ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜೂ. 4ರಂದು ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯುವುದರಿಂದ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಎಂಆರ್‌ಎಸ್ ವೃತ್ತದಿಂದ ಬಿಎಚ್ ರಸ್ತೆ, ವಿದ್ಯಾನಗರ, ಮತ್ತೂರು ಕ್ರಾಸ್‌ವರೆಗೆ ಸಾರ್ವಜನಿಕರ ವಾಹನಗಳು ಓಡಾಟ ನಿರ್ಬಂಧಿಸಲಾಗಿದೆ.
ಸಹ್ಯಾದ್ರಿ ಕಾಲೇಜಿನ ಸುತ್ತ 100 ಮೀಟರ್ ಅಂತರದಲ್ಲಿ ಎಲ್ಲ ವಾಹನಗಳ ಸಂಚಾರ ಮತ್ತು ನಿಲುಗಡೆ ನಿಷೇಧಿಸಲಾಗಿದೆ. ಬೆಂಗಳೂರು, ಭದ್ರಾವತಿ, ಎನ್‌ಆರ್ ಪುರ ಕಡೆಯಿಂದ ಬರುವ ಮತ್ತು ಆ ಮಾರ್ಗಕ್ಕೆ ತೆರಳುವ ಎಲ್ಲ ವಾಹನಗಳು ಬೈಪಾಸ್ ಮೂಲಕ ಬಸ್ ನಿಲ್ದಾಣ ತಲುಪಬೇಕು. ಚಿತ್ರದುರ್ಗ, ಹೊಳೆಹೊನ್ನೂರು ಕಡೆಯಿಂದ ಬರುವ ಮತ್ತು ಆ ಭಾಗಕ್ಕೆ ತೆರಳುವ ಎಲ್ಲ ಭಾರಿ ವಾಹನ ಮತ್ತು ಬಸ್‌ಗಳು ಬಿಎಚ್ ರಸ್ತೆ ಮಾರ್ಗವಾಗಿ ಸಂಚರಿಸಬೇಕು.
ಹೊನ್ನಾಳಿ, ದಾವಣಗೆರೆಯಿಂದ ಬರುವ ಎಲ್ಲ ಭಾರಿ ವಾಹನ ವಿನೋಬನಗರ 100 ಅಡಿ ರಸ್ತೆ ಮೂಲಕ ಸಂಚರಿಸಬೇಕು. ವಿನೋಬನಗರ ಮಾರ್ಗವಾಗಿ ಹೋಗುವುದು. ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ತೆರಳುವ ಬಸ್‌ಗಳು ಎಎ ಸರ್ಕಲ್, ಗೋಪಿ ವೃತ್ತ, ಮಹಾವೀರ ವೃತ್ತ, ಕೆಇಬಿ ವೃತ್ತ ಮುಖಾಂತರವಾಗಿ ಹೋಗಬೇಕು.
ಈ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಅಂಬುಲೆನ್ಸ್ ಹಾಗೂ ಮೂಲಸೌಕರ್ಯ ಒದಗಿಸುವ ವಾಹನಗಳಿಗೆ ಅನ್ವಯಿಸುವುದಿಲ್ಲ.
ಎಲ್ಲೆಲ್ಲಿ ಪಾರ್ಕಿಂಗ್?: ಮತ ಎಣಿಕೆ ಕೇಂದ್ರದೊಳಕ್ಕೆ ತೆರಳುವ ಏಜೆಂಟರು ಮತ್ತು ಎಲ್ಲ ಇಲಾಖೆ ಅಧಿಕಾರಿಗಳ ವಾಹನಗಳ ನಿಲುಗಡೆಗೆ ಸಹ್ಯಾದ್ರಿ ಸೈನ್ಸ್ ಕಾಲೇಜು ಎದುರು, ವಜ್ರ ಮಹೋತ್ಸವ ಕಟ್ಟಡದ ಎದುರು ಮತ್ತು ಬಿಎಚ್ ರಸ್ತೆಗೆ ಹೊಂದಿಕೊಂಡಂತಿರುವ ಮ್ಯಾಚ್ ಫ್ಯಾಕ್ಟರಿಗೆ ಸೇರಿದ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಂಆರ್‌ಎಸ್ ವೃತ್ತದ ಕೆಇಬಿ ಸಮುದಾಯ ಭವನದ ಹಿಂಭಾಗ, ಎಂಆರ್‌ಎಸ್ ವೃತ್ತದಿಂದ ಎನ್‌ಆರ್ ಪುರ ರಸ್ತೆಯ ಎಡಭಾಗ, ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂ ಬಳಿ ಸಾರ್ವಜನಿಕರ ಕಾರು ಮತ್ತು ದ್ವಿಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.