ತ ಬಂದಿದೆ. ಈ ಇಳಿಕೆಯು ನ್ಯಾಯಸಮ್ಮತವಾಗಿ ನಮಗೆ ನಿಮಗೆ ಸಲ್ಲಬೇಕು. ಈಗ ಅದಿಲ್ಲ. ಅದು ಪರಮ ಅನ್ಯಾಯ. ಸರ್ಕಾರದ ನೀತಿ ಜನತಾ ಜನಾರ್ದನನಿಗೆ ವಿರೋಧವಾಗಿದೆ.

    ಈಗ ನೋಡಿ. ಕಾಂಗ್ರೆಸ್ಸಿನವರೂ ಒಮ್ಮೊಮ್ಮೆ ಅಪರೂಪಕ್ಕೆ – ಬಲು ಅಪರೂಪಕ್ಕೆ – ಸರಿಯಾದ ಮಾತು ಹೇಳುವುದು ಇದೆ. ಪೆಟ್ರೋಲ್ ಡೀಸೆಲ್ ಬೆಲೆ ವಿಚಾರದಲ್ಲಿ ಈಗ ಅವರ ವಾದ ಸರಿಯಾಗಿಯೇ ಇದೆ. ಸರ್ಕಾರವು ಕಳೆದ ಐದು ವರ್ಷಗಳಿಂದ ಜನಸಾಮಾನ್ಯರಿಂದ 16 ಲಕ್ಷ ಕೋಟಿ ರೂಪಾಯಿ ಲೂಟಿ ಮಾಡಿದೆ; ಅದು ಪೆಟ್ರೋಲ್ ಡೀಸೆಲ್ ಮೇಲಿನ ತೆರಿಗೆ ಎಂದಿದೆ ಕಾಂಗ್ರೆಸ್. ಇದು ಕಾಂಗ್ರೆಸ್​ನ ದೋಷಾರೋಪಣೆ. ಐದು ವರ್ಷಗಳಲ್ಲಿ ಪೆಟ್ರೋಲ್ ಮೇಲಿನ ಸುಂಕ ಶೇ. 218ರಷ್ಟು ಏರಿದೆ; ಡೀಸೆಲ್ ಮೇಲಿನ ಸುಂಕ ಶೇ. 450ರಷ್ಟು ಏರಿದೆ. ಇದು ಸರಿಯಲ್ಲ ಎಂಬುದು ಕಾಂಗ್ರೆಸ್ ಟೀಕೆ. ಇದು ಈಗ ನಮ್ಮ ಕಣ್ಣ ಮುಂದೆ ಈ ಸತ್ಯದರ್ಶನ ಸಾಕ್ಷಾತ್ತಾಗಿ ಆಗುತ್ತಿದೆ. ಈಚೆಗಷ್ಟೇ ಪೇಟೆಯಲ್ಲಿ ಬ್ಯಾರೆಲ್​ಗೆ 50 ಡಾಲರ್ ಇತ್ತು. ಹೋದ ವರ್ಷ ಏಪ್ರಿಲ್ ನಲ್ಲಿ 71 ಡಾಲರ್ ಬೆಲೆ ಇದ್ದುದು ಈಗ 20 ಡಾಲರ್ ಬಳಿ ಬಂದಿವೆ. ಇದರ ಪ್ರಯೋಜನ ಜನತಾ ಜನಾರ್ದನನಿಗೆ ಸಲ್ಲಬೇಕು. ಹಾಗಿಲ್ಲವಾದರೆ ಅದು ಅನ್ಯಾಯ. ಬೆಲೆ ಇಳಿಕೆಯ ಕೊಪ್ಪರಿಗೆ ಹಣ ತನ್ನ ಸಂಪತ್ತು ಎಂದು ಈಗ ಸರ್ಕಾರ ಭಾವಿಸಿದಂತಿದೆ. ನೀವೇ ನೋಡಿ. ವಿಶ್ವ ಪೇಟೆಯಲ್ಲಿ ಜನವರಿಯಲ್ಲಿ 61 ಡಾಲರಿಗೆ 1 ಬ್ಯಾರೆಲ್, ಮಾರ್ಚ್ ಮೊದಲ ವಾರದಲ್ಲಿ 51 ಡಾಲರ್, ಈಗ 20 ಡಾಲರ್ ಬಳಿಗೆ ಬಂದಿದೆ. ಹೀಗಾಗಿ ಪೆಟ್ರೋಲ್ – ಡೀಸೆಲ್ ಬೆಲೆಯನ್ನು ಕನಿಷ್ಠ ಶೇ. 20ರಷ್ಟಾದರೂ ಇಳಿಸದಿದ್ದರೆ ಹೇಗೆ? ಸರ್ಕಾರದಿಂದಲೇ ಈ ಅನ್ಯಾಯ – ಅಪಚಾರ ಎಂಬುದು ಊಹಿಸಲು ಸಾಧ್ಯವಿಲ್ಲದ ವಿಚಾರ.

    ಸರ್ಕಾರದ ದಾರಿ ತಪ್ಪಿಸಲು ಬಹಳ ಜನ ಇದ್ದಾರೆ. ಪರದೇಶಿ ಆರ್ಥಿಕ ಪಂಡಿತರು ಅವರಲ್ಲಿ ಮುಖ್ಯರು. ಅವರು ಸರ್ಕಾರದ ವಿತ್ತೀಯ ಕೊರತೆ (ಸರ್ಕಾರದ ಸಾಲ) ಕಡಿಮೆ ಇರಬೇಕು ಎನ್ನುವರು. ಹೀಗಾಗಿ ಪೆಟ್ರೋಲ್ ಡೀಸೆಲ್ ಬೆಲೆ ಇಳಿಸುವ ಬದಲು ಸುಂಕ ಏರಿಸಿ ಸರ್ಕಾರ ಖರ್ಚು ಮಾಡಬೇಕು ಎನ್ನುತ್ತಾರೆ ಇವರು. ಇನ್ನು ದಿಲ್ಲಿ ದರ್ಬಾರಿನಲ್ಲಿ ಕುಳಿತಿರುವ ಸರ್ಕಾರಿ ಅಧಿಕಾರಿಗಳು – ಬಾಬುಗಳು. ಇವರಿಗೆ ಜನಸಾಮಾನ್ಯನ ಚಿಂತೆಗಿಂತ ಸರ್ಕಾರದ ಹಣಕಾಸು ಮುಖ್ಯ. ಇವರಿಗೆ ಸಂಗಾತಿ ಎಂದರೆ ಕಂಪನಿ ಪಟ್ಟಭದ್ರ ಹಿತಾಸಕ್ತಿಗಳು. ಇವರೆಲ್ಲ ಜನತಾ ಜನಾರ್ದನನ ಶೋಷಣೆಗೆ ಸದಾ ಹೊಂಚುಹಾಕುತ್ತಾರೆ. ದೊಡ್ಡ ಕಂಪನಿಗಳ ಕಣ್ಣು ಸದಾ ಜನಸಾಮಾನ್ಯನ ಜೇಬಿನ ಮೇಲೇ ಇರುತ್ತದೆ. ಅದು ಪೆಟ್ರೋಲ್ ಡೀಸೆಲ್ ಇರಬಹುದು, ಮೊಬೈಲ್ ಫೋನ್ ಇರಬಹುದು, ಟಿವಿ ಚಾನೆಲ್ ವ್ಯವಹಾರ ಇರಬಹುದು – ಈ ದಾರಿಯಲ್ಲಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುವುದೇ ಕಂಪನಿಗಳ ಕರಾಮತ್ತು – ಮಸಲತ್ತು. ಉದಾಹರಣೆಗೆ ಟೆಲಿಫೋನ್ ಚಂದಾದಾರರ ವಿಚಾರ. ಭಾರತದ ಜನಸಂಖ್ಯೆ 140 ಕೋಟಿ ಹತ್ತಿರ ಇದೆ. ಈ ಚಂದಾದಾರರ ಸಂಖ್ಯೆ ಕೂಡ ಅಷ್ಟೇ ಇದೆ! 95 ಕೋಟಿ ಮೊಬೈಲ್​ದಾರರು ಮಾತನಾಡಿ, ಸದಾ 24 ಗಂಟೆ ಮಾತನಾಡಿ, ಕಂಪನಿಗಳ ಸಂಪತ್ತನ್ನು ಹೆಚ್ಚಿಸುತ್ತಿದ್ದಾರೆ. ಸರ್ಕಾರ ಕೂಡ ಈ ಕಂಪನಿಗಳ ಜೊತೆ ಶಾಮೀಲಾಗಿದೆ! ಇದು ನನ್ನ ಮಾತಲ್ಲ. ಇದು ಸುಪ್ರೀಂ ಕೋರ್ಟ್ ಈಗ ತಾನೇ ಹೇಳಿದ ಮಾತು. ಟೆಲಿಕಾಂ ಕಂಪನಿಗಳಿಂದ 1.45ಲಕ್ಷ ಕೋಟಿ ರೂಪಾಯಿ ಸರ್ಕಾರಕ್ಕೆ ಬರಬೇಕಾಗಿದೆ. ಇದು ಬಂದಿಲ್ಲ. ಸುಪ್ರಿಂ ಕೋರ್ಟಿಗೂ ಈ ವಿಚಾರ ಹೋಗಿದೆ.

    ತೀರ್ಪು ಬಂದು ಬಹಳ ಕಾಲ ಆಗಿದೆ. ಆದರೆ ಏನೂ ಆಗಿಲ್ಲ! ಸುಪ್ರೀಂ ಕೋರ್ಟ್ ಈಗ ಗರಂ ಆಗಿದೆ. ಕಂಪನಿಗಳು ಹಾಗೆಯೇ ಸರ್ಕಾರದ ಟೆಲಿಫೋನ್ ಇಲಾಖೆ ಸುಮ್ಮನೆ ಕಾಲಹರಣ ಮಾಡುತ್ತಿವೆ ಎಂದು ವಿಪರೀತ ಕೋಪ ತೋರಿದೆ. ನೋಡಿ, ಕಂಪನಿಗಳು ಹಾಗೂ ಸರ್ಕಾರ ಹೇಗೆ ಜನತಾ ಜನಾರ್ದನ ಶೋಷಣೆ ಮಾಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಮಾತ್ರ. ಈ ರೋಗ ಈಗ ಸರ್ಕಾರಕ್ಕೂ ಬಂದಿರುವುದು ದುರಂತದ ವಿಚಾರ.

    ಸರ್ಕಾರಕ್ಕೆ ಮಾರ್ಗದರ್ಶನ ಮಾಡುವವರು ಈಗ ಸರಿ ಇಲ್ಲ. ಅಲ್ಪಮತಿಗಳು ಇದ್ದಾರೆ ಅಪಾರವಾಗಿ. ಉದಾಹರಣೆ ನೋಡಿ. ಎಸ್​ಬಿಐನ ವರದಿಯೊಂದು ಸರ್ಕಾರಕ್ಕೆ ಹೀಗೆ ಬೋಧನೆ ಮಾಡಿದೆ – ‘ಸರ್ಕಾರವು ಪೆಟ್ರೋಲ್ ಡೀಸೆಲ್ ಬೆಲೆಯನ್ನು ಇಳಿಯಲು ಬಿಡಬಾರದು; ಸುಂಕವನ್ನು ಮತ್ತೆ ಇನ್ನೂ ಹೆಚ್ಚಿಸಬೇಕು.’ ಈ ವರದಿಯ ಜಾಡು ನೋಡಿ. ಹೇಗೆ ಸರ್ಕಾರಕ್ಕೆ ದಾರಿ ತಪ್ಪಿಸಲು ಎಷ್ಟು ಜನ ಇದ್ದಾರೆ ಎಂಬುದನ್ನು ನೋಡಿ. ಸರ್ಕಾರವೇ ಶ್ರೀಸಾಮಾನ್ಯನ ಪರ ಇಲ್ಲದಿದ್ದಾಗ ಏನು ಮಾಡುವುದು? ಏನಾದರೂ ನಾವು ಹೇಳಿದರೆ ಅದು, ‘ಸುಂಕದವನ ಮುಂದೆ ಸುಖ-ದುಃಖ ಹೇಳಿಕೊಂಡಂತೆ’ ಅಂತಾರಲ್ಲ, ಹಾಗೆ ಆಗುತ್ತದೆ. ಬೇರೆ ಯಾವ ದಾರಿಯಲ್ಲೂ ಸರ್ಕಾರವು ಜನಸಾಮಾನ್ಯನ ಜೇಬಿಗೆ ಹಣ ತುಂಬುವ ಕೆಲಸ ಮಾಡುವುದು ಸಾಧ್ಯವಿಲ್ಲ. ಅದು ಆಗುವುದಿದ್ದರೆ ಅದು ಪೆಟ್ರೋಲ್ ಬಂಕ್ ಮಟ್ಟದ ಬೆಲೆ ಇಳಿಕೆಯಿಂದ ಮಾತ್ರ ಸಾಧ್ಯ. ಸರ್ಕಾರವು ಸುಂಕ ಏರಿಸುವ ನಿರ್ಧಾರವನ್ನು ಬಿಡಬೇಕು. ಸರ್ಕಾರದ ಉದ್ಧಾರಕ್ಕೆ ಇದು ಬೇಕು. ಜನಸಾಮಾನ್ಯರಿಗೆ ಈಗಿನ ಬೆಲೆ ಇಳಿಕೆಯಲ್ಲಿ ಬಂದಿರುವ ಅಷ್ಟೂ ಲಾಭವನ್ನು ತಲುಪಿಸಬೇಕು. ಸರ್ಕಾರಕ್ಕೆ ಜನಸಾಮಾನ್ಯನಿಗೆ ಸಹಾಯ ಮಾಡುವ ಇರಾದೆ ಇದ್ದರೆ ಅದು ಪೆಟ್ರೋಲ್ ಬೆಲೆ ಇಳಿಕೆಯಲ್ಲಿ ಬರಬೇಕು. ಕಡುಬಡವನೂ ಪೆಟ್ರೋಲ್ ಬಂಕಿಗೆ ಬರುತ್ತಾನೆ. ಅವನು ಜೇಬಲ್ಲಿ ದುಡ್ಡು ಉಳಿಯಬೇಕು. ಪೆಟ್ರೋಲ್ ಜನಸಾಮಾನ್ಯರ, ಕೆಳಮಧ್ಯಮ ವರ್ಗದ ನಿತ್ಯ ಬಳಕೆ ವಸ್ತು. ಈ ಖರ್ಚು ಎಲ್ಲರಿಗೂ ಹೆಚ್ಚು. ಅದು ಉಳಿದರೆ ಎಲ್ಲರೂ ಸಂತೋಷ. ಬೇರೆ ಕಡೆ ಈ ಉಳಿದ ಹಣವನ್ನು ಖರ್ಚು ಮಾಡುತ್ತಾರೆ. ಹೀಗೆ ಜನಸಾಮಾನ್ಯರು ಹೆಚ್ಚು ಹೆಚ್ಚು ಖರ್ಚು ಮಾಡಿದಾಗಲೇ ಇಡೀ ಅರ್ಥವ್ಯವಸ್ಥೆ ಗಟ್ಟಿ ಆಗುತ್ತದೆ. ಆಗ ದೊಡ್ಡ ಚೇತರಿಕೆ ಅರ್ಥವ್ಯವಸ್ಥೆಯಲ್ಲಿ ಬರುವುದು ಸಾಧ್ಯ. ಈಗ ಪೆಟ್ರೋಲ್ ಬೆಲೆ ಇಳಿಕೆ ಮಾಡಿ ಸರ್ಕಾರ ಪುಣ್ಯ ಕಟ್ಟಿ ಕೊಳ್ಳಲಿ. ಜನತಾ ಜನಾರ್ದನನ ಪ್ರಸನ್ನಗೊಳಿಸುವ ಈ ಸದವಕಾಶವನ್ನು ಸರ್ಕಾರ ಕಳೆದುಕೊಳ್ಳಬಾರದು. ಅವನು ಕೊಡುವ ಆರ್ಥಿಕ ಚೇತರಿಕೆ ವರನನ್ನು ಮಣ್ಣುಪಾಲು ಮಾಡಬಾರದು. ಒಂದು ವಿಚಾರ ಮರೆಯುವಂತಿಲ್ಲ. ಸರ್ಕಾರವು ಒಂದಿಷ್ಟು ಹೋಂವರ್ಕ್ ಮಾಡಬೇಕು. ಬ್ಯಾರಲ್ ತೈಲಬೆಲೆ 50 ಡಾಲರ್ ಇದ್ದಾಗ 2019-20ರಲ್ಲಿ 105 ಶತಕೋಟಿ ಡಾಲರ್ ನಮ್ಮ ಆಮದು ಬಿಲ್ಲು ಆಗಿತ್ತು. ಈ ಬೆಲೆಯು 35 ಡಾಲರಿಗೆ ಕುಸಿದಾಗ ಈ ತೈಲ ಬಿಲ್ಲು 58 ಶತಕೋಟಿ ಡಾಲರ್​ಗೆ ಇಳಿದಿದೆ. ಅಂದರೆ 47 ಬಿಲಿಯನ್ ಡಾಲರ್ ಉಳಿತಾಯವಾಗಿದೆ. ಈಗ ತೈಲಬೆಲೆ 20 ಡಾಲರ್ ಮಟ್ಟದಲ್ಲಿ ಈ ವರ್ಷ ಇರುತ್ತದೆ. ಈ ಅಗಾಧ ಲಾಭವನ್ನು ಬಕಾಸುರನಂತೆ ನನ್ನದು ಎಂದು ಸರ್ಕಾರ ಭಾವಿಸಬಾರದು. ಜನಸಾಮಾನ್ಯರು ಇಂದು ನಾನಾ ತೊಂದರೆಗಳಿಂದ ಬದುಕು ಸಾಗಿಸುತ್ತಿದ್ದಾರೆ. ಅವರ ಬಗ್ಗೆ ಅನುಕಂಪ ಕರುಣೆ ಸರ್ಕಾರಕ್ಕೆ ಇರಲಿ. ಡೀಸೆಲ್ ಪೆಟ್ರೋಲ್ ಬೆಲೆ ಗಣನೀಯವಾಗಿ ಇಳಿಯಲಿ.

    ಹಳ್ಳಿಗೆ ಕರೊನಾ ಬರದಂತೆ ತಡೆಯೋಣ: ರಾಜ್ಯವ್ಯಾಪಿ ಸೋಂಕು ಹರಡಲು ಅವಕಾಶ ನೀಡುವುದಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts