ಟಿಎಂಎಸ್​ಗೆ 2.98 ಕೋ.ರೂ. ಲಾಭ

ಸಿದ್ದಾಪುರ: ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ (ಟಿಎಂಎಸ್) 2017-18ನೇ ಸಾಲಿನಲ್ಲಿ 2.98 ಕೋ.ರೂ.ಗಳಷ್ಟು ನಿವ್ವಳ ಲಾಭ ಗಳಿಸಿದೆ. ಇದು ಐತಿಹಾಸಿಕ ದಾಖಲೆಯಾಗಿದ್ದು, ಸಂಘದ ಷೇರುದಾರ ಸದಸ್ಯರಿಗೆ ಶೇ. 10ರಂತೆ ಲಾಭಾಂಶ ವಿತರಿಸಲು ತೀರ್ವನಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.

ಪಟ್ಟಣದಲ್ಲಿರುವ ಸಂಘದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಹಲವು ವರ್ಷಗಳಿಂದ ಲಾಭ ಗಳಿಸುತ್ತ ಬಂದಿದ್ದರೂ ಪ್ರಸಕ್ತ ವರ್ಷದ ಲಾಭ ಉತ್ತಮವಾಗಿದೆ. ಸಂಘದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಪ್ರಾಮಾಣಿಕ ಸೇವೆ ಮತ್ತು ಆಡಳಿತ ಮಂಡಳಿಯ ಸದಸ್ಯರ ಸಲಹೆ- ಸೂಚನೆ ಲಾಭ ಗಳಿಕೆಗೆ ಕಾರಣವಾಗಿದೆ. ಸಂಘದಲ್ಲಿ 3,745 ಸದಸ್ಯರಿದ್ದು 3.20 ಕೋ .ರೂ. ಷೇರು ಬಂಡವಾಳ ಹೊಂದಿದೆ. ಸಂಚಿತ ನಿಧಿ 22.6 ಕೋ.ರೂ., ಇದ್ದು ಕಳೆದ ವರ್ಷಕ್ಕಿಂತ 3.29 ಕೋ.ರೂ.ಗಳಷ್ಟು ಹೆಚ್ಚಳವಾಗಿದೆ. 55.30 ಕೋ.ರೂ. ಠೇವಣಿ ಇದ್ದು ಕಳೆದ ವರ್ಷಕ್ಕಿಂತ 8.41 ಕೋ.ರೂ. ಹೆಚ್ಚು ಸಂಗ್ರಹಣೆಯಾಗಿದೆ ಎಂದರು.

41 ಸಾವಿರದ 488 ಕ್ವಿಂಟಾಲ್ ಅಡಕೆ ಹಾಗೂ ಕಾಳುಮೆಣಸು ಮಾರಾಟ ಮಾಡಲಾಗಿದೆ. ಕಾನಸೂರು ಶಾಖೆಯಲ್ಲಿ 40 ಲಕ್ಷ 62 ಸಾವಿರ, ಮಾರಾಟ ಮಳಿಗೆ ಶಿರಸಿಯಲ್ಲಿ 28 ಲಕ್ಷ ರೂ., ಕೃಷಿ ವಿಭಾಗದಲ್ಲಿ 12 ಲಕ್ಷ ರೂ., ಔಷಧ ವಿಭಾಗದಲ್ಲಿ 5 ಲಕ್ಷ ರೂ. ಹಾಗೂ ಅಡಕೆ ಖರೀದಿ ವಿಭಾಗದಲ್ಲಿ 9 ರೂ.ಗಳಷ್ಟು ಲಾಭ ಗಳಿಸಿದೆ ಎಂದು ಹೇಳಿದರು.

ವಿವಿಧ ಯೋಜನೆ: ಸಂಘದ ಕಾರ್ಯಾಲಯದ ಕಟ್ಟಡ ನವೀಕರಣ, ವಾಹನ ಶೆಡ್ ನಿರ್ವಣ, ಸಂಘದ 10 ಗುಂಟೆ ನಿವೇಶನದಲ್ಲಿ ವ್ಯಾಪಾರ ಅಂಗಣ ನಿರ್ವಿುಸುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಆರ್.ಎಂ. ಹೆಗಡೆ ಬಾಳೇಸರ ಹೇಳಿದರು.

ವಾರ್ಷಿಕ ಸಭೆ 8 ರಂದು: ಸಂಘದ ವಾರ್ಷಿಕ ಸಭೆ ಸೆ. 8ರಂದು ಮಧ್ಯಾಹ್ನ 3ಗಂಟೆಗೆ ಸಂಘದ ವ್ಯಾಪಾರಾಂಗಣದಲ್ಲಿ ನಡೆಯಲಿದೆ. ಸಭೆಯ ನಂತರ ವಾಸುದೇವ ಸಾಮಗ ಬಳಗದವರಿಂದ ಅತಿಕಾಯ ಮೋಕ್ಷ ತಾಳಮದ್ದಳೆ ನಡೆಯಲಿದೆ. ಅದರಂತೆ ಸೆ. 4ರಂದು ಮಂಗಳವಾರ ಶಿರಸಿ ಹಾಗೂ 6ರಂದು ಗುರುವಾರ ಕಾನಸೂರು ಶಾಖೆಯಲ್ಲಿ ಸಹಕಾರಿ ಸಭೆ ನಡೆಯಲಿದೆ.

ಹಾನಿ: ಸೊರಬ ಮಾರಾಟ ಮಳಿಗೆಯಲ್ಲಿ 1.64 ಲಕ್ಷ ರೂ., ಅಕ್ಕಿ ಗಿರಣಿ ವಿಭಾಗದಲ್ಲಿ 2 ಲಕ್ಷ ರೂ. ಹಾನಿ ಸಂಭವಿಸಿದೆ ಎಂದು ತಿಳಿಸಿದರು.

ಸಂಘದ ಉಪಾಧ್ಯಕ್ಷ ಎಂ.ಜಿ. ನಾಯ್ಕ, ನಿರ್ದೇಶಕರಾದ ಎಸ್.ಬಿ. ಗೌಡರ್, ಎಂ.ಆರ್. ಹೆಗಡೆ ನೈಗಾರ, ಎಂ.ಐ. ನಾಯ್ಕ, ವ್ಯವಸ್ಥಾಪಕ ಸತೀಶ ಹೆಗಡೆ ಉಪಸ್ಥಿತರಿದ್ದರು.

 

ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಮಳೆ ಬಿದ್ದ ಪರಿಣಾಮ ತಾಲೂಕಿನಾದ್ಯಂತ ಶೇ. 50ಕ್ಕಿಂತ ಹೆಚ್ಚು ಅಡಕೆ ಕೊಳೆ ರೋಗದಿಂದ ನಾಶವಾಗಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಅವರಿಗೆ ಮಾಹಿತಿ ನೀಡಿ, ಬೆಳೆಗಾರರಿಗೆ ಪರಿಹಾರ ನೀಡುವಂತೆ ಆಗ್ರಹಿಸಲಾಗುವುದು.

| ಆರ್.ಎಂ. ಹೆಗಡೆ ಬಾಳೇಸರ ಟಿಎಂಎಸ್ ಅಧ್ಯಕ್ಷ