ಕ್ರೀಡಾಧಾರಿತ ಜಡದಲ್ಲಿ ರೋಶಿನಿ

ಬೆಂಗಳೂರು: ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ‘ಜಡ’ ಚಿತ್ರದಲ್ಲಿ ನಾಯಕ ಕದೀರ್​ಗೆ ರೋಶಿನಿ ಪ್ರಕಾಶ್ ಜೋಡಿಯಾಗಿದ್ದಾರೆ. ಫುಟ್​ಬಾಲ್​ಗೆ ಸಂಬಂಧಿಸಿದ ಸಿನಿಮಾ ಇದಾಗಿದ್ದು, ಫುಟ್​ಬಾಲ್ ಆಟಗಾರನಾಗಿ ಕದೀರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು, ‘ವಿಕ್ರಮ್ ವೇದ’ ಚಿತ್ರದಲ್ಲಿ ಕೆಲಸ ಮಾಡಿದ ಕೆಲ ತಂತ್ರಜ್ಞರು ‘ಜಡ’ ಚಿತ್ರಕ್ಕೆ ಕೆಲಸ ಮಾಡುತ್ತಿದ್ದಾರೆ. ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಕುಮಾರನ್, ಇದೀಗ ‘ಜಡ’ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

‘ವಿಕ್ರಮ್ ವೇದ ಹಿಟ್ ಸಿನಿಮಾಗಳಲ್ಲೊಂದು. ಆ ಚಿತ್ರದಲ್ಲಿ ಕೆಲಸ ಮಾಡಿದ್ದ ತಂಡದೊಂದಿಗೆ ಕೆಲಸ ಮಾಡಿದ್ದು, ಖುಷಿ ನೀಡಿದೆ. ಇದೊಂದು ಕ್ರೀಡಾಧಾರಿತ ಸಿನಿಮಾ. ಪ್ರೀತಿ-ಪ್ರೇಮದ ಅಂಶಗಳೂ ಚಿತ್ರದ ಹೈಲೈಟ್. ಕ್ರಿಶ್ಚಿಯನ್ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಪಾತ್ರದ ತಯಾರಿಗಾಗಿ ಹಲವು ಚರ್ಚ್ ಮತ್ತು ಸಿನಿಮಾಗಳ ಮೊರೆಹೋಗಿದ್ದೆ. ಐದಾರು ದಿನ ಚಿತ್ರೀಕರಿಸಿದರೆ ಶೂಟಿಂಗ್ ಪೂರ್ಣಗೊಳ್ಳಲಿದೆ. ಮಾರ್ಚ್ ಅಥವಾ ಏಪ್ರಿಲ್​ನಲ್ಲಿ ಸಿನಿಮಾ ತೆರೆಕಾಣಲಿದೆ’ ಎನ್ನುತ್ತಾರೆ ರೋಶಿನಿ. ಈಗಾಗಲೇ ಕನ್ನಡದಲ್ಲಿ ನಟ ಪುನೀತ್ ರಾಜ್​ಕುಮಾರ್ ಅವರ ಪಿಆರ್​ಕೆ ಪ್ರೊಡಕ್ಷನ್​ನಲ್ಲಿ ಸಿದ್ಧವಾಗಿರುವ ‘ಕವಲುದಾರಿ’ ಚಿತ್ರದಲ್ಲಿ ರಿಷಿಗೆ ಜೋಡಿಯಾಗಿ ರೋಶಿನಿ ನಟಿಸಿದ್ದು, ಚಿತ್ರ ಬಿಡುಗಡೆ ಸಜ್ಜಾಗಿದೆ.