ಅಳುಪೋತ್ಸವಕ್ಕೆ 1 ಕೋಟಿ ಅನುದಾನ

ಉಡುಪಿ: ಬಾರಕೂರಿನಲ್ಲಿ ಜ.25ರಿಂದ 27ರವರೆಗೆ ಅಳುಪೋತ್ಸವ ನಡೆಯಲಿದ್ದು, ಕಾರ‌್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ 1 ಕೋಟಿ ರೂ. ಹಾಗೂ ತೋಟಗಾರಿಕಾ ಇಲಾಖೆಯಿಂದ 25 ಲಕ್ಷ ರೂ. ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅನುದಾನ ಬಿಡುಗಡೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ತೋಟಗಾರಿಕಾ ಸಚಿವ ಮನಗೂಳಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಬಾರ್ಕೂರು ಸಂಸ್ಥಾನದ ಸಂತೋಷ್ ಗುರೂಜಿ ಮತ್ತಿತರರು ಇದ್ದರು.

ಬಾರಕೂರಿನಲ್ಲಿ ಜಾನಪದ ಜಾತ್ರೆ: ಅಳುಪೋತ್ಸವ ನಿಮಿತ್ತ 3 ದಿನಗಳ ಕಾಲ ಬಾರಕೂರಿನಲ್ಲಿ ಜಾನಪದ ಜಾತ್ರೆ, ಕೌಶಲ ಮೇಳ, ಫಲಪುಷ್ಪ ಪ್ರದರ್ಶನ, ಸಿರಿ ಜಾತ್ರೆ, ಸಾವಯವ ಜಾತ್ರೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಅಳುಪರಿಗೆ ಸಂಬಂಧಿಸಿದ ವಿಚಾರ ಸಂಕಿರಣ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು. ಖ್ಯಾತ ಚಿತ್ರಕಲಾವಿದರ ನೇತೃತ್ವದಲ್ಲಿ ಬಾರಕೂರಿನ ಇತಿಹಾಸದ ಚಿತ್ರ ಬಿಡಿಸಲಾಗುವುದು. ಅಂಚೆ ಇಲಾಖೆಯಿಂದ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವೆ ಜಯಮಾಲ ತಿಳಿಸಿದರು.