ಬ್ಯಾಂಕ್​ನ ಬಿಜಿನೆಸ್ ಕರೆಸ್ಪಾಂಡೆನ್ಸ್ ವಂಚನೆ

ಬಸವನಬಾಗೇವಾಡಿ: ತಾಲೂಕಿನ ರೋಣಿಹಾಳ ಗ್ರಾಮದ ಸಿಂಡಿಕೇಟ್ ಬ್ಯಾಂಕ್ ಬಿಜಿನೆಸ್ ಕರೆಸ್ಪಾಂಡೆನ್ಸ್ ಭೀಮಪ್ಪ ಶಿವಪ್ಪ ತೆಲಗಿ ಎಂಬಾತ ಗ್ರಾಹಕರ ಹಣವನ್ನು ಅನಧಿಕೃತವಾಗಿ ತನ್ನ ಹಾಗೂ ಸ್ನೇಹಿತರ ಖಾತೆಗೆ ವರ್ಗಾವಣೆ ಮಾಡಿ ವಂಚಿಸಿದ್ದಾರೆ ಎಂದು ಗ್ರಾಹಕರು ಆರೋಪಿಸಿ ಬ್ಯಾಂಕ್ ಮುಂಭಾಗದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕುಬಕಡ್ಡಿ ಗ್ರಾಮದ ಭೀಮಪ್ಪ ತೆಲಗಿ ಸಿಂಡಿಕೇಟ್ ಬ್ಯಾಂಕ್​ನ ಬಿಜಿನೆಸ್ ಕರೆಸ್ಪಾಂಡೆನ್ಸ್​ನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕುಬಕಡ್ಡಿ ಗ್ರಾಮದಲ್ಲಿ ಗ್ರಾಹಕರಿಗೆ ಅನುಕೂಲ ಕಲ್ಪಿಸುವ, ಬ್ಯಾಂಕ್ ವಹಿವಾಟಿನಲ್ಲಿ ಪರಿಣಾಮಕಾರಿ ಬದಲಾವಣೆ ತರುವ ನಿಟ್ಟಿನಲ್ಲಿ ಠೇವಣಿ, ಉಳಿತಾಯ ಖಾತೆ ಸೇರಿ ಇತ್ಯಾದಿ ಹಣಕಾಸು ವ್ಯವಹಾರದ ಜವಾಬ್ದಾರಿ ನೀಡಲಾಗಿತ್ತು.

ಆದರೆ, ಆತನು ಕೆಲವರ ಖಾತೆ ಹಣವನ್ನು ತನ್ನ ಖಾತೆಗೆ ಇನ್ನುಳಿದ ಕೆಲವು ಖಾತೆಗಳಲ್ಲಿನ ಹಣವನ್ನು ತನ್ನ ಸ್ನೇಹಿತರ ಖಾತೆಗೆ ಅನಧಿಕೃತವಾಗಿ ವರ್ಗಾವಣೆ ಮಾಡುವ ಮುಖಾಂತರ ಗ್ರಾಹಕರ ಖಾತೆಯಲ್ಲಿನ ಹಣ ಖಾಲಿ ಮಾಡಿ ಕೋಟ್ಯಂತರ ರೂ. ವಂಚನೆ ಮಾಡಿದ್ದಾರೆ ಎಂದು ಗ್ರಾಹಕರು ಆರೋಪಿಸಿದರು.

ಗ್ರಾಹಕ ಶ್ರೀಶೈಲ ನಿಡೋಣಿ ಮಾತನಾಡಿ, ನಮ್ಮ ಸಂಬಂಧಿಕಾರದ ಮೇಟಿ ಕುಟುಂಬದ ಸದಸ್ಯರ ಹೆಸರಲ್ಲಿ ನಾಲ್ಕು ಖಾತೆಗಳಿದ್ದು, 11 ಲಕ್ಷ ಠೇವಣಿ ಮಾಡಿದಾಗ ಬಾಂಡ್ ವಿತರಣೆ ಮಾಡಿದ್ದಾರೆ. ಆದರೆ, ವಂಚನೆ ಕುರಿತು ಪರಿಶೀಲಿಸಿದಾಗ 11 ಲಕ್ಷ ರೂ. ಖಾಲಿಯಾಗಿದೆ. ಅಲ್ಲದೆ, ಚಂದಪ್ಪ ಮೇಟಿ ಅವರ ಖಾತೆಯಲ್ಲಿನ 2 ಲಕ್ಷದ 60 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ನಾವು ಬ್ಯಾಂಕ್​ಗೆ ಬಂದು ವ್ಯವಹಾರ ಮಾಡಿದರೆ ನಿಮ್ಮೂರಲ್ಲಿ ಬ್ಯಾಂಕ್ ಸಿಬ್ಬಂದಿ ಇದ್ದಾರೆ, ಅವರೊಂದಿಗೆ ವ್ಯವಹಾರ ಮಾಡಬೇಕೆಂದು ಹೇಳುತ್ತಿದ್ದರು. ಇದರಲ್ಲಿ ಬ್ಯಾಂಕ್ ಸಿಬ್ಬಂದಿ ಕೈವಾಡವಿದೆ ಎಂದು ದೂರಿದರು.

ಮತ್ತೊಬ್ಬ ಗ್ರಾಹಕ ಸಂಗೊಂಡ ಬಿರಾದಾರ ಖಾತೆಯಲ್ಲಿ 3 ಲಕ್ಷ 20 ಸಾವಿರ, ಸುನಂದಾ ಚಲವಾದಿ ಖಾತೆಯ 80 ಸಾವಿರ, ಬಾಗವ್ವ ಮೇಟಿ 1 ಲಕ್ಷ 90 ಸಾವಿರ, ಲಕ್ಷ್ಮಣ ಬೀಳಗಿ ಅವರ ಖಾತೆಯಿಂದ 1 ಲಕ್ಷ, ಚಂದ್ರವ್ವ ವಂದಾಲ ಖಾತೆಯಿಂದ 1 ಲಕ್ಷ 80 ಸಾವಿರ ಸೇರಿ ವಿವಿಧ ಖಾತೆಯಲ್ಲಿನ ಹಣವನ್ನು ತಮ್ಮ ಅನುಮತಿ ಇಲ್ಲದೆ ಅನಧಿಕೃತವಾಗಿ ಭೀಮಪ್ಪ ತೆಲಗಿ ತನ್ನ ಮತ್ತು ಸ್ನೇಹಿತರ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಗ್ರಾಹಕರು ಹೇಳಿದರು.

ಕೆಲವರ ಹೆಸರಲ್ಲಿ ಖಾತೆ ತೆರೆದು ಪಾಸ್ ಬುಕ್, ಠೇವಣಿ ಬಾಂಡ್ ನೀಡಿದ್ದರೂ ಬ್ಯಾಂಕ್ ಸಿಬ್ಬಂದಿ ಕಾಗದ ಪತ್ರಗಳು ನಕಲಿಯಾಗಿವೆ. ಇಂತಹ ಹೆಸರಲ್ಲಿ ಹಣ ಜಮೆಯಿಲ್ಲ. ಖಾತೆಯೂ ಇಲ್ಲ ಎನ್ನುತ್ತಿದ್ದಾರೆ ಎಂದು ಸಾಹೇಬತಿ ಜಾಗೀರದಾರ ಮತ್ತು ಹಲವು ಗ್ರಾಹಕರು ಅಳಲು ತೋಡಿಕೊಂಡರು.

ಸ್ಥಳಕ್ಕೆ ಆಗಮಿಸಿದ ಸಿಪಿಐ ಮಹಾದೇವ ಶಿರಹಟ್ಟಿ, ಕೊಲ್ಹಾರ ಪಿಎಸ್​ಐ ವಸಂತ ಬಂಡಗಾರ, ಗ್ರಾಹಕರು ಶಾಂತಿ ಕಾಪಾಡುವ ಜತೆಗೆ ಸೂಕ್ತ ತನಿಖೆಗೆ ಹಾಗೂ ಸಿಬ್ಬಂದಿ ಕಾರ್ಯನಿರ್ವಹಣೆಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ತಮಗೆ ವಂಚನೆಯಾಗಿದೆ. ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕರು ಒತ್ತಾಯಿಸಿದರು. ಗ್ರಾಹಕರ ಖಾತೆ ಮಾಹಿತಿ ಪರಿಶೀಲನೆಗೆ ಗ್ರಾಹಕರ ಹೆಲ್ಪ್​ಡೆಸ್ಕ್ ತೆರೆದು ಗ್ರಾಹಕರಿಂದ ಅರ್ಜಿ ಸ್ವೀಕರಿಸುವ ಕಾರ್ಯ ನಡೆದಿದೆ.

ಸೂಕ್ತ ಕ್ರಮಕ್ಕೆ ಆಗ್ರಹ

ಕುಬಕಡ್ಡಿ ಗ್ರಾಮದ ಭೀಮಪ್ಪ ತೆಲಗಿ ಅವನಿಗೆ ಸೇರಿದ ಬೈಕ್ ಆ. 28 ರಂದು ಸಂಜೆ ಕೊಲ್ಹಾರ ಬ್ರಿಡ್ಜ್ ಹತ್ತಿರವಿತ್ತು. ಅದರಲ್ಲಿ ಏನೋ ಚೀಟಿ ಬರೆದಿಟ್ಟಿದ್ದಾನೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಕುಬಕಡ್ಡಿ ಗ್ರಾಮದ ಗ್ರಾಹಕರು ಆ.29 ರಂದು ಬ್ಯಾಂಕ್​ಗೆ ಆಗಮಿಸಿ ತಮ್ಮ ಖಾತೆಯಲ್ಲಿ ಹಣದ ಪರೀಕ್ಷಿಸಿದಾಗ ವಂಚನೆ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರವೇ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಹಾರಿವಾಳ, ಮುಖಂಡ ಶಿವಾನಂದ ಬಡಿಗೇರ, ಸದಾನಂದ ಇಂಡಿ ಆಗ್ರಹಿಸಿದ್ದಾರೆ.

ಭೀಮಪ್ಪ ತೆಲಗಿ ಕಾಣೆ

ಭೀಮಪ್ಪ ತೆಲಗಿ ಅವನಿಗೆ ಸೇರಿದ ಬೈಕ್ ಆ. 28ರಂದು ಸಂಜೆ ಕೊಲ್ಹಾರ ಬ್ರಿಡ್ಜ್ ಹತ್ತಿರವಿತ್ತು. ಅದರಲ್ಲಿ ಚೀಟಿ ಬರೆದಿದ್ದಾನೆ ಎನ್ನುವ ಸುದ್ದಿ ಹರಡುತ್ತಿದ್ದಂತೆ ಆತನ ಸಂಬಂಧಿಕರು ಕೊಲ್ಹಾರ ಠಾಣೆಯಲ್ಲಿ ಕಾಣೆಯಾದ ಕುರಿತು ಪ್ರಕರಣ ದಾಖಲಿಸಿದ್ದಾರೆ ಎಂದು ಕೊಲ್ಹಾರ ಪಿಎಸ್​ಐ ವಸಂತ ಬಂಡಗಾರ ತಿಳಿಸಿದ್ದಾರೆ.

ರೋಣಿಹಾಳ ಗ್ರಾಮದ ಸಿಂಡಿಕೇಟ್ ಬ್ಯಾಂಕ್​ನ ಬಿಜಿನೆಸ್ ಕರೆಸ್ಪಾಂಡೆನ್ಸ್ ಭೀಮಪ್ಪ ಶಿವಪ್ಪ ತೆಲಗಿ ವಂಚಿಸಿದ ಕುರಿತು ಗ್ರಾಹಕರು ಪ್ರತಿಭಟಿಸುತ್ತಿದ್ದು, ಹೆಲ್ಪ್​ಡೆಸ್ಕ್ ತೆರೆದು ಗ್ರಾಹಕರು ಕಳೆದುಕೊಂಡ ನಿಖರ ಹಣದ ಮಾಹಿತಿ ಕಲೆ ಹಾಕಲಾಗುತ್ತಿದೆ. ಜತೆಗೆ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿದ್ದು, ಕಾಣೆಯಾದ ಪ್ರಕರಣ ದಾಖಲಾಗಿದೆ. ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

| ಮಹಾದೇವ ಶಿರಹಟ್ಟಿ, ಸಿಪಿಐ ಬಸವನಬಾಗೇವಾಡಿ

ಆರ್​ಬಿಐ ಗೈಡ್​ಲೈನ್ಸ್ ಪ್ರಕಾರ ರೋಣಿಹಾಳ ಗ್ರಾಮದ ಸಿಂಡಿಕೇಟ್ ಬ್ಯಾಂಕ್​ನ ಬಿಜಿನೆಸ್ ಕರೆಸ್ಪಾಂಡೆನ್ಸ್ ಆಗಿ ಭೀಮಪ್ಪ ತೆಲಗಿ ನೇಮಕಾತಿಯಾಗಿತ್ತು. ಇಲ್ಲಿವರೆಗೆ ಪ್ರಾಮಾಣಿಕವಾಗಿ ಜನರ ವಿಶ್ವಾಸ ಗಳಿಸಿದ್ದನು. ಇದೀಗ ವಿಶ್ವಾಸದ್ರೋಹ ಎಸಗಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ.

| ಎಸ್.ಎಸ್. ಹೆಗಡೆ, ಡಿಜಿಎಂ ಸಿಂಡಿಕೇಟ್ ಬ್ಯಾಂಕ್ ವಿಜಯಪುರ