ಮಹಾರಾಷ್ಟ್ರದಲ್ಲಿ 2 ಸೀಟುಗಳಿಗೆ ಬೇಡಿಕೆ ಇಟ್ಟ ಬಿಜೆಪಿ ಮಿತ್ರ ಪಕ್ಷ ಆರ್​​ಪಿಐ

ಮುಂಬೈ: ಲೋಕಸಭೆ ಚುನಾವಣೆಗಾಗಿ ಮಹಾರಾಷ್ಟ್ರದಲ್ಲಿ ಮೈತ್ರಿಕೂಟ ರಚನೆ ಮಾಡಿಕೊಳ್ಳುವ ಸಂದರ್ಭದಲ್ಲಿ ಮಿತ್ರ ಪಕ್ಷ ರಿಪಬ್ಲಿಕನ್​ ಪಾರ್ಟಿ ಆಫ್​ ಇಂಡಿಯಾ (ಆರ್​ಪಿಐ) ಅನ್ನು ಕಡೆಗಣಿಸಿದ್ದಕ್ಕಾಗಿ ಪಕ್ಷದ ಅಧ್ಯಕ್ಷ, ಕೇಂದ್ರ ಸಚಿವ ರಾಮದಾಸ್​ ಅಟವಾಲೆ ಬಿಜೆಪಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು ಸಚಿವ ರಾಮದಾಸ್​ ಅಟವಾಲೆ, “ನಾವು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೇವೆ. ಶಿವಸೇನೆಯ ಪ್ರತಿನಿಧಿ ಇರುವ ಮುಂಬೈ ದಕ್ಷಿಣ-ಕೇಂದ್ರ ಲೋಕಸಭೆ ಕ್ಷೇತ್ರ ನಮಗೆ ಬೇಕು. ಜತೆಗೆ, ಈಗ ಬಿಜೆಪಿಯ ಪ್ರತಿನಿಧಿ ಇರುವ ಮುಂಬೈ ಈಶಾನ್ಯ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.

“ನಾವು ಎನ್​ಡಿಎ ಜತೆಗೇ ಇರುತ್ತೇವೆ. ಆದರೆ, ನಮ್ಮದು ಕೆಲ ಬೇಡಿಕೆಗಳಿವೆ. ನಮ್ಮನ್ನು ಚುನಾವಣಾ ಮೈತ್ರಿಗೆ ಸೇರಿಸಿಕೊಳ್ಳಬೇಕು. ಶಿವಸೇನೆ ಮತ್ತು ಬಿಜೆಪಿ ಕೈಲಿರುವ ತಲಾ ಒಂದೊಂದು ಸ್ಥಾನಗಳನ್ನು ನಮಗೆ ಕೊಡಬೇಕು,” ಎಂದು ಅವರು ಹೇಳಿದ್ದಾರೆ.

ಇದೇ ವಿಚಾರವಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್​ ಅವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇನೆ ಎಂದೂ ಅಟವಾಲೆ ಹೇಳಿದ್ದಾರೆ.

ರಾಮ್​ದಾಸ್​ ಅಟವಾಲೆ ರಾಜ್ಯಸಭಾ ಸದಸ್ಯರಾಗಿದ್ದು, ಮೋದಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾರೆ.