ತಾರಸಿ ತೋಟದಲ್ಲಿ ವೈವಿಧ್ಯ ಸಸ್ಯವನ

ಮಹೇಶ ಮನ್ನಯ್ಯನವರಮಠ ಮಹಾಲಿಂಗಪುರ: ಪಟ್ಟಣದ ಡಚ್ ಕಾಲನಿಯಲ್ಲಿ ಮನೆಯೊಂದರ ತಾರಸಿ ಮೇಲೆ ಹಸಿರು ಸಿರಿ ಮೈದೆಳೆದಿದ್ದು, ಸಣ್ಣ ಕೃಷಿ ಕ್ರಾಂತಿ ಮಾಡಲಾಗಿದೆ. ಕಾಂಕ್ರೀಟ್ ಕಟ್ಟಡಗಳ ಮಧ್ಯೆ ಹಸಿರು ಸಸ್ಯವನ ನೋಡುಗರ ಮನಕ್ಕೆ ಮುದ ನೀಡುತ್ತಿದೆ.

ಹನುಮಂತ ಪ್ರಕಾಶ ರಾವಳ ಅವರ ಮನೆಯ ಮೇಲೆ 600 ಚದರ ಅಡಿ ಜಾಗೆಯಲ್ಲಿ 700ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯಕಾಶಿ ಬೆಳೆದುನಿಂತಿದೆ. ಇದಕ್ಕೆ ಸಂಭ್ರಮ ತಾರಸಿ ತೋಟ ಎಂದು ಹೆಸರಿಡಲಾಗಿದೆ. ಡಿಪ್ಲೊಮಾ ಸಿವಿಲ್ ಇಂಜಿನಿಯರಿಂಗ್ ಮುಗಿಸಿರುವ 37 ವರ್ಷ ವಯಸ್ಸಿನ ಹಣಮಂತ ಅವರ ಮಾದರಿ ಕಾರ್ಯ ಎಂಥವರನ್ನೂ ಬೆರಗು ಮೂಡಿಸುತ್ತದೆ.

ಕ್ಯಾನ್, ಬಾಟಲಿ, ಪೈಪ್ ಎಲ್ಲದರಲ್ಲಿಯೂ ವೈವಿಧ್ಯಮಯ ಗಿಡ ಬೆಳೆಸಿದ್ದಾರೆ. ರ್ಯಾಕ್ ಅಳವಡಿಸಿ ಅದರಲ್ಲಿ ಸಸಿಗಳನ್ನು ಇಟ್ಟಿದ್ದಾರೆ. ಸಿಮೆಂಟ್ ಮತ್ತು ಫೈಬರ್ ಕುಂಡ ಬಳಸಿದ್ದಾರೆ. ತಾರಸಿಯಲ್ಲಿ ಅಚ್ಚುಕಟ್ಟಾಗಿ ಜೋಡಿಸಿದ ಅನೇಕ ಗಿಡಗಳು ಫಲ ಹೊತ್ತು ಬಾಗುತ್ತಿವೆ. ತರಕಾರಿ ಬೆಳೆಯಲು ತಾರಸಿಯ ಬದಿ ಗೋಡೆಯಲ್ಲಿ ತೊಟ್ಟಿ ನಿರ್ವಿುಸಿದ್ದಾರೆ. ನೆಲದ ಮೇಲೆ ಪಾಟ್ ಜೋಡಿಸಿದ್ದಾರೆ. ನೀರು ನಿಲ್ಲದಂತೆ ವ್ಯವಸ್ಥೆ ಕಲ್ಪಿಸಿದ್ದಾರೆ. ಹಬ್ಬುವ ಗಿಡಗಳನ್ನು ಹಾಕಿ ಅದಕ್ಕೆ ಬೆಳೆದು ಬಳ್ಳಿಯಂತೆ ಹಬ್ಬಿಕೊಳ್ಳಲು ಸಹಾಯಕ ಆಗುವಂತೆ ಚಪ್ಪರ ನಿರ್ವಿುಸಿದ್ದಾರೆ. ಈ ಭಾಗದಲ್ಲಿ ವಿಶೇಷವಾದ ಡ್ರಾ್ಯಗನ್ ಹಣ್ಣು ಇಲ್ಲಿ ಬೆಳೆಸಲಾಗುತ್ತಿದೆ. ಇಲ್ಲಿ ಬೆಳೆಯುವುದಿಲ್ಲ ಎಂದೇ ತಿಳಿದಿದ್ದ ಅನೇಕ ಗಿಡಗಳನ್ನು ಕೂಡ ಹಣಮಂತ ಅವರು ಯಶಸ್ವಿಯಾಗಿ ಬೆಳೆಸಿದ್ದಾರೆ.

ಹಲವು ಅಪರೂಪದ ಔಷಧ ಗಿಡಗಳು ಇಲ್ಲಿವೆ. ಗಿಡಗಳಿಗೆ ಕೀಟಬಾಧೆ ಕಾಡಿದರೆ ತಮ್ಮದೇ ಆದ ಕ್ರಮದ ಮೂಲಕ ಉಪಚರಿಸುತ್ತಾರೆ. ಬೆಳೆದ ಫಲಗಳನ್ನು ತಾವೇ ಬಳಸಿ ಮಿಕ್ಕಿದ್ದನ್ನು ಗೆಳೆಯರಿಗೆ, ನೆರೆಹೊರೆಯವರಿಗೆ ಉಚಿತವಾಗಿ ಹಂಚುತ್ತಾರೆ. ಈ ತಾರಸಿ ತೋಟ ನಿರ್ವಣಕ್ಕೆ ಹಣಮಂತ ಅವರು ಸುಮಾರು 4 ಲಕ್ಷ ರೂ. ವ್ಯಯಿಸಿದ್ದಾರೆ. ನಾಲ್ಕು ವರ್ಷಗಳಿಂದ ನಿರಂತರ ಶ್ರಮ ಹಾಕಿದ್ದಾರೆ. ಇಲ್ಲಿನ ಗಿಡಗಳಿಗೆ ಬೇಕಾಗುವ ಸಾವಯವ ಗೊಬ್ಬರವನ್ನು ಇದೇ ಮಹಡಿ ಮೇಲೆ ಸಿದ್ಧಪಡಿಸಲಾಗುತ್ತದೆ. ಉದುರಿದ ಎಲೆಗಳು, ತರಕಾರಿ ಸಿಪ್ಪೆ, ಗೋಮೂತ್ರ ಸೇರಿ ಹಸಿ ತ್ಯಾಜ್ಯವನ್ನು ಪ್ಲಾಸ್ಟಿಕ್ ಡ್ರಮ್ಮಿನೊಳಗೆ ಹಾಕುತ್ತಾರೆ. ಡ್ರಮ್ಮಿನ ಬುಡದಲ್ಲಿರುವ ಕೊಳವೆಯಲ್ಲಿ ಜಿನುಗುವ ನೀರು ಹಾಗೂ ಕೆಲ ವಾರಗಳಲ್ಲಿ ಗೊಬ್ಬರ ಸಿದ್ಧವಾಗುತ್ತದೆ. ಗಿಡಗಳಿಗೆ ನೀರು ಹನಿಸಲು ಪತ್ನಿ, ಮಕ್ಕಳು ಸೇರಿ ಕುಟುಂಬ ಸದಸ್ಯರೆಲ್ಲ ನೆರವಾಗುತ್ತಾರೆ. ಎರೆಹುಳು ಗೊಬ್ಬರ, ಮರಳು ಮಿಶ್ರಣ ಹೊಂದಿರುವ ಮಣ್ಣನ್ನು ಸಸಿಗಳಿಗೆ ಬಳಸುತ್ತಾರೆ.

ಹಣಮಂತ ಅವರ ಈ ತೋಟ ನೋಡಲು ಬರುವ ಗಣ್ಯರು ಇವರ ಬೆನ್ನುತಟ್ಟಿದ್ದಾರೆ. ಆದರೆ ಇದ್ಯಾವುದಕ್ಕೂ ಬೀಗದೆ ತಮ್ಮ ಪಾಡಿಗೆ ತಾವಿದ್ದು ಕೃಷಿ ಕಾಯಕ ಮುಂದುವರಿಸಿದ್ದಾರೆ.

ಪ್ರತಿ ಗಿಡಗಳ ಕುರಿತು ಹಣಮಂತ ಅವರು ವಿವರಣೆ ನೀಡುತ್ತಾರೆ. ಅಂತರ್ಜಾಲ ತಾಣದಲ್ಲಿ ಗಿಡಗಳ ಮಾಹಿತಿ ಪಡೆದು ಅಧ್ಯಯನ ಮಾಡು ತ್ತಾರೆ. ಹೀಗಾಗಿ ಅವುಗಳ ಸಮರ್ಪಕ ಆರೈಕೆ ಸಾಧ್ಯವಾಗಿದೆ. ಬೀಜದ ಉಂಡೆಯನ್ನು ಸಿದ್ಧಗೊಳಿಸುತ್ತಿದ್ದಾರೆ. ಅವರ ಸಂಪರ್ಕಕ್ಕೆ ಮೊ.9538338838 ಕರೆ ಮಾಡಬಹುದು.

ತಾರಸಿಯಲ್ಲಿ ಏನೇನಿವೆ?: ಬೋನ್ಸಾಯ್ ಗಿಡಗಳು, ಹೂವಿನ ಗಿಡಗಳು, ಕ್ಯಾಕ್ಟಸ್, ಸಕ್ಯೂಲೆಂಟ್ ಗಿಡಗಳು, ಅಲಂಕಾರಿಕ ಸಸ್ಯಗಳು, ಹ್ಯಾಗಿಂಗ್ ಗಿಡಗಳು, ತರಕಾರಿ ಸಸ್ಯಗಳು, ಹಣ್ಣಿನ ಗಿಡಗಳು, ಮಣ್ಣಿನ ಕಲಾಕೃತಿಗಳು, ಮನಿ ಪ್ಲಾಂಟ್, ಪೆಲಿಕಾನ್ ಪ್ಲಾವರ್, ಅಲೋವೆರಾ, ಸೆಂಟಪ್ ಬಾಟಲ್, ಆರ್ಕಿಡ್, ಜತ್ರೋಪಾ, ಅಲಂಕಾರಿಕ ಬಿದಿರು ಹಾಗೂ ಔಷಧಿಯ ಸಸ್ಯಗಳು ತಾರಸಿ ಮೇಲಿವೆ.

ಚಿಕ್ಕವನಿದ್ದಾಗಲೇ ಗಿಡಗಳನ್ನು ಬೆಳೆಸುವ ಆಸಕ್ತಿ ಇತ್ತು. ಎಲ್ಲೇ ಪ್ರವಾಸಕ್ಕೆ ಹೋದರೂ ಬರುವಾಗ ಎರಡ್ಮೂರು ಸಸಿಗಳನ್ನು ತರುತ್ತೇನೆ. ತಾರಸಿ ಮೇಲೆ ಗಿಡಗಳನ್ನು ಹಚ್ಚಿದಾಗ ಆಗುವ ಖುಷಿಯೇ ಬೇರೆ. ತಾರಸಿ ತೋಟ ಮಾಡುವುದರಿಂದ ಮನೆಯ ಉಷ್ಣಾಂಶ ಕಡಿಮೆ ಆಗುತ್ತದೆ. ಕುಟುಂಬಕ್ಕೆ ಆರೋಗ್ಯಕರ ಆಹಾರ ಜತೆಗೆ ಆರೋಗ್ಯಕರ ವಾತಾವರಣವೂ ಸಿಗುತ್ತದೆ.

| ಹಣಮಂತ ರಾವಳ