ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ 15 ಲಕ್ಷ ರೂ. ವಂಚನೆ

ಕೊಳ್ಳೇಗಾಲ: ಪೊಲೀಸ್ ಇನ್ಸ್‌ಪೆಕ್ಟರ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕನಿಂದ ಹಂತ ಹಂತವಾಗಿ 15 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಸಪ್ಪನದೊಡ್ಡಿ ಗ್ರಾಮದ ಮಹೇಶ್ ಎಂಬುವರ ಪುತ್ರ ಸುಮನ್ ಆರೋಪಿಯಾಗಿದ್ದು, ಅಲಗಪುರ ಗ್ರಾಮದ ದೇವಪ್ಪ ಅವರ ಪುತ್ರ ಶಿವಕುಮಾರ್ ವಂಚನೆಗೊಳಗಾದ ಯುವಕ.

ಸುಮನ್, ತಾನು ಬೆಂಗಳೂರಿನ ಕ್ರೈಂ ಬ್ರಾಂಚ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಶಿವಕುಮಾರ್‌ಗೆ ಪರಿಚಯ ಮಾಡಿಕೊಂಡು, ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ತನಗಿದೆ. ಹಂತ ಹಂತವಾಗಿ ಹಣ ನೀಡಿದಲ್ಲಿ ನಿನಗೆ ಪೊಲೀಸ್ ಇನ್ಸ್‌ಪೆಕ್ಟರ್ ನೇಮಕಾತಿಗೆ ಅವಕಾಶ ಮಾಡಿಕೊಡುತ್ತೇನೆ ಎಂದು ಶಿವಕುಮಾರ್‌ಗೆ ನಂಬಿಸಿದ್ದಾನೆ.

ಕೆಲ ತಿಂಗಳ ಬಳಿಕ ಶಿವಕುಮಾರ್ ಮನೆ ವಿಳಾಸಕ್ಕೆ ಸುಳ್ಳು ಪೊಲೀಸ್ ಇನ್ಸ್‌ಪೆಕ್ಟರ್ ನೇಮಕಾತಿ ಆದೇಶ ಪತ್ರವನ್ನು ಪೋಸ್ಟ್ ಮೂಲಕ ಕಳುಹಿಸಿದ ಸುಮನ್, ಹಂತ ಹಂತವಾಗಿ, ಪೊಲೀಸ್ ಇನ್ಸ್‌ಪೆಕ್ಟರ್ ಸಮವಸ್ತ್ರ, ಭುಜದ ಮೇಲೆ ಧರಿಸುವ ತ್ರಿಬ್ಬಲ್ ಸ್ಟಾರ್ ಪಟ್ಟಿ, ಪೊಲೀಸ್ ಬೆಲ್ಟ್, ಹ್ಯಾಟ್ ಹಾಗೂ ಶೂಗಳನ್ನು ಪೋಸ್ಟ್ ಮಾಡಿದ್ದಾನೆ ಹಾಗೂ ಆಗಿಂದಾಗ್ಗೆ ಒಟ್ಟು 15 ಲಕ್ಷ ರೂ. ವಸೂಲಿ ಮಾಡಿದ್ದಾನೆ.

ಶಿವಕುಮಾರ್ ನನಗೆ ಯಾವ ಪೊಲೀಸ್ ಠಾಣೆಗೆ ನೇಮಕ ಮಾಡಲಾಗಿದೆ ಎಂಬುದನ್ನು ವಿಚಾರಿಸಲು ಮುಂದಾಗುತ್ತಿದ್ದಂತೆ ಸುಮನ್ ಮಾತಿನ ಧಾಟಿ ಮತ್ತು ನಡೆ ಅನುಮಾನಕ್ಕೆ ಹೆಡೆ ಮಾಡಿಕೊಟ್ಟಿದ್ದು, 15 ಲಕ್ಷ ರೂ. ಹಿಂದಿರುಗಿಸುವಂತೆ ಶಿವಕುಮಾರ್ ಕೇಳಿಕೊಂಡಿದ್ದಾನೆ.

ಹಣ ನೀಡದ ಹಿನ್ನೆಲೆಯಲ್ಲಿ ಬಂಡಳ್ಳಿ ಕ್ಷೇತ್ರದ ಜಿ.ಪಂ.ಸದಸ್ಯೆ ಲೇಖಾ ಅವರ ಪತಿ ಶಾಗ್ಯ ರವಿ, ಅಲಗಪುರದ ದೇವಪ್ಪ, ಗುರುನಂಜಪ್ಪ, ಬಿಜೆಪಿ ಮುಖಂಡ ಬಸವರಾಜಪ್ಪ ಅವರೊಟ್ಟಿಗೆ ಆಗಮಿಸಿ ಎಎಸ್ಪಿ ಗೀತಾ ಪ್ರಸನ್ನ ಮತ್ತು ಡಿವೈಎಸ್ಪಿ ಪುಟ್ಟಮಾದಯ್ಯ ಅವರಿಗೆ ಮೌಖಿಕ ದೂರು ನೀಡಿ, ಕಾನೂನು ಕ್ರಮಕ್ಕೆ ಮನವಿ ಮಾಡಿದ್ದಾರೆ.

ಲಿಖಿತ ದೂರು ನೀಡಿ ಎಂದಿದ್ದೇನೆ: ಪೊಲೀಸ್ ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ ಸುಮನ್ ಎಂಬಾತ 15 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಅಲಗಪುರದ ಶಿವಕುಮಾರ್ ಮತ್ತು ಕುಟುಂಬದವರು ನನ್ನನ್ನು ಭೇಟಿ ಮಾಡಿ ಮೌಖಿಕ ದೂರು ನೀಡಿದ್ದಾರೆ. ಈ ಬಗ್ಗೆ ಲಿಖಿತ ದೂರು ನೀಡಿದ್ದಲ್ಲಿ ಪ್ರಕರಣದ ತನಿಖೆ ನಡೆಸಿ ಘಟನೆ ನಡೆದಿರುವ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಪುಟ್ಟಮಾದಯ್ಯ ಡಿವೈಎಸ್ಪಿ ಕೊಳ್ಳೇಗಾಲ ಉಪವಿಭಾಗ