ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ವಿರುದ್ಧ ವಾಗ್ದಾಳಿ: ಶಾಸಕ ರೋಷನ್​ ಬೇಗ್​ಗೆ ಕಾಂಗ್ರೆಸ್ ನೋಟಿಸ್

ಬೆಂಗಳೂರು: ನಗರದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರೋಷನ್​ ಬೇಗ್​ ಅವರಿಗೆ ಕಾಂಗ್ರೆಸ್​ ಹೈಕಮಾಂಡ್​ ಶೋಕಾಸ್​ ನೋಟಿಸ್​ ಜಾರಿ ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನ ಕಳಪೆ ಪ್ರದರ್ಶನ ಸಾಧ್ಯತೆ ಹಿನ್ನೆಲೆಯಲ್ಲಿ ಆಕ್ರೋಶಿತಗೊಂಡಿರುವ ರೋಷನ್​ ಬೇಗ್​, ಪಕ್ಷದ ಕಳಪೆ ಪ್ರದರ್ಶನಕ್ಕೆ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​, ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಅವರ ಕಳಪೆ ನಾಯಕತ್ವ ಹಾಗೂ ಸಿದ್ದರಾಮಯ್ಯ ಅವರ ದುರಹಂಕಾರ ಕಾರಣ ಎಂದು ವಾಗ್ದಾಳಿ ನಡೆಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್​ ವೈ ಘೋರ್ಪಡೆ ಅವರು ರೋಷನ್​ ಬೇಗ್​ ಅವರಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಿದ್ದಾರೆ. ಇನ್ನೊಂದು ವಾರದಲ್ಲಿ ಇದಕ್ಕೆ ಉತ್ತರ ನೀಡುವಂತೆ ನೋಟಿಸ್​ನಲ್ಲಿ ಸೂಚಿಸಿದ್ದಾರೆ.

ನೋಟಿಸ್​ ಸಿಕ್ಕಿದೆ: ಕೆಪಿಸಿಸಿ ತಮಗೆ ನೀಡಿರುವ ಶೋಕಾಸ್​ ನೋಟಿಸ್​ ತಲುಪಿರುವುದನ್ನು ರೋಷನ್​ ಬೇಗ್​ ಖಚಿತಪಡಿಸಿದ್ದಾರೆ. ತಾವು ಯಾರ ವಿರುದ್ಧ ವಾಗ್ದಾಳಿ ನಡೆಸಿದ್ದರೋ, ಅದೇ ವ್ಯಕ್ತಿಗಳ ಸೂಚನೆ ಮೇರೆಗೆ ನೋಟಿಸ್​ ಅನ್ನು ರವಾನಿಸಿರುವ ಹಿನ್ನೆಲೆಯಲ್ಲಿ ಅದನ್ನು ಓದುವ ಗೋಜಿಗೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್​)