VIDEO: ಐಎಂಎ ಜ್ಯುವಲರ್ಸ್​ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿ, ಎಸ್​ಐಟಿ ತನಿಖೆ ನಿಧಾನವಾಗಬಹುದು: ರೋಷನ್​ ಬೇಗ್​

ಬೆಂಗಳೂರು: ಐಎಂಎ ಜ್ಯುವಲರ್ಸ್​ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐನಿಂದ ತನಿಖೆ ಮಾಡಿಸಬೇಕು. ಹಾಗೆ ಮಾಡುವುದರಿಂದ ತನಿಖೆ ಚುರುಕಾಗಿ ನಡೆಯುತ್ತದೆ ಎಂದು ಮಾಜಿ ಸಚಿವ ಹಾಗೂ ಶಿವಾಜಿನಗರ ಶಾಸಕ ರೋಷನ್​ ಬೇಗ್​ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪ್ರಕರಣದ ತನಿಖೆಗಾಗಿ ಸರ್ಕಾರ ವಿಶೇಷ ತನಿಖಾ ತಂಡವನ್ನು (ಎಸ್​ಐಟಿ) ರಚಿಸಿದೆ. ಆದರೆ, ಎಸ್​ಐಟಿ ತನಿಖೆ ನಿಧಾನಗತಿಯಲ್ಲಿ ಸಾಗುವುದರಿಂದ ಐಎಂಎಯಲ್ಲಿ ಹೂಡಿಕೆ ಮಾಡಿರುವ ಬಡವರಿಗೆ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ನಾನು ಯಾವುದೇ ಹಣ ಪಡೆದಿಲ್ಲ
ಐಎಂಎ ವಂಚನೆ ಪ್ರಕರಣದಲ್ಲಿ ನನ್ನ ಹೆಸರು ಕೇಳಿಬಂದಿದೆ. ಯಾರೋ ಒಬ್ಬ ವಂಚಕ ಹೇಳಿದ ಎಂದ ಮಾತ್ರಕ್ಕೆ ನಾನು ಅದರಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳುವುದು ತಪ್ಪಾಗುತ್ತದೆ. ನಾನು ಮನ್ಸೂರ್​ ಖಾನ್​ನಿಂದ 5 ಕೋಟಿ ರೂಪಾಯಿ ಪಡೆದಿಲ್ಲ. ನನ್ನ ಆಪ್ತರು ಕೂಡ ಹಣವನ್ನು ತೆಗೆದುಕೊಂಡಿಲ್ಲ ಎಂದು ರೋಷನ್​ ಬೇಗ್​ ಸ್ಪಷ್ಟಪಡಿಸಿದರು.

ಮನ್ಸೂರ್​ನನ್ನು ಹುಡುಕಲು ಅನುಕೂಲವಾಗುತ್ತದೆ
ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವುದರಿಂದ ಮನ್ಸೂರ್​ ಖಾನ್​ನನ್ನು ಬೇಗನೆ ಹುಡುಕಲು ಸಾಧ್ಯವಾಗುತ್ತದೆ. ಇಂಟರ್​ಪೋಲ್​ನೊಂದಿಗೆ ಸಿಬಿಯ ಸಂಪರ್ಕ ಹೊಂದಿರುತ್ತದೆ. ಹಾಗಾಗಿ ಆತನನ್ನು ತ್ವರಿತವಾಗಿ ಹುಡುಕಲು ಅನುಕೂಲವಾಗುತ್ತದೆ ಎಂದು ಹೇಳಿದರು.

ದೆಹಲಿಗೆ ಹೋದಾಗಲೇ ಈ ಹಗರಣ ಬಯಲು
ತಾವು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಪರ ಕೆಲಸ ಮಾಡಲಿಲ್ಲ ಎಂಬ ಕಾರಣಕ್ಕಾಗಿ ತಮ್ಮನ್ನು ಸಿಕ್ಕಿಹಾಕಿಸಲು ಈ ಹಗರಣದಲ್ಲಿ ತಮ್ಮ ಹೆಸರನ್ನು ಎಳೆದು ತರುತ್ತಿರುವುದಾಗಿ ರೋಷನ್​ ಬೇಗ್​ ಆರೋಪಿಸಿದರು.

ನಾನು ಕಾರ್ಯನಿಮಿತ್ತ ದೆಹಲಿಗೆ ತೆರಳಿದ್ದಾಗಲೇ ಈ ಹಗರಣ ಬಯಲುಗೊಂಡಿತು. ಅಲ್ಲದೆ, ಇದರಲ್ಲಿ ನನ್ನ ಹೆಸರನ್ನು ಎಳೆದು ತರಲಾಯಿತು. ಇದೆಲ್ಲವನ್ನೂ ಗಮನಿಸಿದಾಗ ನನ್ನ ತೇಜೋವಧೆ ಮಾಡುವ ಹುನ್ನಾರ ಇದರ ಹಿಂದೆ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. (ದಿಗ್ವಿಜಯ ನ್ಯೂಸ್​)

 

Leave a Reply

Your email address will not be published. Required fields are marked *