ಸರ್ಕಾರಕ್ಕೆ ಡಬಲ್ ಬಿಲ್ ಹಗರಣದ ವರದಿ

ಮೈಸೂರು: ನಗರ ಪಾಲಿಕೆಯಲ್ಲಿ ಒಂದೇ ಕಾಮಗಾರಿಗೆ ಎರಡು ಬಿಲ್ ಸೃಷ್ಟಿಸಿದ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಗರ ಪಾಲಿಕೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಹಗರಣದಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಇತ್ತೀಚೆಗೆ ನಡೆದ ಪಾಲಿಕೆ ವಿಶೇಷ ಕೌನ್ಸಿಲ್ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ತೀರ್ಮಾನದ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಾಲಿಕೆ ಸರ್ಕಾರಕ್ಕೆ ವರದಿ ಕಳುಹಿಸಿದೆ.

ವರದಿಯಲ್ಲೇನಿದೆ?: ಹಗರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುನಿಲ್ ಬಾಬು, ಕಿರಿಯ ಇಂಜಿನಿಯರ್ ಮೋಹನ ಕುಮಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಹಗರಣದ ಕುರಿತು ಮೂರನೇ ವ್ಯಕ್ತಿಯಾಗಿ ತನಿಖೆ ನಡೆಸಿದ ಕ್ಯಾಡ್ ಸಂಸ್ಥೆಯು ಹಗರಣ ನಡೆದೇ ಇಲ್ಲ ಎಂಬ ರೀತಿಯಲ್ಲಿ ವರದಿ ನೀಡಿರುವುದು ಸಂಶಯಕ್ಕೆ ಎಡೆಮಾಡಿರುವ ಹಿನ್ನೆಲೆಯಲ್ಲಿ ಕ್ಯಾಡ್ ಸಂಸ್ಥೆ ಹಾಗೂ ಗುತ್ತಿಗೆದಾರ ಕರಿಗೌಡರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಪಾಲಿಕೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಿದೆ.

1.40 ಕೋಟಿ ರೂ. ಹಗರಣ: ನಗರದ ಆರ್‌ಟಿಒ ಕಚೇರಿಯಿಂದ ಸಿದ್ದಪ್ಪ ವೃತ್ತದ ಕಡೆಗೆ ತೆರಳುವ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಫುಟ್‌ಪಾತ್ ಕಾಮಗಾರಿಗೆ ಡಬಲ್ ಬಿಲ್ ಸೃಷ್ಟಿಸಿ ಒಟ್ಟು 1.40 ಕೋಟಿ ರೂ. ಅವ್ಯವಹಾರ ನಡೆಸಿರುವುದು ಪಾಲಿಕೆ ರಚಿಸಿದ ಸತ್ಯಶೋಧನಾ ಸಮಿತಿ ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದ್ದು, ಈ ವರದಿಯ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಕಳೆದ ಸಾಲಿನಲ್ಲಿ ಈ ಅವ್ಯವಹಾರ ನಡೆದಿದ್ದು, ಕಳೆದ ಎರಡು ಅವಧಿಗಳಿಂದ ಪಾಲಿಕೆ ಸದಸ್ಯರಾಗಿರುವ ಪ್ರತಿಪಕ್ಷ ನಾಯಕ ಬಿ.ವಿ. ಮಂಜುನಾಥ್ ಹಗರಣವನ್ನು ಬಯಲಿಗೆಳೆದು ಆರೋಪಿಗಳ ವಿರುದ್ಧ ಕ್ರಮಕ್ಕೆ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಒತ್ತಾಯಿಸಿದ್ದರು. ಮಂಜುನಾಥ್ ಅವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್ ಸತ್ಯಶೋಧನಾ ಸಮಿತಿ ರಚಿಸಿದ್ದರು.

ರಾತ್ರೋರಾತ್ರಿ ಕಾಮಗಾರಿ: ಸತ್ಯಶೋಧನಾ ಸಮಿತಿ ತನಿಖೆ ಚುರುಕುಗೊಳಿಸುತ್ತಿದ್ದಂತೆಯೇ ಗುತ್ತಿಗೆದಾರ ಕರಿಗೌಡ ರಾತ್ರೋರಾತ್ರಿ ಫುಟ್‌ಪಾತ್ ಕಾಮಗಾರಿಯನ್ನು ಕೈಗೊಳ್ಳಲು ಮುಂದಾಗಿದ್ದರು. ಈ ವಿಚಾರ ತಿಳಿದ ನಗರ ಪಾಲಿಕೆ ಅಧಿಕಾರಿಗಳು ಕಾಮಗಾರಿಗೆ ಬಳಕೆ ಮಾಡಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು.

Leave a Reply

Your email address will not be published. Required fields are marked *