3 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಾಣ

ವಿರಾಜಪೇಟೆ: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಕೊಡಗು ಸಂತ್ರಸ್ತರಿಗೆ 3 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಹೇಳಿದರು.

ವಿರಾಜಪೇಟೆಯಲ್ಲಿ ಮಳೆ ಹಾನಿಗೊಳಗಾದ ಗುಡ್ಡಗಾಡು ಪ್ರದೇಶಗಳಾದ ಅರಸು ನಗರ, ಮಲೆತಿರಿಕೆಬೆಟ್ಟ, ಅಯ್ಯಪ್ಪಬೆಟ್ಟ, ಸುಂಕದ ಕಟ್ಟೆ, ನೆಹರುನಗರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ನಂತರ ಮಾತನಾಡಿ ಅವರು, ಮಳೆಗೆ ಭಾಗಶಃ ಜಖಂಗೊಂಡ ಕೆಲ ಮನೆಗಳು ಮುಂದಿನ ಮಳೆಗಾಲ ವೇಳೆಗೆ ನೆಲಸಮಗೊಳ್ಳುವ ಸಾಧ್ಯತೆ ಇದೆ. ಮನೆ ನೆಲಸಮಗೊಂಡ ಸಂತ್ರಸ್ತರಿಗೂ ಆದ್ಯತೆ ಮೇರೆ ಮನೆ ಕಟ್ಟಿಕೊಡಲಾಗವುದು. ಫಲಾನುಭವಿಗಳಿಗೆ ಮನೆ ಕಟ್ಟಿಕೊಡಲಾಗುವುದು ಎಂದರು.

ಬಳಿಕ ಮಲೆತಿರಿಕೆಬೆಟ್ಟದಲ್ಲಿ ಪಟ್ಟಣ ಪಂಚಾಯಿತಿ ಗುರುತಿಸಿರುವ ಬಟರ್ ಫ್ಲೈ ಪಾರ್ಕ್ ನಿರ್ಮಾಣದ ವ್ಯೆ ಪಾಯಿಂಟ್ ಜಾಗವನ್ನು ಪರಿಶೀಲಿಸಿದರು. ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೇ ವೇಳೆ ಪಟ್ಟಣ ಪಂಚಾಯಿತಿಯಿಂದ ಯೋಜನೆ ಅಂಗಿಕಾರಗೊಂಡಿರುವುದನ್ನು ಅಧಿಕಾರಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಸಂತ್ರಸ್ತರಿಗೆ ಮನೆ ನಿರ್ಮಾಣ, ಪರಿಹಾರದ ವಿಚಾರದಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸುವಾಗ ಸೂಕ್ತ ದಾಖಲೆಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದರು. ತಹಸೀಲ್ದಾರ್ ಬಿ.ಎಂ.ಗೋವಿಂದರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಸಹಾಯಕ ಅಭಿಯಂತರ ಎನ್.ಪಿ.ಹೇಮ್‌ಕುಮಾರ್, ಕಂದಾಯಾಧಿಕಾರಿ ಪಳಂಗಪ್ಪ, ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಿದ್ದರು.