ರಸ್ತೆ ದುರಸ್ತಿಯಾಗದಿದ್ದರೆ ಮತದಾನ ಬಹಿಷ್ಕಾರ

ಚಿಕ್ಕಮಗಳೂರು: ಗುಂಡಿ, ತಗ್ಗು ಬಿದ್ದು ಹಾಳಾಗಿರುವ ರಸ್ತೆ ದುರಸ್ತಿಗೆ ಒತ್ತಾಯಿಸಿ ರಸ್ತೆತಡೆ ನಡೆಸಿದ ನಗರ ಹೊರವಲಯದ ಲಕ್ಷ್ಮೀಪುರ, ಉಂಡಾಡಿಹಳ್ಳಿ ಹಾಗೂ ಅಂಬಳೆ ಗ್ರಾಮಸ್ಥರು, ಮತದಾನ ಬಹಿಷ್ಕಾರ ಮಾಡುವುದಾಗಿ ಎಚ್ಚರಿಸಿದ್ದಾರೆ.

ಹಿರೇಮಗಳೂರಿನಿಂದ ಅಂಬಳೆಗೆ ಹೋಗುವ ಮಾರ್ಗದ ರೈಲು ಹಳಿ ಮೇಲು ಸೇತುವೆ ಮೇಲೆ ಗುರುವಾರ ರಸ್ತೆತಡೆ ನಡೆಸಿದ ಗ್ರಾಮಸ್ಥರು ಅಧಿಕಾರಿಗಳು, ಇಂಜಿನಿಯರ್ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಿರೇಮಗಳೂರಿನಿಂದ ಅಂಬಳೆಗೆ ಹೋಗುವ 4 ಕಿಮೀ ರಸ್ತೆ ಹಾಳಾಗಿ ಏಳೆಂಟು ವರ್ಷವಾಗಿದೆ. ಹದಿನೈದು ವರ್ಷದ ಹಿಂದೆ ಈ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು. ಅಲ್ಲಿಂದ ಮೂರು ಬಾರಿ ದುರಸ್ತಿ ಮಾಡಲಾಗಿದೆ. ಆದರೆ, ಕಳೆದ ಐದು ವರ್ಷದಿಂದ ಗುಂಡಿ ತಗ್ಗು ಬಿದ್ದು ಸಂಚಾರ ಯಾತನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿನಿತ್ಯ ಸಂಚರಿಸುವ ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಟೋ ಬಿದ್ದು ಮೂವರು ಮಹಿಳೆಯರು ಗಾಯಗೊಂಡಿದ್ದಾರೆ. ಈ ರಸ್ತೆಯಲ್ಲಿ ಸಂಚಾರವೆಂಬುದು ನರಕ ಸದೃಶವಾಗಿದೆ. ಹಲವು ಕಡೆ ಬೈಕ್​ಗಳನ್ನು ನಿಲ್ಲಿಸಿ ತಳ್ಳಿಕೊಂಡು ಹೋಗಬೇಕು. ಆಟೋದವರು ಈರಸ್ತೆಗೆ ಬರಲು ಹಿಂದೇಟು ಹಾಕುತ್ತಾರೆ. ರಸ್ತೆ ಸರಿ ಇಲ್ಲದೆ ನಗರ ಸಾರಿಗೆ ಬಸ್​ಗಳು ಸರಿಯಾಗಿ ಬರುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಿರೇಮಗಳೂರು ಅಂಬಳೆ ಮಧ್ಯ ಭಾಗದಿಂದ ಮೂಡಿಗೆರೆ ಹಾಗೂ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಹಂಚಿಕೆಯಾಗಿದೆ. ಹೀಗಾಗಿ ಎರಡೂ ಕ್ಷೇತ್ರದ ಗಡಿ ಭಾಗವಿರುವ ಲಕ್ಷ್ಮೀಪುರ, ಉಂಡಾಡಿಹಳ್ಳಿ ಹಾಗೂ ಅಂಬಳೆ ಗ್ರಾಮಗಳು ಶಾಪಗ್ರಸ್ತವಾಗಿವೆ. ಎರಡೂ ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಒಂದು ವಾರದೊಳಗೆ ರಸ್ತೆ ದುರಸ್ತಿ ಮಾಡದಿದ್ದರೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಕೋಡಿಹಳ್ಳಿ ನಾಗಯ್ಯ, ಅಂಬಳಿ ರುದ್ರಯ್ಯ, ಸಂತೋಷ್, ನಾಗರಾಜ್, ವಸಂತಕುಮಾರ್, ಹುನುಮಯ್ಯ, ಲೋಕಮ್ಮ ಇತರರು ಇದ್ದರು.