ಬೆಂಗಳೂರು: ಸರ್ಕಾರದ ಐದು ಗ್ಯಾರಂಟಿ ಯೋಜನೆಯಲ್ಲಿ ಮೊದಲು ಆರಂಭವಾಗಿ ಅಡೆತಡೆ ಇಲ್ಲದೇ ನಿರಾತಂಕವಾಗಿ ಸಾಗಿರುವ ಶಕ್ತಿ ಯೋಜನೆ ಭರ್ತಿ ಎರಡು ವರ್ಷ ಪೂರ್ಣಗೊಳಿಸಿದೆ. ಈ ಯೋಜನೆ ಹಲವು ದಾಖಲೆಗಳನ್ನು ಮಾಡಿದ್ದು, ನಾಡಿನ ನಾರಿಯರಿಗೆ ಮಡಿಲಿಗೆ 11,900 ಕೋಟಿ ರೂ. ಹಾಕಿದೆ. ಅರ್ಥಾತ್, ಉಚಿತ ಪ್ರಯಾಣಕ್ಕೆ ಅವಕಾಶ ಮಾಡಕೊಡುವ ಮೂಲಕ ಅಷ್ಟು ಮೊತ್ತ ಮಹಿಳೆಯರಲ್ಲೇ ಉಳಿಯುವಂತೆ ಮಾಡಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಬುಧವಾರ ವಿಜಯವಾಣಿ ಕಚೇರಿಯಲ್ಲಿ ಸಂಪಾದಕೀಯ ಬಳಗದೊಂದಿಗೆ ನಡೆಸಿದ ಸಂವಾದದಲ್ಲಿ ಪಾಲ್ಗೊಂಡಿದ್ದರು. 2 ವರ್ಷದ ಅವಧಿಯಲ್ಲಿ 474.82 ಕೋಟಿ ಮಹಿಳೆಯರು ಪ್ರಯಾಣಿಸಿ ದ್ದಾರೆ. ಮಹಿಳೆಯರು ಉಚಿತ ಪ್ರಯಾಣ ಮಾಡಿರುವ ಟಿಕೆಟ್ ಮೌಲ್ಯ 11994.37 ಕೋಟಿ ರೂ. ಆಗಿದೆ. ಯೋಜನೆಯನ್ನು ಪರಿಷ್ಕರಣೆ ಮಾಡುವ, ಬದಲಾವಣೆ ಮಾಡುವ ಅಥವಾ ಇನ್ಯಾವುದೇ ಉದ್ದೇಶವೂ ಇಲ್ಲ. ಈಗ ಹೇಗಿದೆಯೋ ಹಾಗೆಯೇ ಮುಂದುವರಿಯಲಿದೆ. ಈ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು. ಶಕ್ತಿಯೋಜನೆಯಿಂದ ಸಾರಿಗೆ ನಿಗಮಗಳ ಸ್ಥಿತಿ ಚಿಂತಾಜನಕವಾಗುತ್ತಿದೆ ಎಂದು ಅಪವಾದದ ಬಗ್ಗೆಯೂ ಸಂವಾದದಲ್ಲಿ ಸ್ಪಷ್ಟನೆ ನೀಡಿದ ರಾಮಲಿಂಗಾ ರೆಡ್ಡಿ, ಮಹಾರಾಷ್ಟ್ರ, ಆಂಧ್ರ ಸೇರಿ ಯಾವುದೆ ಸಾರಿಗೆ ನಿಗಮಗಳಿಗೆ ಹೋಲಿಸಿದರೂ ನಮ್ಮ ಸಾರಿಗೆ ನಿಗಮ ಬೆಸ್ಟ್ ಎನ್ನುವಂತಿದೆ. ಸಣ್ಣ ಪ್ರಮಾಣದ ಸಾಲದ ಹೊರೆಯನ್ನು ನಿಭಾಯಿಸಿ ಕೊಳ್ಳುತ್ತಲೇ ಮತ್ತಷ್ಟು ಬಲವರ್ಧನೆಗೆ ಒತ್ತು ಕೊಡಲಾಗಿದೆ ಎಂದರು.
5800 ಹೊಸ ಬಸ್: ಕೆಎಸ್ಆರ್ಟಿಸಿಗೆ 1165, ಬಿಎಂಟಿಸಿ-1997, ವಾಯವ್ಯ ಸಾರಿಗೆ ನಿಗಮ-856, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 1033 ಬಸ್ಗಳು ಸೇರಿ ಒಟ್ಟು 5051 ಹೊಸ ಬಸ್ಗಳ ಸೇರ್ಪಡೆಗೆ ಅನುಮೋದನೆ ನೀಡಲಾಗಿದೆ. ಸಾರಿಗೆ ನಿಗಮಗಳನ್ನು ಬಲಿಷ್ಠ ಗೊಳಿಸಲು ಎಲ್ಲ ಕ್ರಮಕೈಗೊಳ್ಳಲಾಗಿದೆ ಎಂದು ರಾಮಲಿಂಗಾ ರೆಡ್ಡಿ ವಿವರಿಸಿದರು. 1752 ಹಳೆಯ ಬಸ್ಗಳ ಪುನಶ್ಚೇತನ ಕಾರ್ಯ ನಡೆದಿದೆ. ಬೆಂಗಳೂರು ನಗರದಲ್ಲಿ 70 ಮೆಟ್ರೋ ಫೀಡರ್ ಮಾರ್ಗಗಳಲ್ಲಿ 212 ಅನುಸೂಚಿಗಳ ಕಾರ್ಯಾ ಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
10 ಸಾವಿರ ಹುದ್ದೆಗಳ ನೇಮಕ: ನಾಲ್ಕು ನಿಗಮಗಳಲ್ಲಿ ಒಟ್ಟು 10 ಸಾವಿರ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ. ಇದರಲ್ಲಿ 4700 ಹೊಸ ನೇಮಕಾತಿ, 1 ಸಾವಿರ ಅನುಕಂಪದ ನೇಮಕಾತಿ ಪೂರ್ಣಗೊಂಡಿದೆ. ಉಳಿದ 4300 ನೇಮಕ ಪ್ರಕ್ರಿಯೆ ತಿಂಗಳೊಳಗೆ ಪೂರ್ಣವಾಗಲಿದ್ದು, ಒಟ್ಟು 10 ಸಾವಿರ ನೇಮಕಾತಿ ಮಾಡಿದಂತಾಗಲಿದೆ. ಇದನ್ನು ಹೊರತುಪಡಿಸಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚುವರಿಯಾಗಿ ಒಂದು ಸಾವಿರ ಹುದ್ದೆ ಭರ್ತಿಗೂ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರು. ಚಾಲಕ ಕಂ ನಿರ್ವಾಹಕ ನೇಮಕಾತಿ ಪ್ರಕ್ರಿಯೆಯಲ್ಲಿ ಕೆಎಸ್ಆರ್ಟಿಸಿಯಲ್ಲಿ 2 ಸಾವಿರ, ವಾಯವ್ಯ ಸಾರಿಗೆ ನಿಗಮದಲ್ಲಿ 1 ಸಾವಿರ ಜನರು ಸಂಭವನೀಯ ಆಯ್ಕೆ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ ಎಂದು ಹೇಳಿದರು.
350 ಆಸ್ಪತ್ರೆಗಳಲ್ಲಿ ಚಿಕಿತ್ಸೆ
ಸಾರಿಗೆ ಸಿಬ್ಬಂದಿ ಹಾಗೂ ಅವರ ಕುಟುಂಬದವರ ಆರೋಗ್ಯಕ್ಕೆ ಜಾರಿ ಮಾಡಿದ ಯೋಜನೆಯಿಂದ ಈ ತನಕ 350ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಮತ್ತು ಅವರ ಅವಲಂಬಿತರು ಚಿಕಿತ್ಸೆ ಪಡೆದಿದ್ದು, 81,639 ಕ್ಲೇಮ್ಳಾಗಿವೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಜತೆಗೂ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹುಬ್ಬಳ್ಳಿಯ ಕಿಮ್ಸ್ನಲ್ಲಿ ನಗದು ರಹಿತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಬಾಕಿ ಪಾವತಿಗೆ ನಿರ್ಧಾರ
ಸಾರಿಗೆ ನಿಗಮದ ಸಿಬ್ಬಂದಿಗೆ ವೇತನ ಪರಿಷ್ಕರಿಸಿದರೂ ಬಾಕಿ ಪಾವತಿ ಆಗಿಲ್ಲ. ಅದನ್ನು ಪಾವತಿಸುವ ಸಂಬಂಧ ಜೂ. 14ರಂದು ಸಿಎಂ ಜತೆ ಸಭೆ ನಡೆಸಲಾಗುತ್ತಿದೆ. ಜತೆಗೆ ಮುಂದಿನ ವೇತನ ಪರಿಷ್ಕರಣೆ ಸಂಬಂಧವೂ ಚರ್ಚೆಯಾಗಲಿದೆ ಎಂದು ವಿವರಿಸಿದರು.
ಈ 3 ರಾಶಿಯ ಮಹಿಳೆಯರು ಸಹೋದರರಿಗೆ ತಕ್ಕ ಸಹೋದರಿಯರಾಗಿರುತ್ತಾರಂತೆ! ನಿಮ್ಮ ರಾಶಿ ಯಾವುದು? Zodiac Signs