ರೌಡಿಶೀಟರ್‌ ಬರ್ಬರ ಹತ್ಯೆ, ಸುಫಾರಿ ಕಿಲ್ಲರ್‌ ಮೇಲೆ ಪೊಲೀಸರ ಫೈರಿಂಗ್‌

ಬೆಂಗಳೂರು: ಹೊರಮಾವಿನ ಇಂಡಸ್​ಇಂಡ್​ ಬ್ಯಾಂಕ್ ಎಟಿಎಂ ಬಳಿ ರೌಡಿಶೀಟರ್‌ ಒಬ್ಬನನ್ನು ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕಾರಿನಲ್ಲಿ ಬಂದಿದ್ದ ಐದಾರು ಮುಸುಕುಧಾರಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್​ ಪ್ರಶಾಂತ್​ ಎಂಬಾತನನ್ನು ಹತ್ಯೆ ಮಾಡಿದ್ದಾರೆ.

ಹಳೆ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ. ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿದ ಬಳಿಕ ದುಷ್ಕರ್ಮಿಗಳು ಪ್ರಶಾಂತ್​ನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಅಂಬೇಡ್ಕರ ಆಸ್ಪತ್ರೆಗೆ ರವಾನಿಸಲಾಗಿದೆ.
ಮತ್ತೆ ಪೊಲೀಸರ ಗುಂಡಿನ ಸದ್ದು

ದಕ್ಷಿಣ ಭಾರತದ ಕುಖ್ಯಾತ ಸುಪಾರಿ ಕಿಲ್ಲರ್ ಮೇಲೆ ಪೊಲೀಸರು ತಡರಾತ್ರಿ ಫೈರಿಂಗ್‌ ಮಾಡಿದ್ದಾರೆ. ಸುಪಾರಿ ಕಿಲ್ಲರ್​ ಹಾಗೂ ಕೊತ್ತನೂರು ಠಾಣೆಯ ರೌಡಿಶೀಟರ್​ ದಿನೇಶ್​ ಹೆಣ್ಣೂರು ರೈಲ್ವೆ ನಿಲ್ದಾಣದ ಬಳಿ ಇರುವ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ಅಲ್ಲಿಗೆ ತೆರಳಿದ್ದರು. ಆತನನ್ನು ಸುತ್ತುವರಿದು, ಶರಣಾಗುವಂತೆ ಸೂಚಿಸಿದರು. ಆದರೆ ಆತ ಭಾಣಸವಾಡಿ ಠಾಣೆಯ ಅಪರಾಧ ವಿಭಾಗದ ಮುಖ್ಯಪೇದೆ ಧರ್ಮ ಎಂಬುವರ ಮೇಲೆ ಚೂರಿಯಿಂದ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದ. ಅವರ ರಕ್ಷಣೆ ಜತೆ ಆತ್ಮರಕ್ಷಣೆಗಾಗಿ ಎಸಿಪಿ ಮಹದೇವಪ್ಪ ದಿನೇಶ್​ ಮೇಲೆ ಗುಂಡಿನ ದಾಳಿ ನಡೆಸಿದರು ಎನ್ನಲಾಗಿದೆ. ದಿನೇಶ್‌ನ ಎರಡೂ ಕಾಲುಗಳಿಗೆ ಗುಂಡೇಟು ಬಿದ್ದಿದೆ. (ದಿಗ್ವಿಜಯ ನ್ಯೂಸ್)