ಹೈದರಾಬಾದ್: ವಿಶ್ವ ಸುಂದರಿ ಸ್ಪರ್ಧೆಗೆ 200 ಕೋಟಿ ರೂ. ನೀಡಲು ಸಜ್ಜಾಗಿರುವ ತೆಲಂಗಾಣ ಸರ್ಕಾರದ ವಿರುದ್ಧ ವಿಪಕ್ಷವಾದ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ತೀವ್ರ ವಾಗ್ದಾಳಿ ನಡೆಸಿದೆ. ವಿಧಾನಸಭೆಯಲ್ಲಿ ವಾರ್ಷಿಕ ಬಜೆಟ್ ಭಾಷಣದಲ್ಲಿ ಬಿಆರ್ಎಸ್ ಶಾಸಕರು ತೆಲಂಗಾಣ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರ 72ನೇ ವಿಶ್ವ ಸುಂದರಿ ಸ್ಪರ್ಧೆಗೆ ಆತಿಥ್ಯ ವಹಿಸಲು 200 ಕೋಟಿ ರೂ. ವೆಚ್ಚ ಮಾಡಲು ಮುಂದಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಬಿಆರ್ಎಸ್ ನಾಯಕ ಕೆ.ಟಿ.ರಾಮರಾವ್, ಇದಕ್ಕೆ ಕಾಂಗ್ರೆಸ್ ಸಾರ್ವಜನಿಕರ ಕೋಟಿಗಟ್ಟಲೆ ಹಣ ಖರ್ಚು ಮಾಡುವುದು ಕುತರ್ಕ ಎಂದು ಟೀಕಿಸಿದರು. ಹೈದರಾಬಾದ್ನಲ್ಲಿ ಫಾಮುಲಾ-ಇ ರೇಸ್ಗೆ 46 ಕೋಟಿ ರೂ. ಖರ್ಚು ಮಾಡುವುದು ಕೂಡ ತಪ್ಪು ಎಂದ ಅವರು, ಇಂಥ ನಿರ್ಣಯಗಳ ಬಗ್ಗೆ ರಾಹುಲ್ ಗಾಂಧಿ ವಿವರಣೆ ನೀಡಬಲ್ಲರೇ ಎಂದು ಪ್ರಶ್ನಿಸಿದರು.
ಸರ್ಕಾರ ಇಂಥವುಗಳಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡುವ ಬದಲು ಸಂಕಷ್ಟದಲ್ಲಿರುವ ರೈತರಿಗೆ ಎಕರೆಗೆ 25 ಸಾವಿರ ರೂ. ನೀಡಬೇಕು ಎಂದು ವಿಪಕ್ಷ ಸದಸ್ಯರು ಬೇಡಿಕೆ ಇರಿಸಿದರು. ‘ತೆಲಂಗಾಣದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ನಾವೆಲ್ಲ ನಂಬಬೇಕು ಎಂದು ಕಾಂಗ್ರೆಸ್ ಬಯಸುತ್ತಿದೆ. ಎಲ್ಲವೂ ಚೆನ್ನಾಗಿದ್ದಿದ್ದರೆ ನಿನ್ನೆ ಸಿಎಂ ಇದ್ದಕ್ಕಿದ್ದಂತೆ ನಕಾರಾತ್ಮಕ ಬೆಳವಣಿಗೆ ಇದೆ, 71 ಸಾವಿರ ಕೋಟಿ ರೂ. ಕೊರತೆ ಇದೆ ಎಂದು ಹೇಳಿಕೊಂಡಿದ್ದೇಕೆ?’ ಎಂದು ರಾಮರಾವ್ ಟೀಕಿಸಿದ್ದಾರೆ.