ದ.ಕ ಜಿಲ್ಲೆಗೆ 15 ಸಾವಿರ ಕೋಟಿ ರೂ. ಅನುದಾನ: ನಳಿನ್

ವಿಜಯವಾಣಿ ಸುದ್ದಿಜಾಲ ಮಂಗಳೂರು

ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ದ.ಕ ಜಿಲ್ಲೆಗೆ 15,000 ಕೋಟಿ ರೂ. ಅನುದಾನ ಬಂದಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.

ಕೊಡಿಯಾಲ್‌ಬೈಲ್‌ನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ದ.ಕ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದರು.
ಮುಂದಿನ ಲೋಕಸಭಾ ಚುನಾವಣೆ ಅಭಿವೃದ್ಧಿ, ಸಾಧನೆ ಆಧಾರದಲ್ಲಿ ನಡೆಯಲಿದೆ. ವಿಪಕ್ಷದ ಸುಳ್ಳಿನ ಸರಮಾಲೆ ಎದುರಿಸಲು ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಯೋಧನಂತೆ ಕಾರ್ಯಪ್ರವೃತ್ತನಾಗಬೇಕು ಎಂದರು.

ಸಭೆ ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಇಬ್ಬರು ಸ್ವಾರ್ಥಿಗಳು ಒಂದುಗೂಡಿದರೆ ರಾಜ್ಯವೇ ಭ್ರಷ್ಟವಾಗುತ್ತದೆ ಎಂಬುದಕ್ಕೆ ಕರ್ನಾಟಕ ಸರ್ಕಾರ ಉದಾಹಣೆ. ಯಾವುದೇ ಸಮಿತಿಗಳಿಗೆ ನೇಮಕ ಮಾಡುವ ಸಾಮರ್ಥ್ಯವೂ ಸರ್ಕಾರಕ್ಕೆ ಇಲ್ಲ. ರಾಜ್ಯದಲ್ಲಿ ಭ್ರಷ್ಟರ ಒಕ್ಕೂಟ ಆಡಳಿತ ನಡೆಸುತ್ತಿದ್ದು, ಇದರ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಜನಜಾಗೃತಿ ಮೂಡಿಸಲಿದೆ ಎಂದರು.

ವಿಭಾಗ ಸಹಪ್ರಭಾರಿ ಪ್ರತಾಪ್‌ಸಿಂಹ ನಾಯಕ್, ಚುನಾವಣಾ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ರೈ, ಸುದರ್ಶನ ಎಂ. ಉಪಸ್ಥಿತರಿದ್ದರು. ರವಿಶಂಕರ ಮಿಜಾರ್ ಸ್ವಾಗತಿಸಿದರು. ವಿಕಾಸ್ ಪುತ್ತೂರು ವಂದಿಸಿದರು. ಸತೀಶ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.