ತಾಕತ್ತಿದ್ದರೆ ಕಾಂಗ್ರೆಸ್​ ಬಿಟ್ಟು ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲಲಿ: ರೋಷನ್​ ಬೇಗ್​ಗೆ ರಿಜ್ವಾನ್​ ಅರ್ಷದ್​ ಸವಾಲು

ಬೆಂಗಳೂರು: ರೋಷನ್​ ಬೇಗ್​ ಒಬ್ಬ ಅವಕಾಶವಾದಿ ರಾಜಕಾರಣಿ. ಅವರಿಗೆ ತಾಕತ್ತಿದ್ದರೆ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಯಿಂದ ಸ್ಪರ್ಧಿಸಿ ಗೆಲ್ಲಲಿ ಎಂದು ಬೆಂಗಳೂರು ಸೆಂಟ್ರಲ್​ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ರಿಜ್ವಾನ್​ ಅರ್ಷದ್​ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತಿತರರ ವಿರುದ್ಧ ರೋಷನ್​ ಬೇಗ್​ ಮಂಗಳವಾರ ಹರಿಹಾಯ್ದಿರುವ ಬಗ್ಗೆ ಅವರು ಪ್ರತಿಕ್ರಿಯಿಸಿದರು. ಕಳೆದೊಂದು ದಶಕದಲ್ಲಿ ಕಾಂಗ್ರೆಸ್​ ಅವರನ್ನು ನಾಲ್ಕು ಬಾರಿ ಶಾಸಕರನ್ನಾಗಿ ಮಾಡಿದೆ. ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಹಲವು ಸ್ಥಾನಮಾನಗಳನ್ನು ನೀಡಿದೆ. ಆದರೂ ಪಕ್ಷ ಅವರಿಗೆ ಅನ್ಯಾಯ ಮಾಡಿದೆ ಎಂದಾದರೆ, ಶಾಸಕ ಸ್ಥಾನ ತ್ಯಜಿಸಿ, ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲಿ. ಏನಾಗುತ್ತದೆ ನೋಡೋಣ ಎಂದರು.

ಪಕ್ಷದ ಮುಖಂಡರನ್ನು ಹೀಯಾಳಿಸಲು ಅವರು ಬಳಸಿರುವ ಪದಗಳನ್ನು ನೋಡಿದಾಗ ಅವರು ಯಾವ ಮಟ್ಟದವರು ಎಂಬುದು ಸ್ಪಷ್ಟವಾಗುತ್ತದೆ. ಅವರ ಹಿನ್ನೆಲೆ ಏನು ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಸಾರ್ವಜನಿಕ ಜೀವನದಲ್ಲಿರುವವರು ಇಂಥ ಭಾಷೆಗಳನ್ನು ಬಳಸುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರು ನನಗೆ ಏನು ಸಹಾಯ ಮಾಡಿದರು. ಈ ಬಾರಿ ಎಷ್ಟರಮಟ್ಟಿಗೆ ಸಹಾಯ ಮಾಡಿದರು ಎಂಬುದು ನನಗೆ ಗೊತ್ತಿದೆ. ಹಾಗಾಗಿ ಪಕ್ಷಕ್ಕೆ ಸಲಹೆ ನೀಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು ಹರಿಹಾಯ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *