More

    ಕೌಳಿಹಳ್ಳದಲ್ಲಿ ರೊಟ್ಟಿಹಬ್ಬ ಸಂಭ್ರಮ

    ಹನೂರು: ಚಾಮರಾಜನಗರ ಜಿಲ್ಲೆ ಜಾನಪದ ಕಲೆಗಳ ತವರೂರು. ಇದರಲ್ಲಿ ಸೋಲಿಗರ ಪಾತ್ರ ಹಿರಿದು. ಇವರಲ್ಲಿ ಹಲವಾರು ಕಲೆಗಳು ಬೇರೂರಿದ್ದು, ತಮ್ಮದೇ ಆದ ಸಂಪ್ರದಾಯಗಳನ್ನು ಇದುವರೆಗೂ ಆಚರಣೆ ಮಾಡುತ್ತ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸೋಮವಾರ ಹನೂರು ತಾಲೂಕಿನ ಕೌಳಿಹಳ್ಳ ಗ್ರಾಮದ ಸೋಲಿಗರು ರೊಟ್ಟಿಹಬ್ಬವನ್ನು ಆಚರಿಸಲಾಗಿದೆ.
    ಹನೂರು ಭಾಗದಲ್ಲಿನ ಸೋಲಿಗರು ತಮ್ಮ ಪೋಡುಗಳಲ್ಲಿ ಸುಗ್ಗಿಯ ಸಮಯದಲ್ಲಿ ಆಚರಿಸುವ ಈ ರೊಟ್ಟಿಹಬ್ಬವು ತನ್ನದೇ ಆದ ಹಿನ್ನೆಲೆ ಹೊಂದಿದೆ.

    ಕಾಡನ್ನೇ ದೇವರೆಂದು ನಂಬಿರುವ ಗಿರಿಜನರು ಪ್ರತಿವರ್ಷ ಉತ್ತಮ ಮಳೆ ಬೆಳೆಯಾಗುವುದರ ಮೂಲಕ ಸಮೃದ್ಧಿ ಫಲಿಸಲಿ ಎಂಬ ನಂಬಿಕೆಯಿಂದ ದೇವರ ಹೆಸರಿನಲ್ಲಿ ವರ್ಷದಲ್ಲಿ ಬೆಳೆಯುವ ರಾಗಿಯನ್ನು ಸುಗ್ಗಿಯ ಕಾಲದಲ್ಲಿ ಆಚರಿಸುವ ರೊಟ್ಟಿಹಬ್ಬಕ್ಕೆ ಮೊದಲು ಎತ್ತಿಟ್ಟು, ಸೋಲಿಗರ ಸಂಪ್ರದಾಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.
    ಹಬ್ಬದ ಸಂದರ್ಭದಲ್ಲಿ ಆ ರಾಗಿಯನ್ನು ರಾಗಿಕಲ್ಲಿನಿಂದ ಬೀಸಿ ಹಿಟ್ಟನ್ನು ತಯಾರಿಸಲಾಗುತ್ತದೆ. ಔಷಧದ ಎಲೆಗಳಾದ ಕೂಗೆಲೆ, ಕಲ್ಲುಬಾಳೆ ಎಲೆ ಹಾಗೂ ಮುತ್ತುಗದ ಎಲೆಗಳಿಗೆ ರಾಗಿಹಿಟ್ಟನ್ನು ಹಾಕಿ ಬೆಂಕಿಯ ಕೆಂಡದಲ್ಲಿ ಬೇಯಿಸಿ ರೊಟ್ಟಿಯನ್ನು ತಯಾರಿಸಿ, ರೊಟ್ಟಿ ಹಬ್ಬವನ್ನು ಆಚರಿಸಲಾಗುತ್ತದೆ.

    ಸೋಮವಾರ ಕೌಳಿಹಳ್ಳ ಗ್ರಾಮದ ಗಿರಿಜನರು ರೊಟ್ಟಿ ಹಬ್ಬವನ್ನು ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿನ ಮಹದೇಶ್ವರ ದೇಗುಲದಲ್ಲಿ ಆಚರಿಸಿದರು. ಹಬ್ಬದ ಹಿನ್ನೆಲೆ ದೇಗುಲವನ್ನು ವಿವಿಧ ಪುಷ್ಪ ಹಾಗೂ ಎಲೆಗಳಿಂದ ಸಿಂಗಾರ ಮಾಡಲಾಗಿತ್ತು. ಬೆಳಗ್ಗೆ ಸ್ವಾಮಿಗೆ ಪೂಜೆ ನೆರವೇರಿಸಿ ಮರ, ಗಿಡ ಹಾಗೂ ನೀರಿಗೂ ಪೂಜೆ ಸಲ್ಲಿಸಿದರು. ಬಳಿಕ ರಾಗಿರೊಟ್ಟಿ, ಅವರೆಕಾಳು ಗೊಜ್ಜು ಹಾಗೂ ಕುಂಬಳಕಾಯಿ ಪಲ್ಯ ತಯಾರಿಸಿ ದೇವರಿಗೆ ಎಡೆ ಇಟ್ಟು ಪೂಜೆ ಸಲ್ಲಿಸಿದ ನಂತರ ಸಹಭೋಜನಾ ನಡೆಸುವುದರ ಮೂಲಕ ರೊಟ್ಟಿಹಬ್ಬವನ್ನು ಸಂಪ್ರದಾಯದಂತೆ ವಿಜೃಂಭಣೆಯಿಂದ ಆಚರಿಸಲಾಯಿತು.
    ಹನೂರು ಭಾಗದ ವಿವಿಧ ಪೋಡುಗಳಲ್ಲಿನ ಗಿರಿಜನರು ಆಗಮಿಸಿ ದೇವರ ದರ್ಶನ ಪಡೆದು ಭೋಜನಾ ಸವಿದರು.

    ರೊಟ್ಟಿಹಬ್ಬವೂ ನಮ್ಮ ಸಮುದಾಯದ ಪೋಡುಗಳಲ್ಲಿ ಆಚರಿಸುವ ವಿಶಿಷ್ಟ ಹಬ್ಬವಾಗಿದ್ದು, ಈ ಸಂಪ್ರದಾಯವನ್ನು ಹಿಂದಿನಿಂದಲೂ ಮುಂದುವರಿಸಿಕೊಂಡು ಬರಲಾಗಿದೆ. ಈ ಹಬ್ಬವನ್ನು ಪೋಡಿನ ಎಲ್ಲರ ಸಹಭಾಗಿತ್ವದಲ್ಲಿ ಒಗ್ಗಟ್ಟಿನಿಂದ ಬೆರೆತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ನಮ್ಮ ನೆಂಟರಿಷ್ಟರನ್ನು ಕರೆಯಲಾಗುತ್ತದೆ. ಹಾಗಾಗಿ ರೊಟ್ಟಿಹಬ್ಬ ಸೋಲಿಗರ ಪೋಡುಗಳಲ್ಲಿ ತನ್ನದೇ ಮಹತ್ವವನ್ನು ಪಡೆದುಕೊಂಡಿದೆ.
    ಮಾದೇಗೌಡ ಕೌಳಿಹಳ್ಳ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts