2014ರಿಂದ ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ಎಷ್ಟು ಕೋಟಿ ರೂ. ಖರ್ಚಾಗಿದೆ ಗೊತ್ತಾ?

ನವದೆಹಲಿ: ನರೇಂದ್ರ ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಇಲ್ಲಿಯವರೆಗೂ ಕೈಗೊಂಡಿರುವ ವಿದೇಶಿ ಪ್ರವಾಸಕ್ಕೆ ಬರೋಬ್ಬರಿ 2,021 ಕೋಟಿ ರೂ. ಖರ್ಚಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪ್ರಧಾನಿ ಅವಧಿಯಲ್ಲಿ ವಿದೇಶಿ ಪ್ರವಾಸಕ್ಕೆ ಸಾವಿರಾರು ಕೋಟಿ ರೂ. ಖರ್ಚಾಗುವುದು ಸಾಮಾನ್ಯವಾದರೂ, ಯುಪಿಎ ಸರ್ಕಾರಕ್ಕಿಂತಲೂ ಮೋದಿ ಅವಧಿಯಲ್ಲಿ ಹೆಚ್ಚು ಹಣ ಖರ್ಚಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಮೋದಿ ವಿದೇಶಿ ಪ್ರವಾಸದ ವೇಳೆ ಚಾರ್ಟರ್​​ ವಿಮಾನಗಳು (ವಿದೇಶದಲ್ಲಿ ಬಾಡಿಗೆಗೆ ಪಡೆದಿದ್ದ ಖಾಸಗಿ ವಿಮಾನ), ವಿಮಾನ ನಿರ್ವಹಣೆ ಮತ್ತು ಹಾಟ್​ಲೈನ್​ ಸಂಪರ್ಕಕ್ಕೇ 2021 ಕೋಟಿ ರೂ. ಖರ್ಚಾಗಿರುವುದು ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.

ರಾಜ್ಯಸಭೆಯಲ್ಲಿ ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಕೆ. ಸಿಂಗ್ ಅವರು, 2014ರ ಜೂನ್​ 15ರಿಂದ 2018ರ ಡಿ.3 ವರೆಗೆ ಮೋದಿ ವಿದೇಶಿ ಪ್ರವಾಸಕ್ಕೆ ತಗುಲಿರುವ ವೆಚ್ಚದ ಮಾಹಿತಿ ಜತೆ ಟಾಪ್​ 10 ರಾಷ್ಟ್ರಗಳಿಂದ ದೇಶಕ್ಕೆ ಬಂದಿರುವ ವಿದೇಶಿ ನೇರ ಹೂಡಿಕೆ (ಎಫ್​ಡಿಐ) ಬಗ್ಗೆಯೂ ಮಾಹಿತಿ ನೀಡಿದ್ದಾರೆ.

2,012 ಕೋಟಿ ರೂಪಾಯಿಯಲ್ಲಿ 1,583.18 ಕೋಟಿ ರೂ. ಪ್ರಧಾನಿ ಪ್ರಯಾಣಿಸಿದ್ದ ವಿಮಾನ ನಿರ್ವಹಣೆಗೆ ಬಳಸಲಾಗಿದ್ದು, 429.25 ಕೋಟಿ ರೂ. ಚಾರ್ಟರ್​ವಿಮಾನಗಳಿಗೆ ಮತ್ತು 429.25 ಕೋಟಿ ರೂ. ಹಾಟ್​ಲೈನ್​ ಸಂಪರ್ಕಕ್ಕೆ ಬಳಕೆಯಾಗಿದೆ ಎಂಬ ಅಂಕಿ ಅಂಶ ನೀಡಿದ್ದಾರೆ.

ಜತೆಗೆ ಇಲ್ಲಿಯವರೆಗೂ ಪ್ರಧಾನಿ 55 ದೇಶಗಳಿಗೆ ಭೇಟಿ ನೀಡಿದ್ದು, ಅವುಗಳಲ್ಲಿ ಟಾಪ್​ ಹತ್ತು ರಾಷ್ಟ್ರಗಳಿಂದ ಹೆಚ್ಚು ವಿದೇಶಿ ಬಂಡವಾಳ ಹರಿದು ಬಂದಿದೆ. 2014ರಲ್ಲಿ 30,930.5 ಮಿಲಿಯನ್​ ಡಾಲರ್​ ಇದ್ದ ಎಫ್​ಡಿಐ 2017ರಷ್ಟರಲ್ಲಿ 43,478.27 ಮಿಲಿಯನ್​ ಡಾಲರ್​ ತಲುಪಿದೆ ಎಂದು ಮಾಹಿತಿ ನೀಡುವ ಮೂಲಕ ಪ್ರಧಾನಿ ವಿದೇಶಿ ಪ್ರವಾಸವನ್ನು ಸಮರ್ಥಿಸಿಕೊಂಡಿದ್ದಾರೆ.

ಸಚಿವರು ನೀಡಿದ ಮಾಹಿತಿಯನುಸಾರ ಮನಮೋಹನ್​ ಸಿಂಗ್​ ಎರಡನೇ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಅಂದರೆ 2009ರಿಂದ 2014ರವರೆಗೂ ಚಾರ್ಟರ್​​ ವಿಮಾನಗಳು, ವಿಮಾನ ನಿರ್ವಹಣೆ ಮತ್ತು ಹಾಟ್​ಲೈನ್​ ಸಂಪರ್ಕಕ್ಕೆ ಒಟ್ಟು 1,346 ಕೋಟಿ. ರೂ ಖರ್ಚಾಗಿತ್ತು ಎಂದು ತಿಳಿದು ಬಂದಿದೆ. (ಏಜೆನ್ಸೀಸ್)