ಚಿತ್ರ: ‘ರಾಯಲ್’
ನಿರ್ದೇಶಕ: ದಿನಕರ್ ತೂಗುದೀಪ
ನಿರ್ಮಾಣ: ಜಯಣ್ಣ- ಭೋಗೇಂದ್ರ
ತಾರಾಗಣ: ವಿರಾಟ್, ಸಂಜನಾ ಆನಂದ್, ಅಚ್ಯುತ್ ಕುಮಾರ್, ಛಾಯಾ ಸಿಂಗ್, ರಘು ಮುಖರ್ಜಿ, ರಂಗಾಯಣ ರಘು
ಶಿವ ಸ್ಥಾವರಮಠ
‘ನಮ್ಮ ಕನಸಿನ ತೂಕ ನಮ್ಮ ಜೇಬಿನಲ್ಲಿರೋ ದುಡ್ಡಿನಷ್ಟೇ ಇರಬೇಕು. ಇಲ್ಲ ಅಂದ್ರೆ ನಿರಾಶೆಯಾಗುತ್ತೆ’ ಎಂದು ಮಗನಿಗೆ ಉಪದೇಶಿಸುತ್ತಾಳೆ ತಾಯಿ ಸೀತಾ (ಛಾಯಾ ಸಿಂಗ್). ಕನಸುಗಳನ್ನು ಈಡೇರಿಸಿಕೊಳ್ಳಬೇಕಾದರೆ ನೈತಿಕತೆ ಮುಖ್ಯ. ಆಗ ನಾವು ಯಶಸ್ಸಿನ ಗೋಪುರ ಕಟ್ಟಬಹುದು. ಇಲ್ಲವಾದರೆ, ಕಟ್ಟಿದ ಗೋಪುರ ಯಾವಾಗ ಬೇಕಾದರೂ ಕುಸಿಯಬಹುದು ಎಂಬ ವಿಚಾರವನ್ನು ನಿರ್ದೇಶಕ ದಿನಕರ್ ತೂಗುದೀಪ ‘ರಾಯಲ್’ಆಗಿ ನಿರೂಪಿಸಿದ್ದಾರೆ.
ಆತ ಕೃಷ್ಣ (ವಿರಾಟ್). ಲಾಯಲ್ ಆಗಿರದಿದ್ದರೂ, ರಾಯಲ್‌ಆಗಿ ಬದುಕಬೇಕು ಎಂದು ನಂಬಿದವನು. ಗೋವಾದಲ್ಲಿ ಪಾರ್ಟಿಗೆಂದು ಬಂದ ಸಂಜನಾ (ಸಂಜನಾ ಆನಂದ್) ಈತನಿಗೆ ಎದುರಾಗುತ್ತಾಳೆ. ಈಕೆಯ ಗುಂಪಿಗೆ ಕೃಷ್ಣ ಯಾಮಾರಿಸುತ್ತಾನೆ. ಆದರೂ, ಹೇಗೋ ಆತನ ಮೇಲೆ ಸಂಜನಾಗೆ ವಿಶ್ವಾಸ ಮೂಡಿ ಪ್ರೀತಿ ಹುಟ್ಟುತ್ತದೆ. ಆದರೆ, ಆ ವಿಶ್ವಾಸ ಪಡೆಯುವ ಕೃಷ್ಣ ಆಕೆಯನ್ನು ವಂಚಿಸುತ್ತಾನೆ. ಆಕೆ, ಕೃಷ್ಣನಿಂದ ದೂರವಾಗುತ್ತಾಳೆ. ಮತ್ತೆ ಸಂಜನಾ, ಆತನನ್ನು ಭೇಟಿ ಮಾಡುವುದು, ನೂರಾರು ಕೋಟಿ ಒಡೆಯನಾಗಿದ್ದಾಗ. ಹೌದಾ, ಯಾಮಾರಿಸಿ ಜೀವನ ನಡೆಸುತ್ತಿದ್ದ ಕೃಷ್ಣ ಆದ್ಹೇಗೆ ನೂರಾರು ಕೋಟಿ ಒಡೆಯನಾದ? ಆತನ ಹಿಂದಿನ ಕಥೆಯೇನು? ಎಂಬುದನ್ನು ತಿಳಿಯಬೇಕಾದರೆ ‘ರಾಯಲ್‘ ಸಿನಿಮಾ ನೋಡಲೇಬೇಕು.
ದಿನಕರ್ ತೂಗುದೀಪ ಕಥೆಗಳಲ್ಲಿ ಲವ್, ಎಮೋಷನ್ಸ್, ತಂದೆ-ತಾಯಿ ಪ್ರೀತಿ ಹಾಗೂ ಬದುಕಿನ ಹೋರಾಟ ಸಾಮಾನ್ಯ. ಅಂತೆಯೇ ಇಲ್ಲಿ ಕೂಡ ಈ ಎಲ್ಲ ಅಂಶಗಳಿವೆ. ‘ರಾಯಲ್’ ಮೂಲಕ ಅವರು ಬದುಕಿನ ಅನ್ವೇಷಣೆ ಮಾಡಿದಂತಿದೆ. ಇನ್ನು, ಕಥೆಗೆ ಬೇಕಾದ ಎಲ್ಲ ಅಂಶಗಳನ್ನು ಸರಿಯಾಗಿ ಜೋಡಿಸಿರುವುದರಿಂದ ಸಿನಿಮಾ ನೋಡಿಸಿಕೊಳ್ಳುತ್ತದೆ. ಮೊದಲರ್ಧ ಕೇವಲ ಹೀರೋ ಹಾಗೂ ಹೀರೋಯಿನ್ ಮಧ್ಯೆ ಸಾಗಿದರೆ, ದ್ವಿತೀಯಾರ್ಧದಲ್ಲಿ ನೈಜ ಕಥೆ ಅನಾವರಣವಾಗುತ್ತದೆ. ಕಥೆಯಲ್ಲಿ ಒಂದಿಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ.
ಆರು ವರ್ಷಗಳ ಬಳಿಕ ಕಾಣಿಸಿಕೊಂಡಿರುವ ವಿರಾಟ್ ಸಿಕ್ಸರ್ ಬಾರಿಸಿದ್ದಾರೆ. ಆ್ಯಕ್ಷನ್, ಡೈಲಾಗ್ ಹಾಗೂ ಡಾನ್ಸ್ ಮೂಲಕ ಮಿಂಚಿದ್ದು, ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಸಂಜನಾ ಆನಂದ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ರಘು ಮುಖರ್ಜಿ ವಿಲನ್ ಪಾತ್ರದಲ್ಲಿ ಗಮನಸೆಳೆಯುತ್ತಾರೆ. ಅಚ್ಯುತ್ ಕುಮಾರ್, ಛಾಯಾ ಸಿಂಗ್ ಸೇರಿ ಎಲ್ಲ ಪಾತ್ರಗಳು ರ್ಪೆಕ್ಟ್ ಆಗಿ ಮೂಡಿಬಂದಿವೆ. ಇನ್ನು, ಚರಣ್ ರಾಜ್ ಸಂಗೀತದಲ್ಲಿ ‘ಲೈಲಾ ಓ ಲೈಲಾ’ ಹೆಜ್ಜೆ ಹಾಕಿಸದೆ ಬಿಡದು. ರಘು ನಿಡುವಳ್ಳಿ ಸಂಭಾಷಣೆ ಇಷ್ಟವಾಗುತ್ತದೆ.