ಟೈರ್​ನಲ್ಲಿತ್ತು ಕೋಟಿ ಕೋಟಿ ಹಣ, ಕಳ್ಳಸಾಗಣೆಯಲ್ಲೂ ಕಳ್ಳತನ!

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ 2ನೇ ಹಂತದ ಮತದಾನದ ಕಾವು ಹೆಚ್ಚಾಗುತ್ತಿದಂತೆ ಅಕ್ರಮ ಹಣ ಸಾಗಾಟದ ವಿರುದ್ಧದ ಐಟಿ ಅಧಿಕಾರಿಗಳ ಸಮರ ಮುಂದುವರೆದಿದೆ. ಬೆಂಗಳೂರು, ಬಾಗಲಕೋಟೆ ಯಲ್ಲಿ 4.50 ಕೋಟಿ ರೂ. ಜಪ್ತಿ ಮಾಡಲಾಗಿದೆ.

ಬೆಂಗಳೂರಿನಿಂದ ಶಿವಮೊಗ್ಗ ಮತ್ತು ಭದ್ರಾವತಿಗೆ ಹಣ ಸಾಗಣೆ ಕುರಿತು ಸಿಕ್ಕ ನಿಖರ ಮಾಹಿತಿ ಮೇರೆಗೆ ಸಂಬಂಧಪಟ್ಟ ವ್ಯಕ್ತಿ ಮತ್ತು ಆತನ ವಾಹನವನ್ನು ಭದ್ರವಾತಿ ಬಳಿ ಪರಿಶೀಲನೆ ನಡೆಸಲಾಯಿತು. ವಾಹನದಲ್ಲಿದ್ದ ಸ್ಟೆಪ್ನಿ ಚಕ್ರದಲ್ಲಿ 2 ಸಾವಿರ ರೂ. ಮುಖಬೆಲೆಯ 2.30 ಕೋಟಿ ರೂ. ಪತ್ತೆಯಾಗಿದೆ. ಈತನಿಗೆ ಸಂಬಂಧಿಸಿದ ಭದ್ರಾವತಿಯ ಸ್ಥಳಗಳಲ್ಲಿ ಶೋಧಿಸಿದಾಗ 60 ಲಕ್ಷ ರೂ. ಪತ್ತೆಯಾಗಿದೆ.

ಮತದಾರರಿಗೆ ಹಂಚಲು ಹಣ ಬಚ್ಚಿಡಲಾಗಿದೆ ಎಂದ ಸ್ಥಳೀಯ ಗುಪ್ತಚರ ಮಾಹಿತಿ ಆಧರಿಸಿ ಬಾಗಲಕೋಟೆ ನವನಗರದ ಬ್ಯಾಂಕ್ ಉದ್ಯೋಗಿ ಮನೆಯಲ್ಲಿ 1 ಕೋಟಿ ರೂ. ಜಪ್ತಿ ಮಾಡಲಾಗಿದೆ.

ವಿಶೇಷವೆಂದರೆ, ಹಣ ಸಾಗಣೆ ಮಾಡುವ ಹೊಣೆ ಹೊತ್ತಿದ್ದ ವ್ಯಕ್ತಿಗಳು 100 ನೋಟುಗಳಿದ್ದ ಪ್ರತಿ ಬಂಡಲ್​ನಿಂದ 2 ಸಾವಿರ ರೂ. ಮುಖಬೆಲೆಯ 4 ನೋಟು ತೆಗೆದುಕೊಂಡಿದ್ದರು. ಹಣ ಕಳ್ಳಸಾಗಣೆಯಲ್ಲೇ ಕಳ್ಳತನ ಮಾಡಲಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಗೋವಾದಲ್ಲಿ ಆಭರಣ ಉದ್ಯಮದ ಸಹೋದರರಿಗೆ ಸೇರಿದ 2 ಮನೆ ಹಾಗೂ 2 ಮಳಿಗೆಗಳಲ್ಲಿ ಶೋಧ ನಡೆಸಿದಾಗ 30 ಲಕ್ಷ ರೂ.ಗೂ ಹೆಚ್ಚು ಹಣ ಜಪ್ತಿಯಾಗಿದೆ. ಈ ಇಬ್ಬರು ವ್ಯಾಪಾರಿಗಳು ಹಣದ ಮೂಲಕವೇ ಆಭರಣ ವ್ಯಾಪಾರ ನಡೆಸುತ್ತಿದ್ದರು. ನಗದು ಬೇಕು ಎಂದವರಿಗೆ ಹಣ ಕೊಟ್ಟು ಅವರಿಂದ ಚೆಕ್ ಸ್ವೀಕರಿಸುತ್ತಿದ್ದರು. ವಿಜಯಪುರದಲ್ಲಿ ನಡೆದ ಮತ್ತೊಂದು ಶೋಧದ ವೇಳೆ 10 ಲಕ್ಷ ರೂ.ಗೂ ಹೆಚ್ಚು ಹಣ ಜಪ್ತಿ ಮಾಡಲಾಗಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.

ನೋಟಿನ ಕಂತೆ ಎಸೆದು ಪರಾರಿ

ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಆಪ್ತರು ಎನ್ನಲಾದ, ಡಿಸಿಸಿ ಬ್ಯಾಂಕ್ ನೌಕರರಾದ ಆರೀಫ್ ಕಾರ್ಲೆಕರ್ ಹಾಗೂ ಯಾಸೀನ್ ತುಂಬರಮಟ್ಟಿ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆರೀಫ್ ಮನೆಗೆ ಯಾಸೀನ್ ದುಡ್ಡಿನ ಕಂತೆ ತೆಗೆದá-ಕೊಂಡು ಹೋಗá-ತ್ತಿದ್ದಾಗ ದಾಳಿ ನಡೆಸಿದ್ದರಿಂದ ಕಂತೆಯನ್ನು ಅಲ್ಲೇ ಎಸೆದು ಕಾಲ್ಕಿತ್ತಿದ್ದಾನೆ. ಆರೀಫ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಯಾಸೀನ್ ಸಿಕ್ಕಿದ್ದು, ಆತನನ್ನೂ ವಿಚಾರಣೆ ಮಾಡಲಾಗಿದೆ. ಡಿಸಿಸಿ ಬ್ಯಾಂಕ್ ಲಾಕರ್​ನಲ್ಲಿ ಚಿನ್ನಾಭರಣಗಳು ಪತ್ತೆಯಾಗಿವೆ.

ಡಾ.ಸುನೀತಾ ಚವಾಣ್​ಗೆ ಐಟಿ ಶಾಕ್

ವಿಜಯಪುರ: ನಾಗಠಾಣ ಶಾಸಕ ದೇವಾನಂದ ಚವಾಣ್ ಪತ್ನಿ, ವಿಜಯಪುರ ಮೀಸಲು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚವಾಣ್ ಸಂಬಂಧಿಕರ ಮನೆ ಮೇಲೆ ಶನಿವಾರ ಮಧ್ಯಾಹ್ನ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶನಿವಾರ ಬೆಳಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಜಿಲ್ಲೆಯಿಂದ ಕಾಲ್ಕೀಳುತ್ತಿದ್ದಂತೆ ಡಾ.ಸುನೀತಾ ಸಂಬಂಧಿಕರಿಗೆ ಸೇರಿದ ತಾಂಬಾ ಗ್ರಾಮದಲ್ಲಿಯ ಮನೆ, ಶಾಸಕ ದೇವಾನಂದರ ಆಪ್ತ ದೇವಪ್ಪ ತದ್ದೇವಾಡಿ ಮನೆ ಮೇಲೆ ದಾಳಿ ನಡೆದಿದೆ. ಇನ್ನೊಬ್ಬ ಸಂಬಂಧಿ ರಾಮಚಂದ್ರ ದೊಡ್ಡಮನಿ ಮನೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗಿ ತಿಳಿದುಬಂದಿದೆ. ಶಾಸಕ ದೇವಾನಂದ ಜತೆ ರಾಜಕೀಯ ನಂಟಿಲ್ಲ ಎಂದು ದೊಡಮನಿ ಸ್ಪಷ್ಟಪಡಿಸಿದ್ದಾರೆ. ದಾಳಿ ವೇಳೆ 12 ಲಕ್ಷ ರೂ. ನಗದು ಸಿಕ್ಕಿರುವ ಮಾಹಿತಿ ಲಭ್ಯವಾಗಿದೆ. ವಾರದ ಹಿಂದೆಯೇ ಐಟಿ ಅಧಿಕಾರಿಗಳು ವಿಜಯಪುರದಲ್ಲಿರುವ ಮನೆಗೆ ಭೇಟಿ ನೀಡಿದ್ದರು. ಈಗ ದಾಳಿ ವೇಳೆ ಅಕ್ರಮ ಹಣ ಸಿಕ್ಕಿಲ್ಲ. ಎಲ್ಲವಕ್ಕೂ ದಾಖಲೆ ಇದೆ ಎಂದು ಶಾಸಕ ದೇವಾನಂದ ತಿಳಿಸಿದರು.

Leave a Reply

Your email address will not be published. Required fields are marked *