ರಾಯಲ್ ಗಗನ್​ದೀಪ್

ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಅಸಾಧಾರಣ ಕೊಡುಗೆಗಳನ್ನು ಆಧರಿಸಿ ಭಾರತದ ಆರು ವಿಜ್ಞಾನಿಗಳಿಗೆ ಲಂಡನ್​ನ ರಾಯಲ್ ಸೊಸೈಟಿ ಫೆಲೋಷಿಪ್ ನೀಡಿ ಗೌರವಿಸಿದೆ. ವಿಶ್ವಾದ್ಯಂತದ 62 ವಿಜ್ಞಾನಿಗಳು ಈ ಫೆಲೋಷಿಪ್ ಪಡೆದುಕೊಂಡಿದ್ದು, ಭಾರತದ ಪಾಲಿಗೆ ಈ ವರ್ಷದ ಫೆಲೋಷಿಪ್ ಹೆಚ್ಚು ಮಹತ್ವದ್ದು. ರಾಯಲ್ ಸೊಸೈಟಿಯ 360 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಭಾರತೀಯ ಮಹಿಳಾ ವಿಜ್ಞಾನಿಯೊಬ್ಬರಿಗೆ ಈ ಗೌರವ ಸಂದಿದೆ.

ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಎನ್ನುವುದು ಜಾಗತಿಕ ಅಭಿಪ್ರಾಯ. ಹೀಗಾಗಿ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಗಳಾಗಲಿ, ಫೆಲೋಷಿಪ್​ಗಳಾಗಲಿ ಮಹಿಳೆಯರಿಗೆ ಸಲ್ಲುವುದು ವಿರಳ. ಇಂಥ ವಿರಳ ಸಾಧನೆ ಮಾಡಿದ್ದಾರೆ ಭಾರತದ ವಿಜ್ಞಾನಿ ಗಗನ್​ದೀಪ್ ಕಾಂಗ್. ಲಂಡನ್​ನ ರಾಯಲ್ ಸೊಸೈಟಿಯ ಫೆಲೋಷಿಪ್ ಪಡೆದುಕೊಂಡಿರುವ ದೇಶದ ಪ್ರಥಮ ಮಹಿಳೆ ಎನ್ನುವ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಪ್ರಭಾವಿ ಮಹಿಳೆ: ಕಾಂಗ್ ಫರೀದಾಬಾದ್​ನ ಟ್ರಾನ್ಸ್ ಲೇಷನಲ್ ಹೆಲ್ತ್ ಸೈನ್ಸ್ ಆಂಡ್ ಟೆಕ್ನಾಲಜಿ ಇನ್​ಸ್ಟಿಟ್ಯೂಟ್(ಟಿಎಚ್​ಎಸ್​ಟಿಐ)ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದಾರೆ. ಇದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆ. ಮಕ್ಕಳಲ್ಲಿ ವೈರಲ್ ಸೋಂಕುಗಳು ಮತ್ತು ರೋಟಾವೈರಲ್ ಲಸಿಕೆಗಳ ಬಗ್ಗೆ ಕಾಂಗ್ ಹಲವು ಅಧ್ಯಯನಗಳಲ್ಲಿ ತೊಡಗಿಸಿಕೊಂಡಿದ್ದಾರೆ. 300 ವೈಜ್ಞಾನಿಕ ಸಂಶೋಧನಾ ಪ್ರಬಂಧಗಳು, ಹಲವು ಪತ್ರಿಕೆಗಳ ಸಂಪಾದಕೀಯ ಮಂಡಳಿ, ಲಸಿಕೆಗಳಿಗೆ ಸಂಬಂಧಿಸಿದ ಸಲಹಾ ಮಂಡಳಿಗಳ ಸದಸ್ಯೆಯಾಗಿರುವ ಇವರು, 2015ರಿಂದ ವಿಶ್ವ ಆರೋಗ್ಯ ಸಂಸ್ಥೆಯ ಎಸ್​ಇಎಆರ್​ನ ಪ್ರಾದೇಶಿಕ ರೋಗ ಪ್ರತಿರೋಧಕ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷೆಯಾಗಿದ್ದಾರೆ. ಇದರ ಮೂಲಕ ರಾಷ್ಟ್ರೀಯ ಟೈಫಾಯಿಡ್ ಜ್ವರಕ್ಕೆ ಸಂಬಂಧಿಸಿ ಕಣ್ಗಾವಲು ಜಾಲ ವ್ಯವಸ್ಥೆಯನ್ನು ರೂಪಿಸಿದ್ದಾರೆ.

2016ರಲ್ಲಿ ಪ್ರತಿಷ್ಠಿತ ಇನ್ಪೋಸಿಸ್ ಸೈನ್ಸ್ ಫೌಂಡೇಷನ್​ನ ಜೀವವಿಜ್ಞಾನ ಕ್ಷೇತ್ರದ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ರೋಟಾವೈರಸ್​ಗಳ ನೈಸರ್ಗಿಕ ಇತಿಹಾಸ ಮತ್ತು ಇತರ ಸೋಂಕುಗಳ ಬಗೆಗಿನ ಇವರ ಅಧ್ಯಯನಗಳನ್ನು ಆಧರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಮಹಿಳೆಯರಿಗೆ ಪ್ರೋತ್ಸಾಹ ಬೇಕು: ಕಾಂಗ್ ಪ್ರಕಾರ, ಮಹಿಳೆಯರಿಗೆ ವಿಜ್ಞಾನ ಕ್ಷೇತ್ರದಲ್ಲಿ ಪ್ರೋತ್ಸಾಹ ಅಗತ್ಯ. ವಿಜ್ಞಾನಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈಗಲೂ ಸಾಧ್ಯವಾಗುತ್ತಿಲ್ಲ. ಆದರೆ ಎಲ್ಲ ಸಮಸ್ಯೆಗೂ ಪರಿಹಾರವಿದೆ. ಹೀಗಾಗಿ, ಅಪಾರ ಅವಕಾಶಗಳಿರುವ ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಹೇಳುತ್ತಾರೆ. ಇವರ ಪ್ರಕಾರ, ಮಹಿಳೆಯರು ಈ ಕ್ಷೇತ್ರಕ್ಕೆ ಬಾರದಿರಲು ಪ್ರಮುಖವಾಗಿ ಮೂರು ಕಾರಣಗಳಿವೆ. ಅವು, ವೃತ್ತಿಯ ಸ್ವರೂಪ, ಮನೆಯನ್ನು ನಿಭಾಯಿಸುವುದು ಮತ್ತು ಲ್ಯಾಬೋರೇಟರಿಗಳಲ್ಲಿ ಹೆಚ್ಚಿನ ಅವಧಿ ಕೆಲಸ ಮಾಡಬೇಕಾಗಿರುವುದು. ಆದರೆ, ಮನೆಯಲ್ಲಿ ಸೂಕ್ತ ಪ್ರೋತ್ಸಾಹ ಸಿಕ್ಕಿದ್ದಲ್ಲಿ ಎಲ್ಲವೂ ಸಾಧ್ಯ ಎಂದು ಅಭಿಪ್ರಾಯಪಡುತ್ತಾರೆ.

360 ವರ್ಷಗಳ ಇತಿಹಾಸ: 1660ರ ನವೆಂಬರ್ 28ರಂದು ಸ್ಥಾಪಿಸಲಾದ ಕೌನ್ಸಿಲ್ ಆಂಡ್ ಫೆಲೋಸ್ ಆಫ್ ದಿ ರಾಯಲ್ ಸೊಸೈಟಿ ಆಫ್ ಲಂಡನ್ ಫಾರ್ ಇಂಪ್ರೂವಿಂಗ್ ನ್ಯಾಚುರಲ್ ನಾಲೆಡ್ಜ್​ನ್ನು ರಾಯಲ್ ಸೊಸೈಟಿ ಎಂದು ಕರೆಯುತ್ತಾರೆ. 17ನೇ ಶತಮಾನದಿಂದಲೂ ಅಸ್ತಿತ್ವದಲ್ಲಿರುವ ಈ ಸೊಸೈಟಿ ವಿಜ್ಞಾನ ಕ್ಷೇತ್ರದ ಪುರಾತನ ಅಕಾಡೆಮಿ ಎಂದು ಗುರುತಿಸಿಕೊಂಡಿದೆ. ನೊಬೆಲ್ ಪ್ರಶಸ್ತಿ ವಿಜೇತ ವೆಂಕಿ ರಾಮಕೃಷ್ಣನ್ ಈಗ ಇದರ ಅಧ್ಯಕ್ಷರಾಗಿದ್ದಾರೆ. ಇವರು ತಮಿಳುನಾಡು ಮೂಲದವರು ಎನ್ನುವುದು ವಿಶೇಷ. 1841ರಲ್ಲಿ ಭಾರತೀಯ ಶಿಪ್​ಬಿಲ್ಡರ್ ಮತ್ತು ಇಂಜಿನಿಯರ್ ಅರ್ದಾಸಿರ್ ಕರ್ಸೆಟ್ಜಿ ವಾಡಿಯಾ (ವಾಡಿಯಾ ಷಿಪ್​ಬಿಲ್ಡಿಂಗ್ ಕುಟುಂಬ)ರನ್ನು ರಾಯಲ್ ಸೊಸೈಟಿ ಫೆಲೋ ಆಗಿ ಆಯ್ಕೆ ಮಾಡಿದ್ದರು. ಇವರು ಇದಕ್ಕೆ ಆಯ್ಕೆಯಾದ ಮೊದಲ ಭಾರತೀಯರು. ಆ ನಂತರದಲ್ಲಿ 1918ರಲ್ಲಿ ಶ್ರೀನಿವಾಸ ರಾಮಾನುಜಂ ಮತ್ತು 1944ರಲ್ಲಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರಿಗೆ ಫೆಲೋಷಿಪ್ ನೀಡಿತ್ತು.

ಇತರ ಭಾರತೀಯರು

ಗಗನ್​ದೀಪ್ ಕಾಂಗ್ ಅವರೊಂದಿಗೆ ಇತರ ಆರು ವಿಜ್ಞಾನಿಗಳಿಗೆ ಈ ಬಾರಿಯ ಫೆಲೋಷಿಪ್ ದೊರೆತಿದೆ. ಬರ್ವಿುಂಗ್​ಹ್ಯಾಮ್ ವಿವಿಯಲ್ಲಿ ರಸಾಯನಶಾಸ್ತ್ರ, ಸೂಕ್ಷ್ಮಜೀವಿ ಶರೀರಶಾಸ್ತ್ರದ ಪ್ರಾಧ್ಯಾಪಕರಾಗಿರುವ ಭಾರತ ಸಂಜಾತ ಗುರ್ಡಿಯಲ್ ಬೆಸ್ರಾ, ಆಕ್ಸ್​ಫರ್ಡ್ ವಿವಿ ಶರೀರಶಾಸ್ತ್ರ ಪ್ರಾಧ್ಯಾಪಕ ಅನಂತ್ ಪಾರೆಕ್, ಅಮೆರಿಕದ ಇನ್​ಸ್ಟಿಟ್ಯೂಟ್ ಆಫ್ ಅಡ್ವಾನ್ಸ್್ಡ ಸ್ಟಡೀಸ್​ನ ಗಣಿತಶಾಸ್ತ್ರ ಪ್ರಾಧ್ಯಾಪಕ ಅಕ್ಷಯ್ ವೆಂಕಟೇಶ್, ಸಿಪ್ಲಾ ಸಂಸ್ಥೆಯ ಅಧ್ಯಕ್ಷ, ಸಂಸ್ಥಾಪಕ ಡಾ. ವೈ.ಕೆ. ಹಮೀದ್, ಕೊಲರಾಡೋ ಸ್ಟೇಟ್ ವಿವಿ ಪ್ರಾಧ್ಯಾಪಕ ಪ್ರೊ. ಎ.ಆರ್. ರವಿಶಂಕರ್, ಪ್ರಿನ್ಸ್​ಟನ್ ವಿವಿಯ ಪ್ರೊ.ಮಂಜುಲ್ ಭಾರ್ಗವ ಫೆಲೋಷಿಪ್ ಪಡೆದ ಇತರ ಭಾರತೀಯರಾಗಿದ್ದಾರೆ.

| ಅಕ್ಷತಾ ಮುಂಡಾಜೆ

Leave a Reply

Your email address will not be published. Required fields are marked *